ಟಾಲಿವುಡ್‌ನಲ್ಲಿ 'ಆರ್ ಎಕ್ಸ್ 100' ಚಿತ್ರದ ಮೂಲಕ ಫೇಮಸ್ ಆದ ನಟಿ ಪಾಯಲ್ ರಜಪೂತ್, ಕನ್ನಡದ ಹೆಡ್ ಬುಷ್ ಸಿನಿಮಾದಲ್ಲೂ ನಟಿಸಿದ್ದಾರೆ. ಅಂದಹಾಗೆ, ಈ ನಟಿ ಈಚೆಗೆ ನಡೆದ ಒಂದು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನ ಗ್ಲಾಮರ್ ಮತ್ತು ನಟನೆಯ ಮೂಲಕ ತೆರೆಮೇಲೆ ರಂಜಿಸುವ ಪಾಯಲ್, ತಮ್ಮ ವೈಯಕ್ತಿಕ ಬದುಕಿನ ದುರಂತವೊಂದನ್ನು ನೆನಪಿಸಿಕೊಂಡು ವೇದಿಕೆಯ ಮೇಲೆಯೇ ಕಣ್ಣೀರಿಟ್ಟಿದ್ದಾರೆ ಮತ್ತು ಪತ್ರಿಕಾಗೋಷ್ಠಿಯಿಂದಲೇ ಎದ್ದು ಹೊರನಡೆದಿದ್ದಾರೆ.
ಸ್ನೇಹಿತನಿಗಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಪಾಯಲ್
ನಿರ್ದೇಶಕ ಹೇಮಂತ್ ಇಪ್ಪಲಪಲ್ಲಿ ಅವರ ʻಫಸ್ಟ್ ಟೈಮ್ 01-01-01’ ಎಂಬ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಮಂಗಳವಾರ (ಏ.28) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಚಿತ್ರದಲ್ಲಿ ಪಾಯಲ್ ರಜಪೂತ್ ಅವರ ಬಾಲ್ಯದ ಗೆಳೆಯ ಸೌರಭ್ ಧಿಂಗ್ರಾ ಹೀರೋ ಆಗಿ ನಟಿಸುತ್ತಿದ್ದು, ತಮ್ಮ ಸ್ನೇಹಿತನಿಗೆ ಸಪೋರ್ಟ ಮಾಡಲು ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಪಾಯಲ್. ಅಲ್ಲದೆ, ಈ ಚಿತ್ರವು ಪ್ರೇಕ್ಷಕರನ್ನು ಖಂಡಿತ ರಂಜಿಸಲಿದೆ ಎಂದು ಹೇಳಿ, ಸ್ನೇಹಿತನ ಸಿನಿಮಾಗೆ ಶುಭ ಕೋರಿದರು.
ಬೆಂಕಿಯಲ್ಲಿ ಅರಳಿದ ಹೂವು; ಪಾಯಲ್ ತುಳಿದ ಸಾಧನೆಯ ಹಾದಿ ಹೇಗಿತ್ತು?
ಪ್ರೆಸ್ ಮೀಟ್‌ನಲ್ಲಿ ಆಗಿದ್ದೇನು?
ಈ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆ ಪಾಯಲ್‌ರನ್ನು ತೀವ್ರವಾಗಿ ಉದ್ವೇಗಕ್ಕೆ ಒಳಗಾಗುವಂತೆ ಮಾಡಿತು. ಈ ಹಿಂದೆ ಪಾಯಲ್ ಅವರು ವಿಪಶ್ಯನ ಧ್ಯಾನಕ್ಕೆ ತೆರಳಿದ್ದರು. ಆ ವಿಷಯವನ್ನು ಪ್ರಸ್ತಾಪಿಸಿದಾಗ, ತಮ್ಮ ತಂದೆಯ ನಿಧನ ಮತ್ತು ಆ ಸಮಯದಲ್ಲಿ ಅನುಭವಿಸಿದ ಮಾನಸಿಕ ನೋವನ್ನು ಪಾಯಲ್ ನೆನಪಿಸಿಕೊಂಡರು.
"ನನ್ನ ತಂದೆಯೇ ನನ್ನ ಜೀವನದ ಹೀರೋ. ನಾನು ನಟಿಸಿದ ಚಿತ್ರಗಳಿಗೆ ಅವರೇ ದೊಡ್ಡ ವಿಮರ್ಶಕರಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ನನ್ನ ಪಂಜಾಬಿ ಚಿತ್ರವನ್ನು ನೋಡಬೇಕೆಂದು ಅವರು ತುಂಬಾ ಆಸೆ ಪಟ್ಟಿದ್ದರು, ಆದರೆ ಇಂದು ಅವರು ನಮ್ಮೊಂದಿಗಿಲ್ಲ. 'ಆರ್ ಎಕ್ಸ್ 100' ನಂತಹ ಬೋಲ್ಡ್ ಸಿನಿಮಾದಲ್ಲಿ ನಟಿಸಿದ್ದರೂ, ನನ್ನ ತಂದೆ ನನ್ನ ನಟನೆಯನ್ನು ಮೆಚ್ಚಿಕೊಂಡಿದ್ದರು" ಎಂದು ಹೇಳುತ್ತಾ ಪಾಯಲ್ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ಅವರನ್ನು ಸಮಾಧಾನಪಡಿಸಲು ಚಿತ್ರತಂಡ ಪ್ರಯತ್ನಿಸಿದರೂ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ವೇದಿಕೆಯಿಂದಲೇ ಎದ್ದುಹೊರನಡೆದರು.
ಪಾಯಲ್ ರಜಪೂತ್ ಅಳುತ್ತಿರುವ ವಿಡಿಯೋ ವೈರಲ್
ಪಾಯಲ್ ತಂದೆಗೆ ಏನಾಗಿತ್ತು?
ಪಾಯಲ್ ಅವರ ತಂದೆ ವಿಮಲ್ ಕುಮಾರ್ ರಜಪೂತ್ ಕಳೆದ ವರ್ಷ ಜುಲೈ 28 ರಂದು ನಿಧನರಾಗಿದ್ದರು. ಅನ್ನನಾಳದ ಕ್ಯಾನ್ಸರ್‌ನಿಂದ (Esophageal Carcinoma) ಬಳಲುತ್ತಿದ್ದ ಅವರು 67 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು. ತಂದೆಯ ಅನಾರೋಗ್ಯದ ವೇಳೆ ಪಾಯಲ್ ಕುಟುಂಬವು ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿತ್ತು. ಒಂದು ಕಡೆ ಅನಾರೋಗ್ಯದ ತಂದೆ, ಇನ್ನೊಂದು ಕಡೆ ಹತಾಶೆಯಲ್ಲಿರುವ ತಾಯಿಯನ್ನು ನೋಡಿ ಏನು ಮಾಡಬೇಕೆಂದು ತಿಳಿಯದ ಸ್ಥಿತಿಯಲ್ಲಿ ಪಾಯಲ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ. ಆ ಮಾನಸಿಕ ಸಂಘರ್ಷದಿಂದ ಹೊರಬರಲು ಅವರು ಜೈಪುರದಲ್ಲಿ ವಿಪಶ್ಯನ ಚಿಕಿತ್ಸೆ ಪಡೆದಿದ್ದರು.