ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5 ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿದ ನಟಿ ಕೃತಿ ಸನೋನ್; ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ಬಾಲಿವುಡ್‌ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ತಮ್ಮ 35ನೇ ವಯಸ್ಸಿನಲ್ಲಿ ಸಾಮಾಜಿಕ ಮತ್ತು ವಯಸ್ಸಿನ ಒತ್ತಡಕ್ಕೆ ಮಣಿಯದೆ ಕೆಲವು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. 'ಮಿಮಿ' ಚಿತ್ರದ ಚಿತ್ರೀಕರಣದ ಬಿಡುವಿನಲ್ಲಿ ಈ ಕಠಿಣ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗಿದ್ದ ಅವರು, ಅಂಡಾಣು ಫ್ರೀಜ್ ಮಾಡಿದ್ದಾರೆ. ಆ ಜರ್ನಿ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ನಟಿ ಕೃತಿ ಸನೋನ್ ಅಂಡಾಣು ಫ್ರೀಜಿಂಗ್ ಮಾಡಿಸಿದ್ದೇಕೆ? ಇಲ್ಲಿದೆ ಉತ್ತರ

-

Avinash GR
Avinash GR Jul 7, 2026 2:04 PM

‘ಮಿಮಿ’, ‘ಬರೇಲಿ ಕಿ ಬರ್ಫಿ’ ಹಾಗೂ ‘ಲುಕಾ ಚುಪ್ಪಿ’ಯಂತಹ ಹಿಟ್ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಸದ್ಯ 35ನೇ ವಯಸ್ಸಿಗೆ ಕಾಲಿಟ್ಟಿರುವ ಕೃತಿಗೆ ಮದುವೆ ಹಾಗೂ ಮಕ್ಕಳ ಕುರಿತಾದ ಪ್ರಶ್ನೆಗಳು ಹೆಚ್ಚಾಗಿ ಎದುರಾಗುತ್ತಿದ್ದು, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಾನು ಕೆಲವು ವರ್ಷಗಳ ಹಿಂದೆಯೇ ತನ್ನ ಅಂಡಾಣುಗಳನ್ನು ಫ್ರೀಜ್ ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ 'ಹ್ಯೂಮನ್ಸ್ ಆಫ್ ಬಾಂಬೆ' ಸಂಸ್ಥಾಪಕಿ ಕರಿಷ್ಮಾ ಮೆಹ್ತಾ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಕೃತಿ ಸನೋನ್, "ನಿಮಗೆ ಇರುವುದು ಒಂದೇ ಜೀವನ. ನೀವು ಅದನ್ನು ಹೇಗೆ ಬದುಕಲು ಬಯಸುತ್ತೀರೋ ಹಾಗೆಯೇ ಬದುಕಬೇಕು. ಇದು ನಿಮ್ಮದೇ ಕಥೆ, ನೀವೇ ಬರೆಯಬೇಕು. ಬೇರೆ ಯಾರೂ ಅದನ್ನು ಬರೆಯಲು ಸಾಧ್ಯವಿಲ್ಲ" ಎಂದು ಕೃತಿ ಹೇಳಿದ್ದಾರೆ.

ಒತ್ತಡಕ್ಕೆ ಸಿಲುಕಲು ಇಷ್ಟವಿರಲಿಲ್ಲ

ಸಂದರ್ಶನದಲ್ಲಿ, ಮಹಿಳೆಯರಿಗೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಗರ್ಭಿಣಿಯಾಗುವುದು ಹೆಚ್ಚು ಕಷ್ಟಕರವಾಗಬಹುದು ಹಾಗೂ ಇದು ಹೆಚ್ಚಿನ ಆರೋಗ್ಯದ ತೊಂದರೆಗಳ ಅಪಾಯಕ್ಕೆ ಕಾರಣವಾಗಬಹುದು ಎಂಬ ವಿಷಯ ಪ್ರಸ್ತಾಪವಾದಾಗ ಉತ್ತರಿಸಿದ ಕೃತಿ, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಈಗಾಗಲೇ ನನ್ನ ಅಂಡಾಣುಗಳನ್ನು ಫ್ರೀಜ್ ಮಾಡಿದ್ದೇನೆ. ನಾನು ಈಗಲೇ ಮದುವೆಯಾಗಬೇಕು ಅಥವಾ ಈಗಲೇ ಮಕ್ಕಳನ್ನು ಹೊಂದಬೇಕು ಎಂಬ ವಯಸ್ಸಿನ ಒತ್ತಡಕ್ಕೆ ಸಿಲುಕಲು ನನಗೆ ಎಂದಿಗೂ ಇಷ್ಟವಿರಲಿಲ್ಲ. ನನ್ನ ಬಳಿ ಸಮಯದ ಮಿತಿ ಇದೆ ಎಂಬ ಕಾರಣಕ್ಕಾಗಿ ನಾನು ಆತುರದ ನಿರ್ಧಾರ ತೆಗೆದುಕೊಳ್ಳಲು ಬಯಸಲಿಲ್ಲ" ಎಂದಿದ್ದಾರೆ.

ಶಾಹಿದ್‌ ಕಪೂರ್‌ ನಟನೆಯ 'ಕಾಕ್‌ಟೇಲ್ 2' ಸಿನಿಮಾ ಹೇಗಿದೆ? ರಶ್ಮಿಕಾ - ಕೃತಿ ಸನೋನ್‌ ಅಭಿನಯಕ್ಕೆ ಸಿಕ್ತಾ ಫುಲ್‌ ಮಾರ್ಕ್ಸ್?

ಎಲ್ಲರಿಗೂ ಇದರ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ

"ಮದುವೆ ಅಥವಾ ಮಕ್ಕಳ ವಿಷಯದಲ್ಲಿ ನಿಮ್ಮ ಒಳಗಿನಿಂದ ಸಿದ್ಧರಾಗಿದ್ದೀರಿ ಎಂದು ಅನಿಸಿದಾಗ ಮಾತ್ರ ಆ ನಿರ್ಧಾರ ತೆಗೆದುಕೊಳ್ಳಬೇಕು. ಅದು ಯಾವುದೇ ಸಾಮಾಜಿಕ ಒತ್ತಡದಿಂದ ಬರಬಾರದು. ಎಲ್ಲರಿಗೂ ಇದರ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ನಾನು ಇದನ್ನು ಭರಿಸಬಲ್ಲ ಆರ್ಥಿಕ ಸ್ಥಿತಿಯಲ್ಲಿದ್ದೆ ಎಂಬುದು ನನ್ನ ಅದೃಷ್ಟ" ಎಂದು ನಟಿ ಹೇಳಿದ್ದಾರೆ.

'ಮಿಮಿ' ಚಿತ್ರದ ಸಮಯದಲ್ಲಿ ತೂಕ ಹೆಚ್ಚಳ

"ಬಾಡಿಗೆ ತಾಯಿತನದ ಕಥೆಯುಳ್ಳ 'ಮಿಮಿ' ಚಿತ್ರಕ್ಕಾಗಿ ನಾನು ತೂಕವನ್ನು ಹೆಚ್ಚಿಸಿಕೊಳ್ಳಬೇಕಾಗಿದ್ದ ಸಮಯದಲ್ಲಿ ನಾನು ಇದನ್ನು ತುಂಬಾ ಜಾಣ್ಮೆಯಿಂದ ಮಾಡಿದೆ. ಈ ಪ್ರಕ್ರಿಯೆಯು ದೇಹವನ್ನು ಸ್ವಲ್ಪ ಉಬ್ಬುವಂತೆ ಮಾಡುತ್ತದೆ. ಇದರ ಬಗ್ಗೆ ತಿಳಿದಿರುವವರ ಜೊತೆ ಮಾತನಾಡಿದಾಗ, 'ನಿಮ್ಮಿಂದ ಸಾಧ್ಯವಾದರೆ ನಿಮಗಾಗಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಹಾಗೂ ಅತ್ಯುತ್ತಮ ಉಡುಗೊರೆ ಇದು' ಎಂದು ಅವರು ನನಗೆ ಸಲಹೆ ನೀಡಿದ್ದರು. ಆ ಸಮಯದಲ್ಲಿ ನನಗೆ ಎರಡು ತಿಂಗಳು ಯಾವುದೇ ಶೂಟಿಂಗ್ ಇರಲಿಲ್ಲ. ನಾನು ಕೇವಲ ತೂಕ ಹೆಚ್ಚಿಸಿಕೊಳ್ಳಬೇಕಾಗಿತ್ತು. ಚಿತ್ರದ ಕಥೆಯೂ ಬಾಡಿಗೆ ತಾಯಿತನದ ಮೇಲಿದ್ದರಿಂದ ಪ್ರಕ್ರಿಯೆಯನ್ನು ಹತ್ತಿರದಿಂದ ಅನುಭವಿಸಿ ನಾನು ಈ ನಿರ್ಧಾರಕ್ಕೆ ಮುಂದಾದೆ" ಎಂದು ಕೃತಿ ವಿವರಿಸಿದ್ದಾರೆ.‌

ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸಿದ್ದಾರಾ ರಶ್ಮಿಕಾ ಮಂದಣ್ಣ - ಕೃತಿ ಸನೋನ್‌?‌ ಇಂಥದ್ದೊಂದು ವದಂತಿ ಹುಟ್ಟಿಕೊಂಡಿದ್ದೇಗೆ?

ಬಹುತೇಕ ಗರ್ಭಿಣಿ ಮಹಿಳೆಯಂತೆಯೇ ಅನಿಸುತ್ತದೆ

ಅಂಡಾಣು ಫ್ರೀಜ್ ಮಾಡುವುದು ಸುಲಭದ ಮಾತಲ್ಲ ಎಂದಿರುವ ಕೃತಿ, "ಇದು ಆರ್ಥಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಶ್ರಮವನ್ನು ಬೇಡುತ್ತದೆ. ಒಂದು ಹಂತದಲ್ಲಿ ಹಾರ್ಮೋನ್‌ಗಳ ಏರುಪೇರಿನಿಂದಾಗಿ ಬಹುತೇಕ ಗರ್ಭಿಣಿ ಮಹಿಳೆಯಂತೆಯೇ ಅನಿಸುತ್ತದೆ. ಮೂಡ್ ಸ್ವಿಂಗ್ಸ್ ನಿಯಂತ್ರಣ ಮೀರಿ ಹೋಗುತ್ತವೆ. ಆದರೂ ನಾನು ಧೈರ್ಯ ಮಾಡಿ ಅದನ್ನು ಮಾಡಿದೆ. ಈ ನಿರ್ಧಾರ ತಗೊಂಡಿದ್ದಕ್ಕೆ ನನಗೆ ಸಂತೋಷವಿದೆ" ಎಂದು ಕೃತಿ ಸನೋನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಏನಿದು ಅಂಡಾಣು ಫ್ರೀಜಿಂಗ್?

ಅಂಡಾಣು ಫ್ರೀಜಿಂಗ್ (Egg Freezing) ಎನ್ನುವುದು ವೈದ್ಯಕೀಯ ತಂತ್ರಜ್ಞಾನದ ಒಂದು ಪ್ರಕ್ರಿಯೆಯಾಗಿದೆ. ಇದರಲ್ಲಿ ವೈದ್ಯರು 10-12 ದಿನಗಳ ಕಾಲ ಹಾರ್ಮೋನ್ ಇಂಜೆಕ್ಷನ್‌ಗಳ ಮೂಲಕ ಮಹಿಳೆಯ ಅಂಡಾಶಯವನ್ನು ಉತ್ತೇಜಿಸಿ ಹಲವಾರು ಅಂಡಾಣುಗಳು ಬೆಳೆಯುವಂತೆ ಮಾಡುತ್ತಾರೆ. ನಂತರ ರೋಗಿಗೆ ಅರಿವಳಿಕೆ ನೀಡಿ, ಕೇವಲ 15 ರಿಂದ 20 ನಿಮಿಷಗಳ ಪ್ರಕ್ರಿಯೆಯಲ್ಲಿ ಆ ಅಂಡಾಣುಗಳನ್ನು ಹೊರತೆಗೆಯಲಾಗುತ್ತದೆ. ಹೊರತೆಗೆದ ಅಂಡಾಣುಗಳ ಪಕ್ವತೆಯನ್ನು ಪರೀಕ್ಷಿಸಿದ ನಂತರ ಅವುಗಳನ್ನು ಫ್ರೀಜ್ ಮಾಡಲಾಗುತ್ತದೆ. ಮುಂದೆ ಆ ಮಹಿಳೆ ಮದುವೆ ಅಥವಾ ಮಗುವನ್ನು ಹೊಂದಲು ಸಿದ್ಧರಾದಾಗ, ಈ ಅಂಡಾಣುಗಳನ್ನು ಕರಗಿಸಿ ಭ್ರೂಣಗಳನ್ನು ಸೃಷ್ಟಿಸಲು ಫಲವತ್ತಾಗಿಸಲಾಗುತ್ತದೆ ಹಾಗೂ ನಂತರ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.