ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ಪ್ರಕರಣದ ಎ-14 ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
59ನೇ ಸಿಸಿಹೆಚ್ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಹಷ್ಮತ್ ಪಾಷಾ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು (ಆ.13) ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದ್ದು, ಎಸ್‌ಪಿಪಿಗೆ ಮಾಹಿತಿ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿದೆ.
ದರ್ಶನ್ ಪರ ವಕೀಲರ ವಾದವೇನು?
"ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಬಗ್ಗೆ ವಾದಿಸಲು ನಮಗೆ ಸಿಸಿಹೆಚ್ ಕೋರ್ಟ್ ಅವಕಾಶ ನೀಡಲಿಲ್ಲ. ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರ ವಾದ ಆಲಿಸಲು ಅನುಮತಿ ನೀಡದಿರುವುದರಿಂದ, ಅನಿವಾರ್ಯವಾಗಿ ಸಿಸಿಹೆಚ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ" ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತಿಳಿಸಿದ್ದಾರೆ.
ದರ್ಶನ್ ವಿರುದ್ಧ ತಿರುಗಿಬಿದ್ದ ಆರೋಪಿ ಪ್ರದೋಷ್
ಈ ಪ್ರಕರಣದಲ್ಲಿ ಎ-14 ಆರೋಪಿಯಾಗಿರುವ ಪ್ರದೋಷ್, ಇತ್ತೀಚೆಗೆ ತಾನು 'ಮಾಫಿ ಸಾಕ್ಷಿ'ಯಾಗಲು ಸಿದ್ಧವೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಘಟನೆ ನಡೆದ ದಿನದ ಇಂಚಿಂಚೂ ವಿವರಗಳನ್ನು ಹೇಳಲು ಸಿದ್ಧ ಎಂದಿದ್ದ ಪ್ರದೋಷ್, "ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸದಂತೆ ನಾನು ದರ್ಶನ್ ಅವರನ್ನು ತಡೆಯಲು ಯತ್ನಿಸಿದ್ದೆ" ಎಂದು ಕೋರ್ಟ್ ಮುಂದೆ ಹೇಳಿಕೊಂಡಿದ್ದರು.
ಆದರೆ, ಪ್ರಾಸಿಕ್ಯೂಷನ್ ಪ್ರಕಾರ ಪ್ರದೋಷ್ ವಿರುದ್ಧ ಕೊಲೆಯಲ್ಲಿ ಭಾಗಿ ಹಾಗೂ ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳಿವೆ. ದರ್ಶನ್ ಅವರಿಂದ 30 ಲಕ್ಷ ರೂ. ಹಣ ಪಡೆದು, ಪ್ರಕರಣಕ್ಕೆ ಸಂಬಂಧವಿಲ್ಲದವರನ್ನು ಆರೋಪಿಗಳನ್ನಾಗಿ ತರಲು ಯತ್ನಿಸಿದ ಮತ್ತು ಪವಿತ್ರಾ ಗೌಡ ಅವರನ್ನು ಶೆಡ್‌ಗೆ ಕರೆತಂದ ಪ್ರಮುಖ ಆರೋಪವೂ ಈತನ ಮೇಲಿದೆ. ಹೀಗಿದ್ದರೂ ಪ್ರದೋಷ್ ಈಗ ಮಾಫಿ ಸಾಕ್ಷಿಯಾಗಿ ದರ್ಶನ್ ವಿರುದ್ಧವೇ ತಿರುಗಿಬಿದ್ದಿರುವುದು ದರ್ಶನ್ ಗ್ಯಾಂಗ್‌ಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶವೇನು?
ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ದರ್ಶನ್ ಪರ ವಕೀಲರು ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ವಾದ-ವಿವಾದಗಳನ್ನು ಆಲಿಸಿದ್ದ 59ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಸುಜಾತಾ ಸಾಂಬ್ರಾಣಿ ಅವರು, ದರ್ಶನ್ ಪರ ವಕೀಲರ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು.
"ಕೊಲೆ ಪ್ರಕರಣದ ಸಹ-ಆರೋಪಿಗಳು, ಮತ್ತೊಬ್ಬ ಆರೋಪಿ ಮಾಫಿ ಸಾಕ್ಷಿಯಾಗುವ ಅರ್ಜಿಗೆ ಆಕ್ಷೇಪ ಸಲ್ಲಿಸುವಂತಿಲ್ಲ" ಎಂದು ಸ್ಪಷ್ಟವಾಗಿ ತಿಳಿಸಿ, ಪ್ರಾಸಿಕ್ಯೂಷನ್ ವಾದಕ್ಕೆ ಮನ್ನಣೆ ನೀಡಿದ್ದರು. ಸಿಸಿಹೆಚ್ ಕೋರ್ಟ್‌ನ ಈ ಆದೇಶವನ್ನೇ ಪ್ರಶ್ನಿಸಿ ಇದೀಗ ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಮಧ್ಯಾಹ್ನ ನಡೆಯಲಿರುವ ಹೈಕೋರ್ಟ್ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.