ಬಾಲಿವುಡ್‌ನ ʻಹೀಮ್ಯಾನ್ʼ ಧರ್ಮೇಂದ್ರ ಸಾವನ್ನಪ್ಪಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಧರ್ಮೇಂದ್ರ ತಮ್ಮ 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅಂದಹಾಗೆ, ನಟನೆ ಹೊರತಾಗಿ ಧರ್ಮೇಂದ್ರ ಹೆಚ್ಚು ಗಮನಸೆಳೆದಿದ್ದು ಮದುವೆಗಳ ವಿಚಾರಕ್ಕೆ. ಹೌದು, ಧರ್ಮೇಂದ್ರ ಇಬ್ಬರು ಪತ್ನಿಯರ ಮುದ್ದಿನ ಪತಿಯಾಗಿದ್ದರು.
19ನೇ ವಯಸ್ಸಿನಲ್ಲಿ ಮೊದಲ ಮದುವೆ
ಧರ್ಮೇಂದ್ರ ಅವರು 1935ರಲ್ಲಿ ಜನಿಸಿದರು. ಅವರು ಮೊದಲ ಬಾರಿಗೆ ಮದುವೆಯಾದಾಗ ಅವರಿಗಿನ್ನೂ 21 ಕೂಡ ದಾಟಿರಲಿಲ್ಲ! ಹೌದು, 1954ರಲ್ಲಿ ಪ್ರಕಾಶ್ ಕೌರ್ ಅವರೊಂದಿಗೆ ಧರ್ಮೇಂದ್ರ ಅವರ ಮದುವೆ ಆಗಿತ್ತು. ಆಗಿನ್ನೂ ಧರ್ಮೇಂದ್ರ ಚಿತ್ರರಂಗಕ್ಕೂ ಕಾಲಿಟ್ಟಿರಲಿಲ್ಲ. 1957ರಲ್ಲಿ ಸನ್ನಿ ಡಿಯೋಲ್‌ಗೆ ತಂದೆಯಾದ ಧರ್ಮೇಂದ್ರ ಅವರು 1960ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಆಗ ಅವರಿಗೆ 25 ವರ್ಷ ವಯಸ್ಸು. ಅತೀ ಕಡಿಮೆ ವಯಸ್ಸಿನಲ್ಲಿ ಮದುವೆ, ಮಗು ಮತ್ತು ಚಿತ್ರರಂಗವದಲ್ಲಿ ಯಶಸ್ಸನ್ನು ಪಡೆದುಕೊಂಡು ಮುನ್ನುಗ್ಗಿದವರು ಈ ಹೀಮ್ಯಾನ್!
Actor Dharmendra: ಧರ್ಮೇಂದ್ರ ಯುಗಾಂತ್ಯ- ದಿಗ್ಗಜ ನಟನ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ
ಮೊದಲ ಪತ್ನಿಗೆ ನಾಲ್ವರು ಮಕ್ಕಳು
ಧರ್ಮೇಂದ್ರ ಮತ್ತು ಪ್ರಕಾಶ್ ಕೌರ್ ದಂಪತಿಗೆ ನಾಲ್ವರು ಮಕ್ಕಳು ಇದ್ದಾರೆ. ಸನ್ನಿ ಡಿಯೋಲ್ ನಂತರ ವಿಜೇತ ಮತ್ತು ಅಜೀತಾ ಎಂಬಿಬ್ಬರು ಹೆಣ್ಣು ಮಕ್ಕಳು ಜನಿಸಿದರು. ಕೊನೆಯ ಮಗುವಾಗಿ ಬಾಬಿ ಡಿಯೋಲ್ ಜನಿಸಿದರು. ಆನಂತರ ಈ ಕುಟುಂಬಕ್ಕೆ ಬಾಲಿವುಡ್‌ನ 70-80ರ ದಶಕದ ಸ್ಟಾರ್ ನಟಿ ಹೇಮಾ ಮಾಲಿನಿ ಅವರ ಪ್ರವೇಶವಾಯಿತು.
ಧರ್ಮೇಂದ್ರ ನಿಧನದ ಸುದ್ದಿಯ ಪೋಸ್ಟ್
45ನೇ ವಯಸ್ಸಿನಲ್ಲಿ ಎರಡನೇ ಮದುವೆ
70-80ರ ದಶಕದಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಆಗಿದ್ದ ಧರ್ಮೇಂದ್ರ ಅವರು ಆ ಕಾಲದ ಸ್ಟಾರ್ ನಟಿ ಹೇಮಾ ಮಾಲಿನಿ ಜೊತೆಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅವರಿಬ್ಬರ ಒಡನಾಟ ನಂತರ ಪ್ರೀತಿಗೆ ತಿರುಗಿತು. ಪರಿಣಾಮ, 1980ರಲ್ಲಿ ಧರ್ಮೇಂದ್ರ ಮತ್ತು ಹೇಮಾ ಮದುವೆಯಾದರು. ಆಗ ಧರ್ಮೇಂದ್ರಗೆ 45 ವರ್ಷ. ಹೇಮಾ ಮಾಲಿನಿಗೆ ಆಗ 32 ವರ್ಷಗಳು. ವಿಶೇಷವೆಂದರೆ, ಎರಡನೇ ಮದುವೆ ಆಗುವಾಗ ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಂದ ಧರ್ಮೇಂದ್ರ ವಿಚ್ಚೇದನ ಪಡೆದಿರಲಿಲ್ಲ ಮತ್ತು ಈ 2ನೇ ಮದುವೆ ಆಗುವಾಗ ಧರ್ಮೇಂದ್ರ ಪುತ್ರ ಸನ್ನಿ ಡಿಯೋಲ್‌ಗೆ 23 ವರ್ಷ ವಯಸ್ಸು. ಧರ್ಮೇಂದ್ರ ಮತ್ತು ಹೇಮಾ ದಂಪತಿಗೆ ಇಶಾ ಡಿಯೋಲ್ ಮತ್ತು ಆಹಾನಾ ಡಿಯೋಲ್ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ.
Dharmendra: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ
ತಂದೆಯಾಗಿ ಧರ್ಮೇಂದ್ರ ಉತ್ತಮರು ಎಂದಿದ್ದ ಪತ್ನಿ
ಕೊನೆ ದಿನಗಳವರೆಗೂ ತಮ್ಮ ಇಬ್ಬರು ಪತ್ನಿಯರ ಜೊತೆಗೆ ಧರ್ಮೇಂದ್ರ ಅವರು ಉತ್ತಮ ಒಡನಾಟ ಹೊಂದಿದ್ದರು. ಇನ್ನು, ಪತಿಯನ್ನು ಎಂದಿಗೂ ಬಿಟ್ಟು ಕೊಡದ ಪ್ರಕಾಶ್ ಕೌರ್, "ಧರ್ಮೇಂದ್ರ ಅವರು ನನಗೆ ತುಂಬಾ ಒಳ್ಳೆಯವರಾಗಿದ್ದರೂ, ಅವರು ಅತ್ಯುತ್ತಮ ಪತಿ ಅಲ್ಲದಿರಬಹುದು. ಆದರೆ ಅವರು ಖಂಡಿತವಾಗಿಯೂ ಅತ್ಯುತ್ತಮ ತಂದೆ. ಮಕ್ಕಳನ್ನು ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರು ಎಂದಿಗೂ ಅವರನ್ನು ನಿರ್ಲಕ್ಷಿಸುವುದಿಲ್ಲ. ನನ್ನ ಮತ್ತು ಧರ್ಮೇಂದ್ರ ಅವರ ಸಂಬಂಧದ ಬಗ್ಗೆ ಜನರು ಏನು ಹೇಳುತ್ತಾರೆಂದು ನನಗೆ ತಿಳಿದಿಲ್ಲ. ನನಗೆ ತಿಳಿದಿರುವುದು ಅವರು ನಮ್ಮೆಲ್ಲರನ್ನೂ ಬಹಳ ಕಾಳಜಿ ವಹಿಸುತ್ತಾರೆ. ಅವರು ಪ್ರತಿದಿನ ಸಂಜೆ ಮನೆಗೆ ಬಂದು ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ" ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು.