ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ, ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣದ ಸಾಕ್ಷಿಗಳ ವಿಚಾರಣೆ ಆರಂಭ ಆಗಿದೆ. ಇದೀಗ ಪವಿತ್ರಾ ಗೌಡ ದರ್ಶನ್ ಭೇಟಿಗೆ ಅವಕಾಶ ಕೋರಿದ್ದರು ಎಂದು ತಿಳಿದು ಬಂದಿದೆ. ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾಗ ಪವಿತ್ರಾ ಗೌಡ ಅವರು ಈ ಮನವಿ ಇಟ್ಟಿದ್ದರು. ಈ ಬೇಡಿಕೆಗೆ ಸಂಬಂಧಪಟ್ಟಂತೆ ಕಾನೂನಿನಲ್ಲಿ ಅವಕಾಶ ಇರುವು ಬಗ್ಗೆ ನೋಡುವುದಾಗಿ ಅಲೋಕ್ ಕುಮಾರ್ ಹೇಳಿದ್ದರು. ಅದಾದ ಬಳಿಕ ಪವಿತ್ರ ಮತ್ತೆ ದರ್ಶನ್ ಭೇಟಿಗೆ ಅವಕಾಶ ಕೋರುತ್ತಿದ್ದಾರೆ ಎಂದು ಹೇಳಲಾಗಿದೆ.
ಪವಿತ್ರಾ ಭೇಟಿ ಮಾಡಲು ದರ್ಶನ್ ನಿರಾಕರಿಸಿದ್ದು, ನೀರಸ ಪ್ರತಿಕ್ರಿಯೆ ತೋರಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಪವಿತ್ರಾ ಭೇಟಿ ಮಾಡಲು ಒಪ್ಪದ ನಟ ದರ್ಶನ್ ನಿನ್ನಿಂದಲೇ ಈ ಪರಿಸ್ಥಿತಿಗೆ ಬಂದಿದ್ದೇನೆ ಎಂಬ ರೀತಿಯಲ್ಲಿ ನಿರಾಕರಿಸಿದ್ದಾರಾ? ಎನ್ನುವ ಅನುಮಾನ ಕಾಡುತ್ತಿದೆ. ತಮ್ಮನ್ನು ನೋಡಲು ಬಂದವರ ಬಳಿ ಕೇವಲ ಕಾನೂನು ಹೋರಾಟದ ಪ್ರಕ್ರಿಯೆಗಳ ಬಗ್ಗೆ ಅವರು ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಕೊಲೆ ಆರೋಪಿಗಳ ಟ್ರಯಲ್ ಪ್ರಾರಂಭವಾಗಿದ್ದು, ಡಿಸೆಂಬರ್ 17ರಂದು ರೇಣುಕಾಸ್ವಾಮಿ ತಂದೆ, ತಾಯಿಯನ್ನು ಕರೆದು ವಿಚಾರಣೆ ಮಾಡಲಾಗಿದೆ. ಪ್ರಮುಖ ಆರೋಪಿ ನಟ ದರ್ಶನ್, ಅವರ ಆಪ್ತ ಗೆಳತಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾದರು. ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಪ್ರಕರಣ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ.
ಏನಿದು ಪ್ರಕರಣ?
ಚಿತ್ರದುರ್ಗದ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ರೇಣುಕಸ್ವಾಮಿ ಅವರನ್ನು ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಅಪಹರಿಸಲಾಗಿತ್ತು. ಜೂನ್ 9, 2024 ರಂದು ಇಲ್ಲಿನ ಆರ್.ಆರ್. ನಗರದ ಸುಮನಹಳ್ಳಿಯಲ್ಲಿ ಶೆಡ್‌ನಲ್ಲಿ ಅವರನ್ನು ಹೊಡೆದು ಕೊಂದು, ಮಳೆನೀರಿನ ಚರಂಡಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಪೊಲೀಸರು 17 ಆರೋಪಿಗಳ ವಿರುದ್ಧ 3,991 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ಪವಿತ್ರಾ ಗೌಡ ಅವರನ್ನು 1ನೇ ಆರೋಪಿಯನ್ನಾಗಿ ಮತ್ತು ದರ್ಶನ್ ಅವರನ್ನು 2ನೇ ಆರೋಪಿಯನ್ನಾಗಿ ಹೆಸರಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ), 359 (ಅಪಹರಣ), 120 ಬಿ (ಕ್ರಿಮಿನಲ್ ಪಿತೂರಿ), 204 (ಸಾಕ್ಷ್ಯ ನಾಶ ಪ್ರಯತ್ನ) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.