ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗ್ಯಾಂಗ್‌ಗೆ ಬಿಗ್ ಶಾಕ್! ಪ್ರದೋಶ್ 'ಮಾಫಿ ಸಾಕ್ಷಿ' ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ನಿರಾಕರಣೆ
ಚಿತ್ರದುರ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ದೊಡ್ಡ ಹಿನ್ನಡೆಯಾಗಿದೆ. ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ ಅರ್ಜಿಗೆ ಆಕ್ಷೇಪಿಸಲು ಸಹ-ಆರೋಪಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಕೋರ್ಟ್ ದರ್ಶನ್ ವಕೀಲರ ಅರ್ಜಿಯನ್ನು ವಜಾಗೊಳಿಸಿದೆ.
-
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಭಾರಿ ಹಿನ್ನಡೆಯಾಗಿದೆ. ಪ್ರಕರಣದ ಆರೋಪಿ ಪ್ರದೋಶ್, ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದ ದರ್ಶನ್ ಹಾಗೂ ಇತರ ಆರೋಪಿಗಳ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. "ಮಾಫಿ ಸಾಕ್ಷಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಹ-ಆರೋಪಿಗಳಿಗೆ ಯಾವುದೇ ಕಾನೂನಾತ್ಮಕ ಅವಕಾಶವಿಲ್ಲ" ಎಂದು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಸಂಬ್ರಾಣಿ ಅವರ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ದರ್ಶನ್ ಪರ ವಕೀಲರ ಆಕ್ಷೇಪಣೆ ತಿರಸ್ಕರಿಸಿದ ಕೋರ್ಟ್
ಪ್ರದೋಶ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೂ ಅವಕಾಶ ನೀಡಬೇಕು ಮತ್ತು ತಮ್ಮ ವಾದವನ್ನೂ ಆಲಿಸಬೇಕು ಎಂದು ದರ್ಶನ್ ಸೇರಿದಂತೆ ಇತರ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ನ್ಯಾಯಾಲಯವು ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯ ಪರಿಗಣನೆಯ ಕುರಿತು ಶೀಘ್ರದಲ್ಲೇ ಪ್ರತ್ಯೇಕ ಆದೇಶ ಹೊರಡಿಸುವುದಾಗಿ ತಿಳಿಸಿದೆ. ಈ ಆದೇಶದಿಂದಾಗಿ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಕಾನೂನಾತ್ಮಕವಾಗಿ ದೊಡ್ಡ ಸಂಕಷ್ಟ ಎದುರಾಗಿದೆ.
ಸಾಕ್ಷಿಗಳ ಪಾಟೀಸವಾಲಿಗೆ ಅನುಮತಿ
ಇದೇ ವೇಳೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ ನ್ಯಾಯಾಲಯವು 13ನೇ ಮತ್ತು 14ನೇ ಸಾಕ್ಷಿಗಳ ಪಾಟೀಸವಾಲಿಗೆ ಆರೋಪಿಗಳ ಪರ ವಕೀಲರಿಗೆ ಅನುಮತಿ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದವರನ್ನು ಹೊರತುಪಡಿಸಿ ಉಳಿದವರನ್ನು ಕೋರ್ಟ್ ಸಿಬ್ಬಂದಿ ಹೊರಗೆ ಕಳುಹಿಸಿ, ಮುಚ್ಚಿದ ಬಾಗಿಲಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆಯ ವೇಳೆ ನಟ ದರ್ಶನ್ ಸೇರಿದಂತೆ ಒಟ್ಟು 6 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಪ್ರದೋಶ್ ಅರ್ಜಿಯಲ್ಲಿದೆ ಶಾಕಿಂಗ್ ಮಾಹಿತಿ!
ಮಾಫಿ ಸಾಕ್ಷಿಯಾಗಲು ಪ್ರದೋಶ್ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಆಘಾತಕಾರಿ ವಿಚಾರಗಳು ಹೊರಬಿದ್ದಿವೆ. ಘಟನೆ ನಡೆದ ಬಳಿಕ, "ಪ್ರಕರಣದಲ್ಲಿ ನನಗೆ ನೀವು ಸಹಕರಿಸಬೇಕು, ಇಲ್ಲದಿದ್ದರೆ ನಾನೇ ಗನ್‌ನಿಂದ ಶೂಟ್ ಮಾಡಿಕೊಂಡು ಸಾಯುತ್ತೇನೆ" ಎಂದು ನಟ ದರ್ಶನ್ ತನಗೆ ಬೆದರಿಕೆ ಹಾಕಿದ್ದರು. ಹೀಗಾಗಿಯೇ ನಾನು ಅಸಹಾಯಕನಾಗಿ ದರ್ಶನ್‌ಗೆ ಸಹಾಯ ಮಾಡಿದೆ ಎಂದು ಪ್ರದೋಶ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
"ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಾಗ ಸ್ಥಳದಲ್ಲಿ ನಾನು ಹಾಜರಿದ್ದೆ. ಹಲ್ಲೆಯನ್ನು ತಡೆಯಲು ನಾನು ಬಹಳ ಪ್ರಯತ್ನಿಸಿದೆ. ಆದರೆ ರೇಣುಕಾಸ್ವಾಮಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಯಿತು; ಸಿಗರೇಟಿನಿಂದ ಸುಡಲಾಯಿತು ಹಾಗೂ ಖುದ್ದು ದರ್ಶನ್ ಸಹ ತೀವ್ರವಾಗಿ ಹಲ್ಲೆ ಮಾಡಿದರು. ದರ್ಶನ್ ಬೆದರಿಕೆ ಹಾಕಿದ್ದರಿಂದ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ಪ್ರದೋಶ್ ಅರ್ಜಿಯಲ್ಲಿ ತಿಳಿಸಿದ್ದಾರೆ.