ಕಿರುತೆರೆ ರಂಗದಲ್ಲಿ ಮಾದಕ ದ್ರವ್ಯಗಳ (ಡ್ರಗ್ಸ್) ಸಂಸ್ಕೃತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು 'ಕ್ಯುಂ ಕಿ ಸಾಸ್ ಭಿ ಕಭಿ ಬಹು ಥಿ' ಖ್ಯಾತಿಯ ನಟಿ ನಾರಾಯಣಿ ಶಾಸ್ತ್ರಿ ಗಂಭೀರ ಆರೋಪ ಮಾಡಿದ್ದಾರೆ. ಮನರಂಜನಾ ಕ್ಷೇತ್ರದಲ್ಲಿ 'ಕೊಕೇನ್' ಮತ್ತು 'ಎಂಡಿಎಮ್‌ಎ' (MDMA) ನಂತಹ ನಿಷೇಧಿತ ಡ್ರಗ್ಸ್‌ಗಳ ಬಳಕೆಯು ತೀರಾ ಸಾಮಾನ್ಯವಾಗಿದ್ದು, ಅದನ್ನು ಅತ್ಯಂತ ಸಹಜ ಎಂಬಂತೆ ನೋಡಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪಾರ್ಟಿಗಳಲ್ಲಿ 'ಡ್ರಗ್ಸ್'ಗೇ ಪ್ರತ್ಯೇಕ ಬಜೆಟ್!
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ನಾರಾಯಣಿ ಶಾಸ್ತ್ರಿ ಅವರು, ರಿಯಾಲಿಟಿ ಶೋಗಳು ಹಾಗೂ ಪಾರ್ಟಿ ಶೂಟಿಂಗ್‌ಗಳ ಹಿನ್ನೆಲೆಯಲ್ಲಿ ನಡೆಯುವ ಕಹಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಹಿಂದಿನ ಹಾಗೂ ಇಂದಿನ ಪಾರ್ಟಿಗಳ ವ್ಯತ್ಯಾಸವನ್ನು ವಿವರಿಸಿದ ನಾರಾಯಣಿ ಶಾಸ್ತ್ರಿ, "ಹಿಂದೆ ಪಾರ್ಟಿಗಳಲ್ಲಿ ಮದ್ಯಕ್ಕಾಗಿ ಪ್ರತ್ಯೇಕ ಬಜೆಟ್ ಇಡಲಾಗುತ್ತಿತ್ತು. ಆದರೆ ಈಗ ನಿಷೇಧಿತ ಡ್ರಗ್ಸ್‌ಗಾಗಿ ಬಜೆಟ್ ಮೀಸಲಿಡಲಾಗುತ್ತಿದೆ! ಇದನ್ನು ನೋಡಿ ನಾನು ಸಂಪೂರ್ಣವಾಗಿ ಆಶ್ಚರ್ಯಚಕಿತಳಾದೆ. ಈ ಕಾರಣಕ್ಕಾಗಿಯೇ ನಾನು ಹಲವು ವರ್ಷಗಳ ಹಿಂದೆಯೇ ಪಾರ್ಟಿಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟೆ. ಇಂದಿನ ಪಾರ್ಟಿಗಳು ಡ್ಯಾನ್ಸ್ ಮಾಡಲು ಅಲ್ಲ, ಅವು ಸಂಪೂರ್ಣವಾಗಿ ಬೇರೆಯದೇ ಹಾದಿ ಹಿಡಿದಿವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶೂಟಿಂಗ್ ಸೆಟ್‌ಗಳಲ್ಲೂ ನೆಲೆಸಿದ ನಶಾ ಲೋಕ!
ದೊಡ್ಡ ಪಾರ್ಟಿಗಳಲ್ಲಿ ಅತ್ಯಂತ ರಹಸ್ಯವಾಗಿ ಡ್ರಗ್ಸ್ ನಿರ್ವಹಣೆ ಮಾಡಿದರೆ, ಸಣ್ಣ ಹಾಗೂ ಆಪ್ತರ ಕೂಟಗಳಲ್ಲಿ ಪ್ರತಿಯೊಬ್ಬರೂ ಡ್ರಗ್ಸ್ ಸೇವಿಸುವುದು ಬಹಿರಂಗ ರಹಸ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ. ಶೂಟಿಂಗ್ ಸೆಟ್‌ಗಳಲ್ಲಿ ನಟ-ನಟಿಯರು ಡ್ರಗ್ಸ್ ಸೇವಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಎಲ್ಲಾ ಸಮಯದಲ್ಲೂ ನಡೆಯುತ್ತದೆ. ಕೆಲವು ಬಾರಿ ನಟರು ಮಾದಕದ್ರವ್ಯ ಸೇವಿಸಿ ಶೂಟಿಂಗ್ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಕಾರಣ ಇಡೀ ಶೂಟಿಂಗ್ ರದ್ದುಗೊಂಡ ಉದಾಹರಣೆಗಳೂ ಇವೆ. ಒಮ್ಮೆ ನಟನೊಬ್ಬ ಸರಿಯಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿದ್ದ, ಆತನ ಕಾರಣದಿಂದ ಶೂಟಿಂಗ್ ಆರಂಭಿಸಲು ನಾವು ಬರೋಬ್ಬರಿ 4 ಗಂಟೆಗಳ ಕಾಲ ಕಾಯಬೇಕಾಯಿತು" ಎಂದು ತಮ್ಮ ಅನುಭವವನ್ನು ನಾರಾಯಣಿ ಶಾಸ್ತ್ರಿ ನೆನಪಿಸಿಕೊಂಡಿದ್ದಾರೆ.
"ನಾನೂ ಒಮ್ಮೆ ಪ್ರಯತ್ನಿಸಿದ್ದೆ..."
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ತಾವು ಕೂಡ ಹಿಂದೆ ಒಮ್ಮೆ ಕುತೂಹಲಕ್ಕಾಗಿ ಡ್ರಗ್ಸ್ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. "ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಪರೀಕ್ಷಿಸಿ ನೋಡಿದ್ದೇನೆ. ಆದರೆ ಯಾವುದನ್ನಾದರೂ ಸೇವಿಸಿದಾಗ ಏನಾಗುತ್ತದೆ ಎಂಬ ಕೇವಲ ಒಂದು ಕುತೂಹಲಕ್ಕಾಗಿ ಹಾಗೂ ಪ್ರಯೋಗವಾಗಿ ಒಮ್ಮೆ ಮಾತ್ರ ಯತ್ನಿಸಿದ್ದೆ. ಹಾಗಾಗಿ ನಾನು ಅದಕ್ಕೆ ಎಂದಿಗೂ ಅಡಿಕ್ಟ್ ಆಗಲಿಲ್ಲ" ಎಂದು ನಾರಾಯಣಿ ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.
ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ
ಪ್ರಸಿದ್ಧ ಧಾರಾವಾಹಿಗಳಲ್ಲಿ ಮಿಂಚಿರುವ ನಾರಾಯಣಿ
ದೂರದರ್ಶನದ 'ಕಹಾನಿ ಸಾತ್ ಫೇರೋ ಕಿ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಾರಾಯಣಿ ಶಾಸ್ತ್ರಿ, 'ಕೋಯಿ ಅಪ್ನಾ ಸಾ', 'ಕುಸುಮ್', 'ಪಿಯಾ ಕಾ ಘರ್', 'ಕ್ಯುಂ ಕಿ ಸಾಸ್ ಭಿ ಕಭಿ ಬಹು ಥಿ', 'ನಮಕ್ ಹರಾಮ್', 'ಮಮ್ತಾ', 'ರಿಷ್ಟೋಂ ಕಾ ಚಕ್ರವ್ಯೂಹ್' ಮತ್ತು 'ನಾಚ್ ಬಲಿಯೇ' ನಂತಹ ಸಾಲು ಸಾಲು ಹಿಟ್ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.