ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿರಂಜನ್ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಸಿನಿಮಾ ಸೆ.25ರಂದು ರಿಲೀಸ್; ಖಳನಟನಾಗಿ ಅನಿವಾಸಿ ಭಾರತೀಯ ಅಭಯ್ ವಸಿಷ್ಠ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿರುವ ʻಸ್ಪಾರ್ಕ್‌ʼ ಚಿತ್ರದಲ್ಲಿ ಅನಿವಾಸಿ ಭಾರತೀಯ ಅಭಯ್ ವಸಿಷ್ಠ ಖಳನಾಯಕನಾಗಿ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ನೆನಪಿರಲಿ ಪ್ರೇಮ್ ಭ್ರಷ್ಟ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹಾಂತೇಶ್ ಹಂದ್ರಾಳ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ನಟ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿರುವ ‘ಸ್ಪಾರ್ಕ್’ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಿರಂಜನ್ ಅವರ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಈ ಸಿನಿಮಾ ಸಂಪೂರ್ಣ ಭಿನ್ನ ಹಾಗೂ ಅತ್ಯುತ್ತಮವಾಗಿ ಮೂಡಿಬಂದಿದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ.

ಇತ್ತೀಚೆಗಷ್ಟೇ ಗದಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಬಿಡುಗಡೆಗೊಂಡಿದ್ದ ಚಿತ್ರದ ಅಧಿಕೃತ ಟ್ರೇಲರ್ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿರುವ ಹೊಸ ಪ್ರತಿಭೆ ಅಭಯ್ ವಸಿಷ್ಠ ಅವರನ್ನು ಪರಿಚಯಿಸಿ, ಚಿತ್ರದ ಹಲವು ಸ್ವಾರಸ್ಯಕರ ವಿವರಗಳನ್ನು ಹಂಚಿಕೊಂಡಿದೆ ಚಿತ್ರತಂಡ.

ಭವಿಷ್ಯದಲ್ಲಿ ಹೀರೋ ಆಗುವೆ

‘ಸ್ಪಾರ್ಕ್’ ಚಿತ್ರವನ್ನು ನಿರ್ಮಿಸಿರುವ ಗರೀಮಾ ಅವಿನಾಶ್ ವಸಿಷ್ಠ ದಂಪತಿಯ ಪುತ್ರನೇ ಈ ಅಭಯ್ ವಸಿಷ್ಠ. ಸ್ಪುರದ್ರೂಪಿ ಯುವಕನಾಗಿದ್ದರೂ ನಾಯಕನಾಗುವ ಬದಲು ಮೊದಲ ಚಿತ್ರದಲ್ಲೇ ಖಳನಟನ ಪಾತ್ರ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಭಯ್, "ನಾನು ವಿದೇಶದಲ್ಲೇ ಹುಟ್ಟಿ ಬೆಳೆದಿದ್ದರಿಂದ ಕನ್ನಡ ಭಾಷೆಯ ಮೇಲೆ ಸಂಪೂರ್ಣ ಹಿಡಿತವಿಲ್ಲ. ಆದರೆ ವಿದೇಶಿ ರಂಗಭೂಮಿಯಲ್ಲಿ ಅಭಿನಯಿಸಿದ ಅನುಭವವಿದೆ. ರಂಗಭೂಮಿ ಹಾಗೂ ಸಿನಿಮಾ ಮಾಧ್ಯಮ ಸಂಪೂರ್ಣ ಭಿನ್ನವಾದವು. ಮುಂದೆ ಕನ್ನಡ ಭಾಷೆ ಹಾಗೂ ಸಿನಿಮಾ ರಂಗದ ಸೂಕ್ಷ್ಮಗಳನ್ನು ಇನ್ನಷ್ಟು ಕಲಿತ ನಂತರ ನಾಯಕನಾಗಿ ನಟಿಸುವ ಕನಸಿದೆ. ಸದ್ಯಕ್ಕೆ ‘ಸ್ಪಾರ್ಕ್’ ಸಿನಿಮಾದಲ್ಲಿ ಸಿಕ್ಕಿರುವ ಖಳನಾಯಕನ ಪಾತ್ರ ಅತ್ಯಂತ ಪ್ರಬಲ ಹಾಗೂ ಆಕರ್ಷಕವಾಗಿದ್ದ ಕಾರಣ ಒಪ್ಪಿಕೊಂಡೆ" ಎಂದು ಸ್ಪಷ್ಟಪಡಿಸಿದರು.

ಎಲ್ಲೂ ಬೋರ್‌ ಆಗಲ್ಲ ಎಂದ ನಿರಂಜನ್

ನಾಯಕ ನಟ ನಿರಂಜನ್ ಸುಧೀಂದ್ರ ಮಾತನಾಡಿ, "ನನಗೆ ಪರದೆಯ ಮೇಲೆ ಎದುರಾಳಿಯಾಗಿ ನಿಲ್ಲಲು ಅಭಯ್ ಅವರ ವ್ಯಕ್ತಿತ್ವ ಹಾಗೂ ಎತ್ತರ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಯಿತು. ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಶ್ರಮಪಟ್ಟು ನಟಿಸುತ್ತಿದ್ದ ಅವರ ಮುಖ ಟೊಮೆಟೊ ಹಣ್ಣಿನಂತೆ ಕೆಂಪಾಗುತ್ತಿತ್ತು. ವಿದೇಶದಿಂದ ಬಂದಿದ್ದರೂ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ತೆರೆಯ ಮೇಲೆ ಅವರನ್ನು ನೋಡಿದಾಗ ಪ್ರೇಕ್ಷಕರಿಗೆ ಒಬ್ಬ ಅತ್ಯುತ್ತಮ ನಟನ ದರ್ಶನವಾಗಲಿದೆ. ಈ ಚಿತ್ರವು ನನ್ನ ಸಿನಿಮಾ ಬದುಕಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡುವ ಭರವಸೆ ಮೂಡಿಸಿದೆ. ಇದೊಂದು ಭ್ರಷ್ಟಾಚಾರದ ವಿರುದ್ಧದ ಕಥೆಯಾಗಿದೆ. ಎಲ್ಲೂ ಬೋರ್ ಹೊಡೆಸದೆ ಮನರಂಜನಾತ್ಮಕವಾಗಿ ಸಾಗುತ್ತದೆ. ತಾತಂದಿರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಎಲ್ಲರೂ ಇಷ್ಟಪಡುವ ಅಂಶಗಳು ಚಿತ್ರದಲ್ಲಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ನಿರಂಜನ್‌ ಸುಧೀಂದ್ರಗೆ ʻಸ್ಯಾಂಡಲ್‌ವುಡ್‌ ಹೃತಿಕ್‌ ರೋಷನ್‌ʼ ಅಂತ ಹೇಳಿದ್ಯಾರು? ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ಭ್ರಷ್ಟ ಪೊಲೀಸ್ ಪಾತ್ರದಲ್ಲಿ ಪ್ರೇಮ್‌

ಚಿತ್ರದಲ್ಲಿ ಮೊದಲ ಬಾರಿಗೆ ಭ್ರಷ್ಟ ಪೊಲೀಸ್ ಅಧಿಕಾರಿಯ ಖಳಪಾತ್ರದಲ್ಲಿ ಕಾಣಿಸಿಕೊಂಡಿರುವ ‘ನೆನಪಿರಲಿ’ ಪ್ರೇಮ್ ಮಾತನಾಡಿ, "ನಿರ್ಮಾಪಕರು ಯಾವುದೇ ಸ್ಟಾರ್ ನಟರ ಹಿಂದೆ ಹೋಗದೆ, ಹೊಸಬರ ಪ್ರತಿಭೆಯನ್ನು ನಂಬಿ ಉತ್ತಮ ಗುಣಮಟ್ಟದ ಸಿನಿಮಾ ನಿರ್ಮಿಸಿದ್ದಾರೆ. ನನ್ನ ಪಾತ್ರ ನೆಗೆಟಿವ್ ಶೇಡ್ ಹೊಂದಿದ್ದರೂ, ಆ ಭ್ರಷ್ಟ ಪೊಲೀಸ್ ಪಾತ್ರವನ್ನು ವೈಯಕ್ತಿಕವಾಗಿ ಅತ್ಯಂತ ಸ್ಟೈಲಿಶ್ ಆಗಿ ತೆರೆಮೇಲೆ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ" ಎಂದು ಹೇಳಿದರು.

ತಂಬ್‌ನೇಲ್ ಪತ್ರಕರ್ತನಾಗಿ ಧರ್ಮಣ್ಣ

ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, ನಿರ್ಮಾಪಕರು ಕಥೆಗೆ ಪೂರಕವಾಗಿ ಕೇಳಿದ ಎಲ್ಲಾ ಕಲಾವಿದರನ್ನು ಒದಗಿಸಿ ಪೂರ್ಣ ಸಹಕಾರ ನೀಡಿದ್ದರಿಂದಲೇ ಚಿತ್ರವು ಅಂದುಕೊಂಡಂತೆ ಅದ್ಭುತವಾಗಿ ಮೂಡಿಬರಲು ಸಾಧ್ಯವಾಯಿತು ಎಂದರು. ಹಾಸ್ಯನಟ ಧರ್ಮಣ್ಣ ಕಡೂರು ಮಾತನಾಡಿ, "ಚಿತ್ರಕ್ಕೆ ನಿರಂಜನ್ ಮತ್ತು ಪ್ರೇಮ್ ಅವರ ಮುಖಾಮುಖಿಯೇ ಮುಖ್ಯ ಆಕರ್ಷಣೆ. ನಾನು ನಿರಂಜನ್ ಜೊತೆ ಪತ್ರಕರ್ತನಾಗಿ, ಅದರಲ್ಲೂ ಪ್ರಸ್ತುತ ಟ್ರೆಂಡ್ ಆಗಿರುವ ‘ತಂಬ್‌ನೇಲ್ ಪತ್ರಕರ್ತ’ನ ಪಾತ್ರದ ಮೂಲಕ ಪ್ರೇಕ್ಷಕರನ್ನು ನಕ್ಕುನಗಿಸಲಿದ್ದೇನೆ" ಎಂದು ತಿಳಿಸಿದರು.