ನಟ ನಿರಂಜನ್ ಸುಧೀಂದ್ರಗೆ ʻಸ್ಯಾಂಡಲ್‌ವುಡ್ ಹೃತಿಕ್ ರೋಷನ್ʼ ಅಂತ ಹೇಳಿದ್ಯಾರು? ʻಸ್ಪಾರ್ಕ್ʼ ಚಿತ್ರದ ಹೊಸ ಹಾಡು ರಿಲೀಸ್
ಕಾರ್ಯಕ್ರಮದಲ್ಲಿ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ನಟನೆಯ ʻಸ್ಪಾರ್ಕ್ʼ ಚಿತ್ರದ 'ಮಧುರ ಮುಗುಳುನಗೆ' ಗೀತೆಯನ್ನು ಉಪೇಂದ್ರ ಅವರ ತಾಯಿ ಅನಸೂಯಮ್ಮ ಲೋಕಾರ್ಪಣೆಗೊಳಿಸಿದರು. ನಿರಂಜನ್ ಅವರ ನೃತ್ಯ ಹಾಗೂ ಸಾಹಸ ಮೆಚ್ಚಿದ ಡಾರ್ಲಿಂಗ್ ಕೃಷ್ಣ ಅವರನ್ನು ಕನ್ನಡದ ಹೃತಿಕ್ ರೋಷನ್ ಎಂದು ಕರೆದರೆ, ಪ್ರಿಯಾಂಕಾ ಉಪೇಂದ್ರ ತಮ್ಮ ಮಗನಿಗೂ ನಿರಂಜನ್ ಮಾದರಿ ಎಂದರು.
-
ನಟ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಸ್ಪಾರ್ಕ್' ಚಿತ್ರದ 'ಮಧುರ ಮುಗುಳುನಗೆ...' ಎಂಬ ರೊಮ್ಯಾಂಟಿಕ್ ಹಾಡು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ನಟ ಉಪೇಂದ್ರ ಅವರ ತಾಯಿ ಹಾಗೂ ನಿರಂಜನ್ ಅವರ ಅಜ್ಜಿ ಅನಸೂಯಮ್ಮ ಈ ಮಧುರ ಪ್ರೇಮಗೀತೆಯನ್ನು ಬಿಡುಗಡೆ ಮಾಡಿದರು. ಚಿತ್ರರಂಗದ ಗಣ್ಯರು, ಕುಟುಂಬಸ್ಥರು ಹಾಗೂ ಚಿತ್ರತಂಡದ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಹಾಡು ವೀಕ್ಷಿಸಿದ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರಂಜನ್ ನೋಡಿ ಕಲಿ ಅಂತ ಮಗನಿಗೆ ಹೇಳ್ತೀನಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರ, "ನಾನು ಮದುವೆಯಾಗಿ ಉಪೇಂದ್ರ ಅವರ ಮನೆಗೆ ಕಾಲಿಟ್ಟಾಗ ಪ್ರೀತಿಯಿಂದ ಸ್ವಾಗತಿಸಿದ್ದ ಪುಟ್ಟ ಬಾಲಕನೇ ಈ ನಿರಂಜನ್. ಈಗ ನಾಯಕನಾಗಿ ಬೆಳೆದು ನಿಂತಿರುವುದು ಹೆಮ್ಮೆ ತಂದಿದೆ. ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಈ ಹಿಂದೆ ಬಿಡುಗಡೆಯಾದ 'ಶಕಲಕ' ಹಾಡಿಗಿಂತ ಈ ಹಾಡಿಗೆ ರೀಲ್ಸ್ ಮಾಡುವುದು ಸುಲಭವೆನಿಸಿದೆ. ಶೀಘ್ರದಲ್ಲೇ ನಾನು ಮತ್ತು ಉಪೇಂದ್ರ ಈ ಹಾಡಿಗೆ ರೀಲ್ಸ್ ಮಾಡುತ್ತೇವೆ. ನನ್ನ ಮಗನಿಗೂ ನಿರಂಜನ್‌ನನ್ನು ನೋಡಿ ಕಲಿಯುವಂತೆ ಸದಾ ಹೇಳುತ್ತಿರುತ್ತೇನೆ" ಎಂದು ಹಾರೈಸಿದರು.
ಚಿತ್ರತಂಡಕ್ಕೆ ಶುಭ ಕೋರಲು ಆಗಮಿಸಿದ್ದ ನಟ 'ಡಾರ್ಲಿಂಗ್' ಕೃಷ್ಣ, ನಾಯಕ ನಿರಂಜನ್ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. "ನಿರಂಜನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಾಹಸ ಕಸರತ್ತುಗಳ ವಿಡಿಯೊಗಳನ್ನು ನೋಡಿದ್ದೇನೆ. ನೃತ್ಯ ಮತ್ತು ಸಾಹಸ ಎರಡರಲ್ಲೂ ಪಳಗಿರುವ ಅವರನ್ನು ಕನ್ನಡದ ಹೃತಿಕ್ ರೋಷನ್ ಎನ್ನಬಹುದು. ಹಾಡಿನಲ್ಲಿ ರಚನಾ ಹಾಗೂ ನಿರಂಜನ್ ಕೆಮಿಸ್ಟ್ರಿ ಬಹಳ ಮುದ್ದಾಗಿ ಮೂಡಿಬಂದಿದೆ" ಎಂದರು.
ನಿರ್ದೇಶಕ ದಯಾಳ್ ಪದ್ಮನಾಭನ್ ಮಾತನಾಡಿ, "ಕನ್ನಡ ಚಿತ್ರರಂಗದಲ್ಲಿ ಎರಡನೇ ತಲೆಮಾರಿನ ಹೊಸ ನಾಯಕರ ಕೊರತೆಯಿರುವ ಸಂದರ್ಭದಲ್ಲಿ ನಿರಂಜನ್ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದಾರೆ. ನಂದಿಬೆಟ್ಟವನ್ನು ಈ ಹಾಡಿನಲ್ಲಿ ಕಣ್ಮನ ಸೆಳೆಯುವಂತೆ ಸೆರೆಹಿಡಿಯಲಾಗಿದ್ದು, ನನ್ನ ಶಿಷ್ಯ ಮಹಾಂತೇಶ್ ಹೆಮ್ಮೆಪಡುವಂತಹ ಸಿನಿಮಾ ಮಾಡಿದ್ದಾರೆ" ಎಂದು ಪ್ರಶಂಸಿಸಿದರು.
ಪತ್ರಕರ್ತನ ಪಾತ್ರದಲ್ಲಿ ನಿರಂಜನ್
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ನಿರಂಜನ್ ಸುಧೀಂದ್ರ, ಚಿತ್ರದಲ್ಲಿ ತಾವು ಮಾಧ್ಯಮ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದು, ಚಿತ್ರತಂಡದ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಶ್ರಮವಹಿಸಿರುವುದಾಗಿ ತಿಳಿಸಿದರು. ನಾಯಕಿ ರಚನಾ ಇಂದರ್ ಮಾತನಾಡಿ, "ಚಿತ್ರಕ್ಕಾಗಿ ನನ್ನ ಮೊದಲ ಶಾಟ್ ತೆಗೆದಿದ್ದೇ ಈ ಹಾಡಿಗೆ. ಕಥೆಯ ಬೇಡಿಕೆಯಂತೆ ಗುಂಗುರು ಕೂದಲಿನ ವಿನ್ಯಾಸದೊಂದಿಗೆ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿ ನಟಿಸಿದ್ದೇನೆ" ಎಂದರು. ಪ್ರಮೋದ್ ಮರವಂತೆ ಸಾಹಿತ್ಯವಿರುವ ಈ ಗೀತೆಗೆ ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಅವರೇ ಧ್ವನಿಯಾಗಿದ್ದಾರೆ.
ಖಳನಾಯಕನ ಪಾತ್ರದಲ್ಲಿ ಲವ್ಲೀ ಸ್ಟಾರ್ ಪ್ರೇಮ್
ಚಿತ್ರದಲ್ಲಿ 'ಲವ್ಲಿ ಸ್ಟಾರ್' ಪ್ರೇಮ್ ಖಳನಾಯಕನಾಗಿ ನಟಿಸಿದ್ದು, ಅವರ ಪತ್ನಿ ಜ್ಯೋತಿ ಮಾತನಾಡಿ, "ಪ್ರೇಮ್ ಅವರಿಗೆ ಮೊದಲಿನಿಂದಲೂ ಆ್ಯಕ್ಷನ್ ಪಾತ್ರ ಮಾಡುವ ಹಂಬಲವಿತ್ತು. ಎಂದೂ ಧೂಮಪಾನ ಮಾಡದ ಅವರು ಚಿತ್ರದ ಪಾತ್ರದ ತೀವ್ರತೆಗಾಗಿ ಸಿಗರೇಟು ಸೇದಿದ್ದಾರೆ" ಎಂದು ಪಾತ್ರದ ಹಿಂದಿನ ಶ್ರಮವನ್ನು ಹಂಚಿಕೊಂಡರು. ನಟ ಧರ್ಮಣ್ಣ ಕಡೂರು, ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿರುವ ಅವಿನಾಶ್ ವಸಿಷ್ಠ ಚಿತ್ರದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗುರುಗಳಾದ ದಯಾಳ್ ಪದ್ಮನಾಭನ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಗರಡಿಯಲ್ಲಿ ಕಲಿತದ್ದನ್ನು ಈ ಚಿತ್ರದಲ್ಲಿ ಅಳವಡಿಸಿಕೊಂಡಿರುವುದಾಗಿ ನಿರ್ದೇಶಕ ಡಿ. ಮಹಾಂತೇಶ್ ಹಂದ್ರಾಳ್ ತಿಳಿಸಿದ್ದು, ಈ ಬಹುನಿರೀಕ್ಷಿತ 'ಸ್ಪಾರ್ಕ್' ಚಿತ್ರವು ಇದೇ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ.