ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Jayamala Interview: ತವರು ಮನೆ ಸೇರುವ ತವಕವೇ ಫಿಲ್ಮ್‌ ಚೇಂಬರ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಕಾರಣ: ನಟಿ ಜಯಮಾಲಾ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಡಾ.ಜಯಮಾಲಾ ಅವರು ಶನಿವಾರ ಆಯ್ಕೆಯಾಗಿದ್ದಾರೆ. ಚುನಾವಣೆ ಹಿನ್ನೆಲೆ ವಿಶ್ವವಾಣಿಗೆ ಅವರು ನೀಡಿದ ಸಂದರ್ಶನದಲ್ಲಿ ಮುಂದೆ ವಾಣಿಜ್ಯ ಮಂಡಳಿಯ ರೂಪು ರೇಷೆಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಹಿರಿಯ ನಟಿ ಜಯಮಾಲಾ (ಸಂಗ್ರಹ ಚಿತ್ರ)

| ವಿಶ್ವವಾಣಿ ಸಂದರ್ಶನ, ಪ್ರಶಾಂತ್ ಟಿ.ಆರ್

ಬೆಂಗಳೂರು: ಕನ್ನಡ ಚಿತ್ರರಂಗ ನನ್ನ ತವರು ಮನೆ. ಆ ತವರು ಮನೆಗೆ ಮತ್ತೆ ಬರಬೇಕೆಂಬ ತವಕವಿದೆ. ಆದ್ದರಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಹಿರಿಯ ನಟಿ, ನಿರ್ಮಾಪಕಿ, ಮಾಜಿ ಸಚಿವೆ ಡಾ.ಜಯಮಾಲಾ (Actress Jayamala interview) ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣಾ ಅಧ್ಯಕ್ಷ ಚುನಾವಣೆಗೆ ಸ್ಪರ್ಧೆ ಹಿನ್ನೆಲೆಯಲ್ಲಿ 'ವಿಶ್ವವಾಣಿ'ಗೆ (Vishwavani) ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ನಾನು ನಟಿಯಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಕನ್ನಡ ಚಿತ್ರರಂಗವೇ ಕಾರಣ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನನ್ನ ತವರು ಮನೆ ಇದ್ದಂತೆ. ಎಷ್ಟೇ ಬೆಳೆದರೂ ತವರು ಮನೆಯನ್ನು ಮರೆಯುವುದಿಲ್ಲ. ತವರು ಮನೆಯ ಸೇವೆ ಖುಷಿ ಕೊಡುತ್ತದೆ. 2008ರಿಂದ 2010 ನಾನು ಅಧ್ಯಕ್ಷೆಯಾಗಿದ್ದೆ. ಚಿತ್ರರಂಗದ ಅಭಿವೃದ್ಧಿಗೆ ಶಕ್ತಿಮೀರಿ ಅವಧಿಯಲ್ಲಿ ಶ್ರಮಸಿದ್ದೇನೆ ಎಂದು ಹೇಳಿದ್ದಾರೆ.

Actress Jayamala

ಅಧ್ಯಕ್ಷೀಯ ಚುನಾವಣೆ ನಿಲ್ಲುವುದಕ್ಕೆ ಪ್ರಮುಖ ಕಾರಣವೇನು?

ನಾನು ನಟಿಯಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಕನ್ನಡ ಚಿತ್ರರಂಗವೇ ಕಾರಣ. ಕರ್ನಾಟಕ ಚಲ ನಚಿತ್ರ ವಾಣಿಜ್ಯ ಮಂಡಳಿ ನನ್ನ ತವರು ಮನೆ ಇದ್ದಂತೆ. ನಾವು ಯಾವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ ತವರು ಮನೆಯನ್ನು ಮರೆಯುವುದಿಲ್ಲ. ತವರು ಮನೆಯ ಸೇವೆ ಖುಷಿ ಕೊಡುತ್ತದೆ. 2008ರಿಂದ 2010ರವರೆಗೆ ನಾನು ಅಧ್ಯಕ್ಷೆಯಾಗಿದ್ದೆ. ಆ ಅವಧಿಯಲ್ಲಿ ಚಿತ್ರರಂಗದ ಅಭಿವೃದ್ಧಿಗೆ ಶ್ರಮಮೀರಿ ಶ್ರಮಸಿದ್ದೇನೆ. ಅದನ್ನು ಮನಗಂಡ ನಮ್ಮ ಮನೆಯ ಸಹೋದರರು ನನ್ನನ್ನು ಮತ್ತೊಮ್ಮೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಂತೆ ಕರೆತಂದಿದ್ದಾರೆ. ಅದಕ್ಕಿಂತ ಸಂತೋಷ ಬೇರೇನಿದೆ?

ಮುಂದಿರುವ ಗುರಿಯೇನು?

ಕಲಾವಿದರನ್ನು ಹುಟ್ಟುಹಾಕುವುದು ನಿರ್ಮಾಪಕ, ನಿರ್ದೇಶಕ, ವಿತರಕ ಮತ್ತು ಪ್ರದರ್ಶಕರು, ಅವರ ಪ್ರೋತ್ಸಾಹ ಇಲ್ಲದಿದ್ದರೆ ನಾವು ಈ ಮಟ್ಟಕ್ಕೆ ಬರಲಾಗುತ್ತಿರಲಿಲ್ಲ. ಈಗ ಅವರೆಲ್ಲರ ಹಿತಕಾಯುವುದು ನನ್ನ ಮೊದಲ ಆದ್ಯತೆಯಾಗಿದೆ. ಚಿತ್ರರಂಗ ನೂರರ ಹೊಸ್ತಿಲಲ್ಲಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಇಂದಿಗೂ ಸರಿಯಾದ ಸೂರಿಲ್ಲ, ಆರೋಗ್ಯ ಸೇವೆಯೂ ಸಿಗುತ್ತಿಲ್ಲ ಎಂಬ ನೋವಿದೆ. ಅವರನ್ನು ಗುರುತಿಸುವ ಕೆಲಸ ಆಗಬೇಕು. ಈಗ ನಮ್ಮ ಸರಕಾವೇ ಅಧಿಕಾರದಲ್ಲಿದೆ. ಹಾಗಾಗಿ ನಮ್ಮವರನ್ನು ರಕ್ಷಣೆ ಮಾಡುವ ಕಾರ್ಯ ಆಗಲಿದೆ. ಅದು ಸಿನಿಮಾರಂಗದ ತುರ್ತು ಅಗತ್ಯವೂ ಆಗಿದೆ.

_Jayamala   (1)

ಯಾವ ರೀತಿಯಲ್ಲಿ ಸಿನಿಮಾ ರಂಗ ಬೆಳೆಸುವ ಆಲೋಚನೆ ಇದೆ?

ಮೊದಲು ಸಣ್ಣ ಸಿನಿಮಾ ದೊಡ್ಡ ಸಿನಿಮಾಗಳು ಎನ್ನದೆ ವಿತರಕರು ಎಲ್ಲಾ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು. ಇದರಿಂದ ನಿರ್ಮಾಪಕರಿಗೆ ಹಾಕಿದ ಬಂಡವಾಳ ಮರಳಿ ಬರುತ್ತಿತ್ತು. ಯಾಕೆಂದರೆ ಅಂದು ಮೂರು ಸಾವಿರದಷ್ಟು ಚಿತ್ರಮಂದಿರಗಳಿದ್ದವು. ಎಲ್ಲಾ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಈಗ ಆ ದಿನವನ್ನು ಮರಳಿ ತರಬೇಕಾದ ಅಗತ್ಯವಿದೆ. ಇಂದು ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಅದರ ಸಾಧಕ ಬಾಧಕಗಳನ್ನು ಕಂಡುಕೊಂಡಿದ್ದೇವೆ. ಇದರ ಉತ್ತುಂಗ, ಪಾತಾಳ ಎಲ್ಲವನ್ನು ನೋಡಿದ್ದೇವೆ. ಮನೆ ಮಠ ಮಾರಿದ ನಿರ್ಮಾಪಕರು, ಅವರ ನಡುವೆಯೇ ಸಾವಿರಾರು ಕೋಟಿಗಳಿಸಿದ ನಿರ್ಮಾಪಕರ ನಿದರ್ಶನಗಳೂ ನಮ್ಮ ಮುಂದಿವೆ. ಒಟಿಟಿ ಫ್ಲಾಟ್ ಫಾರ್ಮ್‌ಗಳಲ್ಲಿ ಸಣ್ಣ ಸಿನಿಮಾಗಳಿಗೆ ವೇದಿಕೆ ಕಲ್ಪಿಸಿಕೊಡಬೇಕು. ಒಟಿಟಿ ಫಾರ್ಮ್‌ಲ್ಲಿ ಕೇರಳದ ಪ್ರಯೋಗ ಯಶಸ್ವಿ ಯಾಗಿದೆ. ಅದು ಇಲ್ಲಿಯೂ ಜಾರಿಯಾಗಬೇಕು. ಸರಕಾರದ ಮಟ್ಟದಲ್ಲಿ ಆ ಕೆಲಸ ಆಗಬೇಕು.

image

ನಮ್ಮಲ್ಲಿಯೂ ಚಿತ್ರನಗರಿ ಆಗಬೇಕು. ಅದರ ಜತೆಗೆ ಕಲಾವಿದರ ಸಂಘದಲ್ಲಿ ತರಬೇತಿ ಸಂಸ್ಥೆ ಆರಂಭವಾಗಬೇಕು. ಡಾ.ರಾಜ್ ಕುಮಾರ್ ಅವರ ಆಶಯದಂತೆ ಕಲಾವಿದರನ್ನು ಹುಟ್ಟುಹಾಕಬೇಕು, ಅವರಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು. ಆಗ ಚಿತ್ರರಂಗಕ್ಕೆ ಮತ್ತಷ್ಟು ಹೊಸಬರು ಬರುತ್ತಾರೆ. ಹೊಸಬರು ಹೊಸ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿಯೂ ಚಿಂತನೆ ಮಾಡುತ್ತಿದ್ದೇನೆ.

ಡಾ.ಜಯಮಾಲ, ಹಿರಿಯ ನಟಿ

_Jayamala

ಚಿತ್ರರಂಗದಲ್ಲಿ ಇಂದಿನ ಅಗತ್ಯವೇನು ಅನಿಸುತ್ತದೆ?

ಚಿತ್ರರಂಗವನ್ನು ಉದ್ಯಮ ಅಂತ ಪರಿಗಣಿಸಿದಾಗ ನಿರ್ಮಾಪಕರು, ವಿತರಕರಿಗೆ ಸಾಲಗಳು ದೊರೆಯುತ್ತವೆ. ಆಗ ಹೆಚ್ಚಿನ ಬಂಡವಾಳ ಹರಿದು ಬರುತ್ತದೆ. ಇದರಿಂದ ಸಿನಿಮಾ ನಿರ್ಮಾಣ ಮಾಡುವ ಜತೆಗೆ ವಿತರಣೆಗೂ ಸಹಾಯವಾಗುತ್ತದೆ. ಇವೆಲ್ಲಾ ಸಾಧ್ಯತೆಗಳು ನಮ್ಮ ಕಣ್ಣಮುಂದೆ ಇದೆ. ಇದನ್ನು ನಾವು ಬಳಸಿಕೊಳ್ಳಬೇಕಾ ಗಿದೆ. ಇದರೊಂದಿಗೆ ಹೊಸಬರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಸಿನಿಮಾರಂಗಕ್ಕೆ ಬರುತ್ತಾರೆ. ಅವರಿಗೂ ಪ್ರೋತ್ಸಾಹ ನೀಡಬೇಕು. ಸಮಸ್ಯೆಗಳ ಹಿಂದೆಯೇ ಪರಿಹಾರವಿದೆ. ಅದನ್ನು ಕಂಡುಕೊಳ್ಳಬೇಕು.

ಸಿನಿಮಾ ರಂಗ ಕಾಡುತ್ತಿರುವ ಪೈರಸಿಗೆ ನಿಮ್ಮ ನಿಲುವು?

ಪೈರಸಿ ಚಿತ್ರರಂಗವನ್ನು ಸುಡುತ್ತಿದೆ. ನಾನು ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿದ್ದಾಗಲೇ ಪೈರಸಿ ಮಾಡುವವರ ವಿರುದ್ಧ ಗೂಂಡಾ ಕಾಯಿದೆ ಜಾರಿ ಮಾಡಲು ಒತ್ತಾಯಿಸಿದ್ದೆವು. ಇದರಿಂದ ಚಿತ್ರರಂಗಕ್ಕೆ ರಕ್ಷಣೆ ಸಿಗುತ್ತಿತ್ತು. ಆದರೆ ಅದು ಬಳಕೆಯಾಗಲಿಲ್ಲ. ಮುಂದೆ ಪೈರಸಿ ತಡೆಗಟ್ಟಲು ಕಠಿಣ ಕ್ರಮಕೈಗೊಳ್ಳಬೇಕು. ಅದು ನಮ್ಮ ಮೊದಲ ಆದ್ಯತೆಯಾಗಿದೆ.

Karnataka Film Chamber: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ