ಬೆಂಕಿಯಲ್ಲಿ ಅರಳಿದ ಹೂವು; ಪಾಯಲ್ ತುಳಿದ ಸಾಧನೆಯ ಹಾದಿ ಹೇಗಿತ್ತು?
ಜಮ್ಮು ನಗರದಿಂದ ಸುಮಾರು 45-50 ಕಿಮೀ ದೂರದಲ್ಲಿ, ಕತ್ರಾ ಪಟ್ಟಣದ ಹೃದಯಭಾಗದಲ್ಲಿ ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಇದೆ. ಇದು ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯದ ಆಡಳಿತ ಮಂಡಳಿ ನಿರ್ವಹಿಸುತ್ತಿರುವ ಸಂಸ್ಥೆ. ನೇರವಾಗಿ ಜಮ್ಮು-ಕಾಶ್ಮೀರ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸಂಗ್ರಹ ಚಿತ್ರ -
- ಜಡೇಶ ಎಮ್ಮಿಗನೂರು
ಭಾರತದ ದೇವಾಲಯಗಳು ಕೇವಲ ಭಕ್ತಿ, ಪೂಜೆ-ಪುನಸ್ಕಾರಗಳಿಗೆ ಎನ್ನುವ ಮಾತಿಗೆ ವೈಷ್ಣೋದೇವಿ ದೇವಾಲಯ ತಿಲಾಂಜಲಿ ಹಾಡಿದೆ. ಜಮ್ಮು ನಗರದಿಂದ ಸುಮಾರು 45-50 ಕಿಮೀ ದೂರದಲ್ಲಿ, ಕತ್ರಾ ಪಟ್ಟಣದ ಹೃದಯಭಾಗದಲ್ಲಿ ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಇದೆ. ಇದು ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯದ ಆಡಳಿತ ಮಂಡಳಿ ನಿರ್ವಹಿಸುತ್ತಿರುವ ಸಂಸ್ಥೆ. ನೇರವಾಗಿ ಜಮ್ಮು-ಕಾಶ್ಮೀರ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಇದಕ್ಕೆ ಬಳಕೆಯಾಗುತ್ತಿರುವ ಹಣಕಾಸು ದೇವಾಲಯಕ್ಕೆ ಭಕ್ತರಿಂದ ಸಂದಾಯವಾಗುವ ಹಣ ಎಂಬುದು ವಿಶೇಷ.
ಅದಿರಲಿ, ಇಂದಿಗೆ ವಿಶ್ವವನ್ನೇ ಭಾರತದತ್ತ ಮುಖ ಮಾಡುವಂತೆ ಮಾಡಿದೆ ಈ ಕ್ರೀಡಾ ಸಂಕೀರ್ಣ. ಭಾರತದ ಅದೆಷ್ಟೋ ಪ್ರತಿಭಾವಂತ ಕ್ರೀಡಾಪಟುಗಳ ಇಲ್ಲಿಂದ ತರಬೇತಿ ಪಡೆದಿದ್ದಾರೆ. ಇಲ್ಲಿ ಅದೆಷ್ಟೋ ಮಕ್ಕಳು ತಮ್ಮ ಕ್ರೀಡಾ ಸಾಧನೆಯ ಕನಸಿಗೆ ರೆಕ್ಕೆ ಕಟ್ಟಿಕೊಂಡು ಹಾರಿದ್ದಾರೆ. ಈ ಬಾರಿ ಈ ಕ್ರೀಡಾ ಸಂಕೀರ್ಣವನ್ನು ನೆನೆಯುವಂತೆ ಮಾಡಿದ್ದು ಮಾತ್ರ ಕೈ-ಕಾಲುಗಳು ಇಲ್ಲ ಎನ್ನುವ ಚಿಂತೆಯ ಹೊರತಾಗಿಯೂ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಪಾಯಲ್ ಅವರ ಸಾಧನೆ. ಪಾಯಲ್ರ ಸಾಧನೆ ಮತ್ತು ಕ್ರೀಡಾ ಸಂಕೀರ್ಣದ ಒಂದು ಪರಿಚಯ ನೀಡುವ ಪ್ರಯತ್ನವಿದು.
ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸ್ಥಾಪನೆ
ಈ ಬೃಹತ್ ಕ್ರೀಡಾ ಸಂಕೀರ್ಣ ಫೆಬ್ರವರಿ 2, 2016 ರಂದು ಉದ್ಘಾಟನೆಯಾಯಿತು. ಭಾರತದ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಅವರು ಈ ಸಂಕೀರ್ಣ ವನ್ನು ಲೋಕಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿಗೆ ಇಲ್ಲಿಂದ ಭಾರತಕ್ಕೆ ದೊರೆತಿರುವ ಕ್ರೀಡಾ ಪ್ರತಿಭೆಗಳ ಸಂಖ್ಯೆ ಅಪಾರವಾಗಿದೆ.
ಅವಕಾಶ ಏನೇನಿದೆ?
ಈ ಕ್ರೀಡಾ ಸಂಕೀರ್ಣ ದಲ್ಲಿ ಪೆರಿಫೆರಲ್ ವಾಕ್‌ವೇ, ಹೊರಾಂಗಣ ಕ್ರೀಡಾ ಸೌಲಭ್ಯಗಳು, ಜಿಮ್ನಾಸಿಯಂ ಮತ್ತು ಲಾನ್ ಟೆನಿಸ್ ಸೌಲಭ್ಯಗಳಿವೆ. ಯಾರೂ ಇದರ ಸೌಲಭ್ಯ ಪಡೆಯಬಹುದು. ನಿರ್ವಹಣೆಯ ಕಾರಣಕ್ಕೆ ಅಲ್ಪ ಮಟ್ಟದ ಶುಲ್ಕವನ್ನು ವಿಧಿಸುತ್ತಾರೆ. ಆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಗುರುತಿಸಿಕೊಳ್ಳಲು ಇಚ್ಛಿಸುವ, ಕಠಿಣ ಪರಿಶ್ರಮಿಗಳು, ಪ್ರತಿಭಾವಂತರಿಗೆ ಇಲ್ಲಿ ಉಚಿತ ಪ್ರವೇಶ ಮತ್ತು ತರಬೇತಿ ನೀಡುವುದು ವಿಶೇಷ.
ಅಂತರ್ ಶಾಲಾ-ಕಾಲೇಜು, ವಿವಿ, ರಾಜ್ಯ-ರಾಷ್ಟ್ರ ಮಟ್ಟದ ಕ್ರೀಡೆಗಳೂ ಇಲ್ಲಿ ನಡೆಯುತ್ತವೆ. ಅಗತ್ಯ ಸಂದರ್ಭಗಳಲ್ಲಿ ಯಾತ್ರಿಕರಿಗೂ ಈ ಕ್ರೀಡಾ ಸಂಕೀರ್ಣ ಬಳಕೆ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಸಾಧ್ಯವಾದಷ್ಟು ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಚಿಂತನೆಗಳೂ ನಡೆದಿವೆ.
ಪಾಯಲ್ ಬದುಕು-ಬರಹ
ಯಾವುದೋ ಕೆಲಸ ತಮ್ಮಿಂದಾಗದೇ ಇದ್ದರೆ ಅದಕ್ಕೆ ಹಣೆಬರಹ, ಸದ್ಯದ ಪರಿಸ್ಥಿತಿಗಳನ್ನು ದೂರುವ ಜನರು ಸಾಕಷ್ಟಿದ್ದಾರೆ. ನನಗದು ಒಲಿಯಲಿಲ್ಲ, ಮನೆಯಲ್ಲಿ ಶಾಂತಿ ಇಲ್ಲ, ಸಾಕಷ್ಟು ಚಿಂತೆಗಳು ಬಾಧಿಸುತ್ತಿವೆ, ಹಣವಿಲ್ಲ, ಬೆಂಬಲ ನೀಡುವವರಿಲ್ಲ ಕಡೆಗೆ ಮನಸೇ ಇಲ್ಲ ಎಂದು ಕೆಲಸಗಳನ್ನು ದೂಡುವವರಿದ್ದಾರೆ. ಆದರೆ, ಅವರೆಲ್ಲರಿಗೆ ಪಾಯಲ್ ನಾಗ್ರ ಸಾಹಸಗಾಥೆ ನಿಜಕ್ಕೂ ಇಂಧನ ತುಂಬುವಂಥದ್ದು. ಅವಳಿಗೆ ಕೈ ಇಲ್ಲ, ಕಾಲೂ ಇಲ್ಲ. ಓಡಲು ಬಿಡಿ, ನಡೆಯಲೂ ಆಗದ ಸ್ಥಿತಿ ಅವಳನ್ನು ಆವರಿಸಿದೆ. ಆದರೆ, ಏನೂ ಸುಲಭಕ್ಕೆ ಸಿಗದು ಎನ್ನುವುದೊಂದನ್ನು ಅವಳಷ್ಟು ಅದ್ಭುತವಾಗಿ ಅರಿತವರು ಮತ್ತೊಬ್ಬರಿಲ್ಲ ಅನ್ನಿ. ಮನಸಲ್ಲಿ ಅದೇ ಚಿಂತನೆ ಅವಳನ್ನು ಸಾಧನೆಯ ಶಿಖರ ಏರಲು ಪ್ರೇರೇಪಿಸಿತು. ಇಂದು ಅವಳು ಕೈ-ಕಾಲುಗಳು ನೆಟ್ಟಗಿದ್ದವರೂ ಮಾಡಲಾಗದ ಕೆಲಸವನ್ನು ಮಾಡಿದ್ದಾಳೆ. ಬಿಲ್ಲನ್ನು ಹೆದೆಗೇರಿಸಿ ಬಿಲ್ಲುಗಾರ್ತಿ ಶೀತಲ್ ದೇವಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇನ್ ಸ್ಟಾದಲ್ಲಿ ಇಂಥವರನ್ನು ಫಾಲೋ ಮಾಡಿ
ರುದ್ರಾಕ್ಷಿ ಮಾರುವ ಸುಂದರ ಕಣ್ಣುಗಳ ಹುಡುಗಿ, ಹೂವಿನ ಬಾಣದಂತೆ ಎಂದು ಕೆಟ್ಟದಾಗಿ ಅರಚಿದ ಹುಡುಗಿ, ಉತ್ತರ ಕರ್ನಾಟಕ ಮುತ್ಯಾಗಳು ನಯಾಪೈಸ ಸಾಧನೆ ಇಲ್ಲದೆ ಲಕ್ಷಗಟ್ಟಲೆ ಫಾಲೋವರ್ಸ್ ಪಡೆದುಕೊಳ್ಳುತ್ತಾರೆ. ಆದರೆ ಅಮೋಘ ಸಾಧನೆಯ ನಂತರವೂ ಪಾಯಲ್ ಅವರ ಇನ್ ಸ್ಟಾ ಖಾತೆಯಲ್ಲಿ ಇರುವುದು 9.6 ಸಾವಿರ ಫಾಲೋವರ್ಗಳು ಮಾತ್ರ. ಅರೆಬರೆ ಬಟ್ಟೆ ತೊಟ್ಟು ಲಿಪ್ ಸಿಂಕ್ ಮಾಡಿ ವಿಡಿಯೋ ಹರಿಬಿಡುವವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಗೋಣು ಅಲ್ಲಾಡಿಸುತ್ತಾರೆ. ಸಾಧಕರನ್ನು ಗುರುತಿಸುವ ಪ್ರಜ್ಞೆ ಮಾತ್ರ ಜನರಲ್ಲಿಯೂ ಇಲ್ಲ ಸರಕಾರಗಳಲ್ಲೂ ಇಲ್ಲ. ಇದು ಚಿಂತಾಜನಕ ವಿಷಯ.
ಸಮಸ್ಯೆಗಳಲ್ಲಿ ಬೆಂದು ಬಂಗಾರವಾದರು
ಬಿಹಾರದ ಬಾಲಂಗೀರ್ ಜಿಲ್ಲೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಹೆಣಗಾಡುತ್ತಿದ್ದ ಕುಟುಂಬದಲ್ಲಿ ಪಾಯಲ್ ಹುಟ್ಟಿದರು. ವಿಧಿ ಎಷ್ಟು ಕ್ರೂರಿ ಎನ್ನುವುದಕ್ಕೆ ಇದೊಂದು ದುರಂತವೇ ಸಾಕ್ಷಿ. ಊಟಕ್ಕೂ ಗತಿ ಇಲ್ಲದ ಮನೆಯಲ್ಲಿ ಹುಟ್ಟಿದೆ ಪಾಯಲ್ ತಮ್ಮ ಎಂಟನೆಯ ವಯಸ್ಸಿಗೆ ಅಂದರೆ 2015ರಲ್ಲಿ ವಿದ್ಯುತ್ ಅಪಘಾತವೊಂದರಲ್ಲಿ ತಮ್ಮ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡರು. ಅಷ್ಟೂ ದಿನಗಳ ಕಾಲ ತಮ್ಮ ಮಕ್ಕಳ ಸ್ನೇಹಿತೆಯೆಂದು ಪ್ರೀತಿ ನೀಡುತ್ತಿದ್ದ ನೆರೆಹೊರೆಯವರೂ ಈ ಘಟನೆಯ ನಂತರ ಪಾಯಲ್ರ ಕುರಿತು ಕರುಣೆಯ ಮಾತುಗಳನ್ನಾಡಲಿಲ್ಲ. ʻಇವಳಿಗೆ ತಿನ್ನಲೂ ನಡೆಯಲೂ ಸಾಧ್ಯವಿಲ್ಲ, ವಿಷ ಕೊಡಿʼ ಎಂದು ಕಟುವಾಗಿ ನುಡಿದವರಿದ್ದಾರೆ. ಸಂಬಂಧಿಗಳೂ ಇಂಥದ್ದೇ ಮಾತುಗಳನ್ನು ಆಡುತ್ತಿದ್ದರು ಎಂದರೆ ಆಗ ಪಾಯಲ್ರ ಕುಟುಂಬ ಮತ್ತು ಅವಳ ಮನಸು ಎಷ್ಟು ಕುದ್ದಿರಬೇಕು. ಇಂಥ ಸಮಸ್ಯೆಗಳ ಕುಲುಮೆಯಲ್ಲಿ ಬೆಂದೇ ಅವರು ಬಂಗಾರವಾದರು.
ಸಾಧನೆಯ ಶಿಖರ ಏರಿದ ಪಾಯಲ್
ಇವಳಿಗೆ ನಡೆಯಲೂ ಸಾಧ್ಯವಿಲ್ಲ ಎಂದವರ ಮುಂದೆಯೇ ಪಾಯಲ್ ಸಾಧನೆಯ ಶಿಖರ ಏರಿದ್ದಾಳೆ. ಬ್ಯಾಂಕಾಕ್ನಲ್ಲಿ ನಡೆದ 2026ರ ವಿಶ್ವ ಆರ್ಚರಿ ಪ್ಯಾರಾ ಸೀರೀಸ್ನಲ್ಲಿ ಡಬಲ್ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಅದರಲ್ಲಿ ಒಂದು ಚಿನ್ನ, ಈಗಾಗಲೇ ವಿಶ್ವದ ನಂಬರ್ ಒನ್ ಆಟಗಾರ್ತಿ ಪಟ್ಟದಲ್ಲಿರುವ ಶೀತಲ್ ದೇವಿಯವರನ್ನು ಸೋಲಿಸಿ ಸಾಧಿಸಿರುವುದು ವಿಶೇಷ. ಮತ್ತೊಂದು, ಶೀತಲ್ ದೇವಿ ಅವರ ಜತೆಗೂಡಿ ಗುಂಪು ಸ್ಪರ್ಧೆಯಲ್ಲಿ. ಶೀತಲ್ ದೇವಿಯನ್ನು ಸೋಲಿಸಿದ ನಂತರವೂ ಅವರು ಯಾವ ಹಮ್ಮು ಬಿಮ್ಮುಗಳನ್ನು ತೋರಲಿಲ್ಲ. ಬದಲಿಗೆ ಶೀತಲ್ ಅವರನ್ನು ಗೌರವಿಸಿ ಮತ್ತಷ್ಟು ಎತ್ತರಕ್ಕೇರಿದರು. ಈ ಸಾಧನೆಯಿಂದ ಭಾರತ ಒಟ್ಟು ಏಳು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚು ಪದಕಗಳನ್ನು ಸೇರಿ ಒಟ್ಟು 16 ಪದಕಗಳನ್ನು ಗಳಿಸಿತು. ಈಗ ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.
ಸಾಧನೆಗೆ ಸಾಥ್
ಪಾಯಲ್ ಅವರು ವಿದ್ಯುತ್ ಅವಘಡಕ್ಕೆ ಒಳಗಾದಾಗ ಅವರಿಗೆ ದಾರಿದೀಪವಾಗಿದ್ದು ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ತರಬೇತುದಾರ ಕುಲದೀಪ್ ವೇದ್ವಾನ್. ಪಾಯಲ್ ಬಾಲಾಂಗೀರ್ನ ಪಾರ್ವತಿಗಿರಿ ಬಾಲನಿಕೇತನ ಅನಾಥಾಶ್ರಮದಲ್ಲಿದ್ದರು. ಆಗ ಅವರು ಕೈಕಾಲುಗಳಿಲ್ಲದಿದ್ದರೂ ಬಾಯಿಯಿಂದಲೇ ಚಿತ್ರ ಬರೆದು ಅಪ್ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಇದು ಹೇಗೋ ಆ ಸಮಯದಲ್ಲಿ ಪ್ರತಿಭೆಯ ಹುಡುಕಾಟದಲ್ಲಿದ್ದ ಕುಲದೀಪ್ ವೇದ್ವಾನ್ ಅವರ ಗಮನಕ್ಕೆ ಬಂತು. ಪಾಯಲ್ ಅವರ ಪ್ರತಿಭೆ ಮತ್ತು ಸಾಧನೆಯ ತುಡಿತವನ್ನು ಕುಲದೀಪ್ ವೇದ್ವಾನ್ ಕಂಡುಕೊಂಡರು. ನಂತರ ಅವರನ್ನು ಕರೆದುಕೊಂಡು ಬಂದದ್ದೇ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗೆ. ಅಲ್ಲಿ ಅವಳ ಬಿಲ್ವಿದ್ಯೆ ಆರಂಭವಾಯಿತು. 2022ರಲ್ಲಿ ಆರಂಭವಾದ ತರಬೇತಿ, ಕಠಿಣ ಪರಿಶ್ರಮ, ಮನೋಬಲ ತುಂಬಿದ ತರಬೇತುದಾರರು, ಸಾಥ್ ನೀಡಿದ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಇವೆಲ್ಲವುಗಳ ಸಹಾಯದಿಂದ ಪಾಯಲ್ ಇಂದು ವಿಶ್ವದ ಒಂದು ಅದ್ಭುತ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ನಾಲ್ಕು ಅಂಗಗಳಿಲ್ಲದ ಹೊರತಾಗಿಯೂ ಆರ್ಚರಿಯಲ್ಲಿ ಚಿನ್ನ ಸಾಧಿಸಿದ ವಿಶ್ವದ ಏಕೈಕ ಪ್ರತಿಭೆ ಪಾಯಲ್
ಈ ವಿಷಯ ತಿಳಿದ ನಂತರ ನನ್ನ ಮನಃಪಟಲದಲ್ಲಿ ಮೂಡಿದ್ದು ಪುಟ್ಟರಾಜ ಗವಾಯಿಗಳ ಚಿತ್ರಣ. ಅವರು ಅಂದು ಪೋಷಕರು ಸಾಕಲು ಆಗದ ವಿಕಲ ಚೇತನ ಮಕ್ಕಳನ್ನು ಮಠಕ್ಕೆ ಕರೆತರುತ್ತಿದ್ದರು. ಅವರಿಗೆ ಸಂಗೀತ ಜ್ಞಾನ ನೀಡುತ್ತಿದ್ದರು. ಪುಟ್ಟರಾಜ ಮಹಾನ್ ಸಂತರ ಈ ಕಾರ್ಯದಿಂದ ಬದುಕು ಕಟ್ಟಿಕೊಂಡ, ಸಂಗೀತ ಲೋಕದ ದಿಗ್ಗಜರ ಸಾಲಿನಲ್ಲಿ ನಿಂತ ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ಅವರಂಥ ಪ್ರತಿಭೆಗಳು ದೇಶದಾದ್ಯಂತ ಗುರುತಿಸಿಕೊಂಡಿದ್ದಾರೆ. ಹಾಗೇ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಶಿಷ್ಯಂದಿರು ಅವರ ಕೆಲಸಗಳಿಂದ ಸಹಾಯ ಪಡೆದ ಹಲವು ಪ್ರತಿಭಾನ್ವಿತರೂ ಭಾರತ ಸೇರಿ ಜಗತ್ತಿನ ವಿವಿಧ ಭಾಗಗಳಲ್ಲಿದ್ದಾರೆ. ಹೀಗೆ ಮಠ ಮಾನ್ಯಗಳು ಗುರುತಿಸಿಕೊಂಡಾಗಲೇ ಅವುಗಳ ಹುಟ್ಟಿಗೂ ಒಂದು ಅರ್ಥ ಸಿಕ್ಕುವುದು.