ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಬಾಹುಬಲಿ' ಬ್ಲಾಕ್‌ಬಸ್ಟರ್‌ ಹಿಟ್‌ ಆದ್ಮೇಲೆ 2-3 ವರ್ಷ ನಿದ್ದೆ ಮಾಡಲು ಒದ್ದಾಡಿದ್ದ ನಟ ಪ್ರಭಾಸ್! ಅಂಥದ್ದೇನಾಗಿತ್ತು?

'ಬಾಹುಬಲಿ' ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಬರೋಬ್ಬರಿ 2-3 ವರ್ಷಗಳ ಕಾಲ ತಮಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ಯಾನ್-ಇಂಡಿಯಾ ನಟ ಪ್ರಭಾಸ್ ಹೇಳಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಅವರು, ಚಿತ್ರದ ನಂತರ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಗಿ ತೀವ್ರ ಒತ್ತಡ ಎದುರಿಸಿದ್ದಾಗಿ ತಿಳಿಸಿದ್ದಾರೆ.

ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ 'ಬಾಹುಬಲಿ' ಸಿನಿಮಾ ನಟ ಪ್ರಭಾಸ್ ಅವರ ಇಡೀ ಲೈಫ್ ಅನ್ನೇ ಬದಲಾಯಿಸಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಸಿಕ್ಕ ಈ ಭರ್ಜರಿ ಯಶಸ್ಸು ತಮಗೆ ಅಪಾರ ಒತ್ತಡವನ್ನು ತಂದಿಟ್ಟಿತ್ತು ಎಂಬ ಆಘಾತಕಾರಿ ಸತ್ಯವನ್ನು ನಟ ಪ್ರಭಾಸ್ ಇತ್ತೀಚೆಗೆ ಬಿಚ್ಚಿಟ್ಟಿದ್ದಾರೆ. 'ಬಾಹುಬಲಿ' ರಿಲೀಸ್ ಆದಮೇಲೆ ಬರೋಬ್ಬರಿ 2 ರಿಂದ 3 ವರ್ಷಗಳ ಕಾಲ ತಮಗೆ ಸರಿಯಾಗಿ ನಿದ್ದೆ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಸಾವಿರ ಪಟ್ಟು ಹೆಚ್ಚಾದ ಜವಾಬ್ದಾರಿ, ನಿದ್ದೆಯಿಲ್ಲದ ರಾತ್ರಿಗಳು!

ಇತ್ತೀಚೆಗೆ ಬಿಡುಗಡೆಯಾಗಿರುವ 'ಬಾಹುಬಲಿ: ದಿ ಟಾರ್ಚ್‌ಬೇರರ್' ತೆರೆಹಿಂದಿನ ಸಾಕ್ಷ್ಯಚಿತ್ರದಲ್ಲಿ (ಡಾಕ್ಯುಮೆಂಟರಿ) ಮಾತನಾಡುತ್ತಾ ಪ್ರಭಾಸ್ ತಮ್ಮ ವೃತ್ತಿಜೀವನದ ಅತ್ಯಂತ ಒತ್ತಡದ ದಿನಗಳ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. "ಬಾಹುಬಲಿ ಚಿತ್ರದ ಭಾರಿ ಯಶಸ್ಸಿನ ನಂತರದ 2-3 ವರ್ಷಗಳು ನನ್ನ ಜೀವನದ ಅತ್ಯಂತ ಒತ್ತಡದ ದಿನಗಳಾಗಿದ್ದವು. ಆ ಚಿತ್ರದ ನಂತರ ಪ್ರತಿ ವಿಭಾಗದಲ್ಲೂ ನನ್ನ ಮೇಲಿದ್ದ ಜವಾಬ್ದಾರಿಯ ಮಟ್ಟ ಇದ್ದಕ್ಕಿದ್ದಂತೆ ಸಾವಿರ ಪಟ್ಟು ಹೆಚ್ಚಾಯಿತು. ಹೀಗಾಗಿ ಆ ಸಮಯದಲ್ಲಿ ನನಗೆ ಸರಿಯಾಗಿ ನಿದ್ದೆ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ" ಎಂದು ಪ್ರಭಾಸ್ ಆ ದಿನಗಳ ಕಷ್ಟವನ್ನು ನೆನೆದಿದ್ದಾರೆ.

ಕರ್ನಾಟಕದಲ್ಲಿ 'ಧುರಂಧರ್ 2' ಸಿನಿಮಾ ಈವರೆಗೂ ಗಳಿಸಿದ್ದೆಷ್ಟು? 'ಬಾಹುಬಲಿ 2' ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬೇಕು?

40 ಕೋಟಿಯಿಂದ ನೂರಾರು ಕೋಟಿಗೆ ಜಂಪ್ ಆದ ಬಜೆಟ್

"ಬಾಹುಬಲಿ ಚಿತ್ರಕ್ಕೂ ಮುನ್ನ ನನ್ನ ಸಿನಿಮಾಗಳು ಸಾಮಾನ್ಯವಾಗಿ 20 ರಿಂದ 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದವು. ಆದರೆ 'ಬಾಹುಬಲಿ' ತೆಲುಗು ಚಿತ್ರರಂಗದ ವ್ಯಾಪ್ತಿಯನ್ನೇ ಬದಲಾಯಿಸಿತು. ಅಲ್ಲಿಂದ ಮುಂದಕ್ಕೆ ನನ್ನ ಚಿತ್ರಗಳನ್ನು ಪ್ರೇಕ್ಷಕರು ಸ್ವೀಕರಿಸುವ ರೀತಿಯೇ ಬದಲಾಯಿತು. ಈ ಚಿತ್ರ ತಂದುಕೊಟ್ಟ ಯಶಸ್ಸಿನಿಂದಾಗಿಯೇ 'ಸಾಹೋ'ನಂತಹ ದೊಡ್ಡ ಸಿನಿಮಾದ ನಿರ್ಮಾಣ ಹಾಗೂ 'ರಾಧೆ ಶ್ಯಾಮ್' ಚಿತ್ರದ ಹಡಗಿನ ಅದ್ಧೂರಿ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಯಿತು" ಎಂದು ಪ್ರಭಾಸ್ ತಿಳಿಸಿದ್ದಾರೆ.

ಉತ್ತರ ಭಾರತದ ಕಲೆಕ್ಷನ್ ನೋಡಿ ನನಗೇ ಶಾಕ್!

ಉತ್ತರ ಭಾರತದಲ್ಲಿ ತಮಗಿರುವ ಕ್ರೇಜ್ ಬಗ್ಗೆ ಮಾತನಾಡಿದ ಪ್ರಭಾಸ್, "ಸಾಹೋ ಚಿತ್ರಕ್ಕೆ ಉತ್ತರ ಭಾರತದಲ್ಲಿ ಸಿಕ್ಕ ಮೊದಲ ದಿನದ ಕಲೆಕ್ಷನ್ ನನಗೆ ನಿಜಕ್ಕೂ ಆಶ್ಚರ್ಯ ತಂದಿತ್ತು. ಏಕೆಂದರೆ, ಅಲ್ಲಿ ಮೊದಲ ದಿನವೇ ಸುಮಾರು 26 ಕೋಟಿ ರೂಪಾಯಿ ಗಳಿಕೆಯಾಗಿತ್ತು. ಇಂತಹದ್ದೊಂದು ಮೈಲಿಗಲ್ಲು ತಲುಪಲು ಬಾಹುಬಲಿ ಹಾಕಿಕೊಟ್ಟ ಬಲವಾದ ಅಡಿಪಾಯವೇ ಕಾರಣ" ಎಂದಿದ್ದಾರೆ.

Ramya Krishnan: 'ಬಾಹುಬಲಿ' ನಟಿ ರಮ್ಯಾ ಕೃಷ್ಣ ವಿಚ್ಛೇದನ? ಕೊನೆಗೂ ಕ್ಲಾರಿಟಿ ಕೊಟ್ಟ ಗಂಡ ಕೃಷ್ಣ ವಂಶಿ

"ಬಾಹುಬಲಿ ನಮಗೆ ತಾಯಿ ಇದ್ದಂತೆ..."

"ನನ್ನ ಬಳಿ ತಾಯಿಯಂತಿರುವ 'ಬಾಹುಬಲಿ' ಸಿನಿಮಾ ಇತ್ತು. ಇದರಿಂದಾಗಿಯೇ ಇಂದು ನಮಗೆ ಧೈರ್ಯವಾಗಿ ಮುಂದೆ ಹೋಗಿ 'ಕಲ್ಕಿ 2898 ಎಡಿ' ಮತ್ತು 'ಸಲಾರ್'ನಂತಹ ಬೃಹತ್ ಚಿತ್ರಗಳನ್ನು ಮಾಡಲು ಸಾಧ್ಯವಾಯಿತು. ʻಬಾಹುಬಲಿʼ ಮೊದಲು ಬಂದು ಹಾದಿ ಸುಗಮ ಮಾಡಿಕೊಟ್ಟಿದ್ದರಿಂದಲೇ ಇವೆಲ್ಲವೂ ಸಾಧ್ಯವಾಯಿತು" ಎಂದು ಪ್ರಭಾಸ್ ಕೃತಜ್ಞತೆ ಸಲ್ಲಿಸಿದ್ದಾರೆ.