ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿʼ; ಸ್ನೇಹಿತ ವೈಶಾಖ್ ಆತ್ಮಹತ್ಯೆ ಬೆನ್ನಲ್ಲೇ ನಟಿ ಕೃಷಿ ತಾಪಂಡ ಅಸಮಾಧಾನ

ನಟಿ ಕೃಷಿ ತಾಪಂಡ ತಮ್ಮ ಮನೆಯಲ್ಲಿ ಸಂಭವಿಸಿದ ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆಯ ಆಘಾತಕಾರಿ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ತೀವ್ರ ದುಃಖದಲ್ಲಿರುವ ತಮ್ಮ ಹಾಗೂ ಮೃತರ ಕುಟುಂಬದ ಮೇಲೆ ನಿರಂತರವಾಗಿ ಊಹಾಪೋಹ ಹಾಗೂ ಪ್ರಶ್ನೆಗಳ ಒತ್ತಡ ಹೇರುತ್ತಿರುವವರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ಕೃಷಿ ತಾಪಂಡ ಮನೆಯಲ್ಲಿ ಈಚೆಗೆ ಅವರ ಸ್ನೇಹಿತ ವೈಶಾಖ್ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಘಟನೆಯು ಅವರ ಆಪ್ತ ವಲಯದಲ್ಲಿ ಆಘಾತವನ್ನು ಉಂಟು ಮಾಡಿತ್ತು. ಇದೀಗ ಕೃಷಿ ತಾಪಂಡ ಅವರು ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. "ದಯವಿಟ್ಟು ಆತನ ಆತ್ಮಕ್ಕೆ ಶಾಂತಿ ಸಿಗಲು ಬಿಡಿ ಮತ್ತು ಆತನ ಕುಟುಂಬ, ಸ್ನೇಹಿತರು ಹಾಗೂ ನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.

ನಾನು ಇದನ್ನು ಬರೆಯಲೇಬೇಕಾದ ಪರಿಸ್ಥಿತಿ ಬಂದಿದೆ

"ಇಂತಹದ್ದೊಂದನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ.. ಇದನ್ನು ಬರೆಯಲು ಅಥವಾ ಈ ಜಗತ್ತಿನ ಮುಂದೆ ಇಡಲು ನನ್ನಲ್ಲಿ ಶಕ್ತಿಯಾಗಲಿ ಅಥವಾ ಮಾನಸಿಕ ದೃಢತೆಯಾಗಲಿ ಇಲ್ಲ. ಇಂತಹ ಕಠಿಣ ಸಮಯದಲ್ಲಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವುದು ನನಗಂತೂ ಇಷ್ಟವಿರಲಿಲ್ಲ. ಆದರೆ, ನನ್ನ ಮೇಲೆ, ನನ್ನ ಸ್ನೇಹಿತರ ಮೇಲೆ ಮತ್ತು ನಮ್ಮ ಕುಟುಂಬಗಳ ಮೇಲೆ ನಿರಂತರವಾಗಿ ಬರುತ್ತಿರುವ ಒತ್ತಡ, ಊಹಾಪೋಹಗಳು ಹಾಗೂ ಕೇಳಲಾಗುತ್ತಿರುವ ಪ್ರಶ್ನೆಗಳಿಂದಾಗಿ ನಾನು ಇದನ್ನು ಬರೆಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಕೃಷಿ ತಾಪಂಡ ಹೇಳಿದ್ದಾರೆ.

"ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಇಂತಹದೊಂದು ದೊಡ್ಡ ನಷ್ಟವನ್ನು ಎದುರಿಸಿ, ನಾವು ಕೇವಲ ಬದುಕುಳಿಯಲು ಹೆಣಗಾಡುತ್ತಿರುವ ಈ ಸಮಯದಲ್ಲಿ, ನಾವು ಅದಕ್ಕೆ ವಿವರಣೆ ನೀಡಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಕಳೆದ ಕೆಲವು ದಿನಗಳು ನನ್ನ ಜೀವನವನ್ನು ನಾನು ಎಂದಿಗೂ ಊಹಿಸದ ರೀತಿಯಲ್ಲಿ ಬದಲಾಯಿಸಿಬಿಟ್ಟಿವೆ" ಎಂದು ಕೃಷಿ ತಾಪಂಡ ತಿಳಿಸಿದ್ದಾರೆ.

Krishi Thapanda: ನನ್ನ ಪಾಡಿಗೆ ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ

ವಿವರಿಸಲಾಗದ ಶೂನ್ಯತೆಯನ್ನು ಸೃಷ್ಟಿಸಿದೆ

"ಇಷ್ಟೆಲ್ಲಾ ಸಂಭವಿಸಿರುವ ಬೆನ್ನಲ್ಲೇ, ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ಅವರು ಸದಾ ನನ್ನ ಬೆನ್ನಿಗೆ ನಿಂತು, ನನ್ನನ್ನು ರಕ್ಷಿಸಿ, ಕೇವಲ ದಯೆಯುಳ್ಳ ಹೃದಯದಿಂದ ನನ್ನನ್ನು ನೋಡಿಕೊಂಡಿದ್ದರು. ಅವರನ್ನು ಕಳೆದುಕೊಂಡಿರುವುದು ಮಾತುಗಳಲ್ಲಿ ವಿವರಿಸಲಾಗದ ಶೂನ್ಯತೆಯನ್ನು ಸೃಷ್ಟಿಸಿದೆ. ಈ ನಷ್ಟವನ್ನು ನಾನು ಎಂದಾದರೂ ಒಪ್ಪಿಕೊಳ್ಳಲು ಸಾಧ್ಯವೇ? ನನಗೇ ತಿಳಿಯುತ್ತಿಲ್ಲ" ಎಂದಿದ್ದಾರೆ ಕೃಷಿ ತಾಪಂಡ.

ದುಃಖಿಸಲು ಸಹ ಅವಕಾಶ ಸಿಗುತ್ತಿಲ್ಲ

"ನಾನು ಬಹಳ ದಿನಗಳಿಂದ ನೋವನ್ನು ಹೊತ್ತು ನಡೆಯುತ್ತಿದ್ದೇನೆ, ಈಗ ನೋಡಿದರೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಮತ್ತೊಂದು ದುಃಖದಲ್ಲಿ ನಾನಿದ್ದೇನೆ. ಈ ಪಯಣದಲ್ಲಿ ನನ್ನದೇ ಕೆಲವು ತುಣುಕುಗಳನ್ನು ನಾನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಇದನ್ನೆಲ್ಲಾ ಎಲ್ಲದಕ್ಕಿಂತ ಹೆಚ್ಚು ಕಷ್ಟಕರವಾಗಿಸಿರುವುದು ಏನೆಂದರೆ, ನನಗೆ ಕನಿಷ್ಠ ದುಃಖಿಸಲು ಸಹ ಸಮಯ ಅಥವಾ ಮುಕ್ತ ಅವಕಾಶ ಸಿಗುತ್ತಿಲ್ಲ" ಎಂದು ಕೃಷಿ ತಾಪಂಡ ಹೇಳಿದ್ದಾರೆ.

ಊಹಾಪೋಹಗಳನ್ನು ಹರಡಲಾಗುತ್ತಿದೆ

"ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರು ಈ ಭರಿಸಲಾಗದ ನಷ್ಟವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ನಿರಂತರವಾಗಿ ಊಹಾಪೋಹಗಳನ್ನು ಹರಡಲಾಗುತ್ತಿದೆ, ಕಲ್ಪನೆಗಳನ್ನು ಹೆಣೆಯಲಾಗುತ್ತಿದೆ ಮತ್ತು ಒಬ್ಬರ ಸಾವನ್ನು ಕೇವಲ ಒಂದು ಸುದ್ದಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಕೆಲವು ಮಾಧ್ಯಮಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಗೌರವಯುತವಾಗಿ ನಡೆದುಕೊಂಡಿದ್ದರೆ, ಇನ್ನು ಕೆಲವು ಮಾಧ್ಯಮಗಳು ನಮ್ಮಿಂದ ಏನಾದರೂ ಒಂದು ಪ್ರತಿಕ್ರಿಯೆ ಪಡೆಯಲು ಪ್ರಚೋದಿಸುತ್ತಲೇ ಇವೆ. ಅವರ ಮೊದಲ ಪ್ರಶ್ನೆ ಯಾವಾಗಲೂ ʻನಿಮ್ಮ ಪ್ರತಿಕ್ರಿಯೆ ಏನು?ʼ ಎಂದಿರುತ್ತದೆಯೇ ಹೊರತು, ʻನೀವು ಚೆನ್ನಾಗಿದ್ದೀರಾ?ʼ ಅಥವಾ ʻಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದೀರಾ?ʼ ಎಂಬುದಾಗಿ ಇರುವುದಿಲ್ಲ" ಎಂದು ಕೃಷಿ ತಾಪಂಡ ಬರೆದುಕೊಂಡಿದ್ದಾರೆ.‌

ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ; ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ

"ನಾನು ಇಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ. ಬದಲಿಗೆ, ಸತ್ಯ ಏನೆಂದು ತಿಳಿಯದೆ ಅಥವಾ ತಮ್ಮ ನಡವಳಿಕೆಯಿಂದ ಹಿಂದೆ ಉಳಿದಿರುವ ಜನರ ಮೇಲಾಗುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳದೆ, ಕೇವಲ ಉತ್ತರಗಳಿಗಾಗಿ ಹುಡುಕುತ್ತಿರುವ ಪ್ರತಿಯೊಬ್ಬರಿಗೂ ಇದನ್ನು ಹೇಳುತ್ತಿದ್ದೇನೆ. ದುಃಖದಲ್ಲಿರುವ ಯಾವುದೇ ವ್ಯಕ್ತಿಯೂ ತನ್ನ ನೋವನ್ನು ನ್ಯಾಯಸಮ್ಮತ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇರಬಾರದು" ಎಂದಿದ್ದಾರೆ ಕೃಷಿ ತಾಪಂಡ.

ಎಲ್ಲವನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ

"ನನಗಾಗಿ ಪ್ರಾರ್ಥಿಸುತ್ತಿರುವ, ನನ್ನ ಯೋಗಕ್ಷೇಮ ವಿಚಾರಿಸುತ್ತಿರುವ, ನನ್ನ ಸ್ನೇಹಿತರ ಮೂಲಕ ನನ್ನನ್ನು ಸಂಪರ್ಕಿಸುತ್ತಿರುವ ಮತ್ತು ಪ್ರೀತಿ-ದಯೆ ತುಂಬಿದ ಸಂದೇಶಗಳನ್ನು ಕಳುಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸದ್ಯಕ್ಕೆ ಪ್ರತಿಯೊಬ್ಬರಿಗೂ ಉತ್ತರಿಸುವಷ್ಟು ಶಕ್ತಿ ನನ್ನಲ್ಲಿ ಇಲ್ಲದಿರಬಹುದು, ಆದರೆ ನಿಮ್ಮ ಪ್ರೀತಿಯನ್ನು ನಾನು ಕಾಣುತ್ತಿದ್ದೇನೆ ಮತ್ತು ಅದಕ್ಕೆ ನಾನು ಕೃತಜ್ಞಳಾಗಿದ್ದೇನೆ. ನಾನು ನನ್ನ ಸ್ನೇಹಿತರ ನಡುವೆ ಇದ್ದೇನೆ, ನನ್ನಲ್ಲಿ ಉಳಿದಿರುವ ಅತ್ಯಲ್ಪ ಶಕ್ತಿಯಿಂದಲೇ ಸಂಭವಿಸಿರುವ ಎಲ್ಲವನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ" ಎಂದು ಕೃಷಿ ತಾಪಂಡ ಬರೆದುಕೊಂಡಿದ್ದಾರೆ.

ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬವಿದೆ

"ಮಾಧ್ಯಮಗಳಿಗೆ (ಎಲ್ಲರಿಗೂ ಅಲ್ಲ) ಮತ್ತು ಊಹಾಪೋಹಗಳನ್ನು ಮುಂದುವರಿಸುತ್ತಿರುವ ಪ್ರತಿಯೊಬ್ಬರಿಗೂ ನಾನು ಕೈಮುಗಿದು ವಿನಂತಿಸಿಕೊಳ್ಳುತ್ತಿದ್ದೇನೆ, ದಯವಿಟ್ಟು ಇದನ್ನು ನಿಲ್ಲಿಸಿ. ದಯವಿಟ್ಟು ಅವರ ಕುಟುಂಬವನ್ನಾಗಲಿ, ನನ್ನ ಕುಟುಂಬವನ್ನಾಗಲಿ ಅಥವಾ ನಮ್ಮ ಸ್ನೇಹಿತರನ್ನಾಗಲಿ ತೊಂದರೆಗೆ ಸಿಲುಕಿಸಬೇಡಿ. ದಯವಿಟ್ಟು ಒಬ್ಬರ ಸಾವನ್ನು ಹೆಡ್‌ಲೈನ್ಸ್ ಅಥವಾ ಮನರಂಜನೆ ಸರಕನ್ನಾಗಿ ಮಾಡಬೇಡಿ. ಅಲ್ಲಿ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬವಿದೆ.‌ ಮಾತುಗಳಿಗೆ ನಿಲುಕದಷ್ಟು ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ಸ್ನೇಹಿತರಿದ್ದಾರೆ. ಪ್ರತಿ ಕ್ಷಣವೂ ಈ ದುಃಖದ ನಡುವೆ ಬದುಕಲು ಹೋರಾಡುತ್ತಿರುವ ಜನರಿದ್ದಾರೆ. ದಯವಿಟ್ಟು ಆತನ ಅಗಲಿಕೆಗೆ ಗೌರವಯುತವಾಗಿ ಮತ್ತು ಶಾಂತಿಯಿಂದ ಶೋಕಿಸಲು ನಮಗೆ ಪ್ರೈವೆಸಿ ನೀಡಿ" ಎಂದು ಮನವಿ ಮಾಡಿದ್ದಾರೆ ಕೃಷಿ ತಾಪಂಡ.

ಕೃಷಿ ತಾಪಂಡ ಹಂಚಿಕೊಂಡ ಪೋಸ್ಟ್



ಭರವಸೆ ಕಳೆದುಕೊಳ್ಳಲು ನೀವೇ ಕಾರಣವಾಗಬೇಡಿ

"ಮಾನಸಿಕ ಆರೋಗ್ಯ ಎಂಬುದು ಬಹಳ ಸೂಕ್ಷ್ಮವಾದದ್ದು. ದುಃಖ ಎಂಬುದು ಅಷ್ಟೇ ಸೂಕ್ಷ್ಮವಾದದ್ದು. ಪ್ರತಿಯೊಂದು ಅನಗತ್ಯ ಪ್ರಶ್ನೆ, ಪ್ರತಿಯೊಂದು ಕಲ್ಪನೆ, ಪ್ರತಿಯೊಂದು ವದಂತಿ ಮತ್ತು ಪ್ರತಿಯೊಂದು ಹೆಡ್‌ಲೈನ್ ಕೂಡ ಇಲ್ಲೇ ಉಳಿದು, ಈ ನಷ್ಟವನ್ನು ಸಹಿಸಿಕೊಂಡು ಬದುಕಲು ಪ್ರಯತ್ನಿಸುತ್ತಿರುವ ಜನರ ಮೇಲೆ ಭೀಕರ ಪರಿಣಾಮ ಬೀರುತ್ತದೆ. ನಾನು ಯಾವಾಗಲೂ ನಂಬಿಕೊಂಡು ಬಂದಿರುವ ಒಂದು ವಿಷಯವಿದ್ದರೆ ಅದು ಇಷ್ಟೇ, ನಿಮಗೆ ಯಾರ ಮುಖದಲ್ಲೂ ನಗು ತರಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರ ಕಣ್ಣೀರಿಗೆ ನೀವೇ ಕಾರಣವಾಗಬೇಡಿ. ನಿಮಗೆ ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳಲು ನೀವೇ ಕಾರಣವಾಗಬೇಡಿ" ಎಂದು ಕೃಷಿ ತಾಪಂಡ ಬರೆದುಕೊಂಡಿದ್ದಾರೆ.

"ಮತ್ತೊಮ್ಮೆ ಎಲ್ಲರಲ್ಲೂ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಆತನ ಆತ್ಮಕ್ಕೆ ಶಾಂತಿ ಸಿಗಲು ಬಿಡಿ ಮತ್ತು ಆತನ ಕುಟುಂಬ, ಸ್ನೇಹಿತರು ಹಾಗೂ ನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿ. ದಯವಿಟ್ಟು ದಯೆಯ ಹಾದಿಯನ್ನು ಆಯ್ದುಕೊಳ್ಳಿ. ನಾನು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಇದನ್ನು ನಿಲ್ಲಿಸಿ" ಎಂದು ಕೃಷಿ ಹೇಳಿದ್ದಾರೆ.