ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ambareesh Grandson: ಅಂಬರೀಶ್‌-ಸುಮಲತಾ ಮೊಮ್ಮಗನಿಗೆ ನಾಮಕರಣ; ಅಭಿಷೇಕ್‌ ಪುತ್ರನ ಹೆಸರೇನು?

Ambareesh Grandson: ಸ್ಯಾಂಡಲ್‌ವುಡ್‌ ಹಿರಿಯ ನಟ ದಿ. ಅಂಬರೀಶ್‌-ಸುಮಲತಾ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಭಾನುವಾರ (ಮಾ. 16) ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಅಭಿಷೇಕ್‌ ಅಂಬರೀಶ್‌ - ಅವಿವಾ ಬಿದಪ್ಪ ದಂಪತಿಯ ಪುತ್ರನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

ಅಭಿಷೇಕ್‌-ಅವಿವಾ ದಂಪತಿ ಪುತ್ರನ ಹೆಸರೇನು?

Profile Ramesh B Mar 16, 2025 4:00 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಹಿರಿಯ ನಟ ದಿ. ಅಂಬರೀಶ್‌-ಸುಮಲತಾ ಅವರ ಮೊಮ್ಮಗನ (Ambareesh grandson) ನಾಮಕರಣ ಶಾಸ್ತ್ರ ಭಾನುವಾರ (ಮಾ. 16) ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಅಭಿಷೇಕ್‌ ಅಂಬರೀಶ್‌ - ಅವಿವಾ ಬಿದಪ್ಪ ದಂಪತಿಯ ಪುತ್ರನಿಗೆ ಅಪರೂಪದ ಹೆಸರಿಡಲಾಗಿದೆ. ಅಂಬರೀಷ್‌ ಅವರ ನೆನಪಿನಲ್ಲಿ ಮಗುವಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಅಂಬರೀಶ್‌ ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್‌. ಹೀಗಾಗಿ ತಂದೆಯ ನೆನಪಿಗಾಗಿ ಅಭಿಷೇಕ್‌ ಇದೀಗ ಮಗನಿಗೆ ರಾಣಾ ಅಮರ್ ಎಂದು ಹೆಸರಿಟ್ಟಿದ್ದಾರೆ.

ಅರ್ಥವೇನು?

ಇನ್ನು ರಾಣಾ ಎನ್ನುವ ಹೆಸರಿಗೆ ರಾಜ, ಯೋಧ ಎನ್ನುವ ಅರ್ಥವೂ ಇದೆ. ಹೀಗಾಗಿ ಬಹಳ ಅಪರೂಪದ ಹೆಸರನ್ನೇ ಆಯ್ಕೆ ಮಾಡಿ ಇಡಲಾಗಿದೆ. 2023ರ ಜೂ. 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದಪ್ಪ ಹಸೆಮಣೆಗೇರಿದ್ದರು. ಬಳಿಕ ಮಂಡ್ಯದಲ್ಲಿ ಸಾವಿರಾರು ಜನರಿಗೆ ಬೀಗರ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷ ನ. 13ರಂದು ಅವಿವಾ ಮಗುವಿಗೆ ಜನ್ಮ ನೀಡಿದ್ದರು.

ಜೋಡೆತ್ತು ಗೈರು

ಅಂಬರೀಷ್‌ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಜೋಡೆತ್ತು ಎಂದೇ ಜನಪ್ರಿಯ. ಸುಮಲತಾ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾಗ ಇವರಿಬ್ಬರು ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಆ ಮೂಲಕ ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂದಿನಿಂದ ಇವರು ಜೋಡೆತ್ತು ಎಂದೇ ಗುರುತಿಸಿಕೊಂಡಿದ್ದಾರೆ. ಅಲ್ಲದೆ ದರ್ಶನ್‌ ಅವರನ್ನು ಸುಮಲತಾ ಅವರ ಹಿರಿಯ ಮಗ ಎಂದೇ ಕರೆಯಲಾಗುತ್ತದೆ. ಆದರೆ ಅನಿವಾರ್ಯ ಕಾರಣಗಳಿಂದ ಇಂದಿನ ಸಮಾರಂಭಕ್ಕೆ ದರ್ಶನ್‌ ಮತ್ತು ಯಶ್‌ ಆಗಮಿಸಿಲ್ಲ.

ಈ ಸುದ್ದಿಯನ್ನೂ ಓದಿ: Sumalatha Ambareesh: ಇನ್‌ಸ್ಟಾದಲ್ಲಿ ದರ್ಶನ್‌ ಅನ್‌ಫಾಲೋ; ತಾಯಿ-ಮಗನ ನಡುವೆ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ

ದರ್ಶನ್‌ ʼಡೆವಿಲ್‌ʼ ಚಿತ್ರದ ಶೂಟಿಂಗ್‌ ನಿಮಿತ್ತ ಮೈಸೂರಿನಲ್ಲಿದ್ದರೆ, ಯಶ್‌ ಬಹುನಿರೀಕ್ಷಿತ ʼಟಾಕ್ಸಿಕ್‌ʼನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಇಬ್ಬರೂ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎನ್ನಲಾಗಿದೆ.

ಅಮ್ಮ-ಮಗನ ಸಂಬಂಧದಲ್ಲಿ ಬಿರುಕು?

ಸುಮಲತಾ ಮತ್ತು ದರ್ಶನ್‌ ಅವರ ಅಮ್ಮ-ಮಗನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಗಾಳಿಸುದ್ದಿ ಕೆಲವು ದಿನಗಳಿಂದ ಜೋರಾಗಿಯೇ ಹಬ್ಬಿದೆ. ಇದೇ ಕಾರಣಕ್ಕೆ ದರ್ಶನ್‌ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎನ್ನುವ ಮಾತೂ ಕೇಳಿ ಬಂದಿದೆ. ಕೆಲವು ದಿನಗಳ ಹಿಂದೆ ಏಕಾಏಕಿ ದರ್ಶನ್‌ ಸುಮಲತಾ ಸೇರಿ ಹಲವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್‌ಫಾಲೋ ಮಾಡಿರುವುದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ದರ್ಶನ್‌ ಕುಟುಂಬದ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಈ ವಿಚಾರವಾಗಿ‌ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿ, ʼʼತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ. ಬಮ್ಮ ಮಧ್ಯೆ ಎಲ್ಲವೂ ಸರಿ ಇದೆʼʼ ಎಂದಿದ್ದರು. ಅದಾಗ್ಯೂ ದರ್ಶನ್‌ ಅವರ ಗೈರು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.