ನಟಿ ರಮ್ಯಾಕೃಷ್ಣ ಹಾಗೂ ಖ್ಯಾತ ತೆಲುಗು ನಿರ್ದೇಶಕ ಕೃಷ್ಣವಂಶಿ ಅವರ ದಾಂಪತ್ಯ ಜೀವನದ ಕುರಿತು ಕಳೆದ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಸ್ವತಃ ರಮ್ಯಾಕೃಷ್ಣ ಅವರೇ ತೆರೆ ಎಳೆದಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಈ ತಾರಾ ದಂಪತಿ, ಬೇರೆ ಬೇರೆ ನಗರಗಳಲ್ಲಿ ನೆಲೆಸಿರುವುದನ್ನು ಕಂಡು ಇವರಿಬ್ಬರೂ ಬೇರೆಯಾಗಿದ್ದಾರೆ, ಡಿವೋರ್ಸ್ ಪಡೆದಿದ್ದಾರೆ ಎಂಬ ಗಾಳಿಸುದ್ದಿಗಳು ಚಿತ್ರರಂಗದಲ್ಲಿ ಜೋರಾಗಿಯೇ ಕೇಳಿಬಂದಿದ್ದವು. ಆದರೆ ಇಷ್ಟು ದಿನಗಳ ಕಾಲ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದ ರಮ್ಯಾಕೃಷ್ಣ, ಇದೀಗ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಬದುಕು ಹಾಗೂ ದಾಂಪತ್ಯದ ಗುಟ್ಟನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ಮಗನ ಭವಿಷ್ಯವೇ ಕಾರಣ
ತಮ್ಮ ವಿಚ್ಛೇದನದ ಸುದ್ದಿಯನ್ನು ತಳ್ಳಿಹಾಕಿರುವ ರಮ್ಯಾಕೃಷ್ಣ, "ನಾನು ಮತ್ತು ಕೃಷ್ಣವಂಶಿ ನೂರಕ್ಕೆ ನೂರರಷ್ಟು ಈಗಲೂ ಗಂಡ-ಹೆಂಡತಿಯಾಗಿಯೇ ಇದ್ದೇವೆ. ಆದರೆ ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಹಾಗೂ ಬಹಳ ಸಂತೋಷದಿಂದ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ವೃತ್ತಿಜೀವನ ಮತ್ತು ಮಗನ ಭವಿಷ್ಯದ ಕಾರಣಕ್ಕಾಗಿ ನಾವು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು" ಎಂದು ಸ್ಪಷ್ಟಪಡಿಸಿದ್ದಾರೆ.
"ನಮ್ಮ ಮಗ ರಿತ್ವಿಕ್ ವಂಶಿ ಆ ಸಮಯದಲ್ಲಿ ನಾನು ಚೆನ್ನೈನಲ್ಲಿ ಧಾರಾವಾಹಿಗಳ ಚಿತ್ರೀಕರಣದಲ್ಲಿ ತೀವ್ರ ಬ್ಯುಸಿಯಾಗಿದ್ದೆ. ಹೀಗಾಗಿ 15 ದಿನಗಳಿಗೊಮ್ಮೆ ಚೆನ್ನೈನಿಂದ ಹೈದರಾಬಾದ್ಗೆ ಪ್ರಯಾಣಿಸುತ್ತಿದ್ದೆ. ನಾನು ಹೀಗೆ ಪದೇ ಪದೇ ಓಡಾಡುತ್ತಿದ್ದರಿಂದ ಮಗನ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಇದನ್ನು ಗಮನಿಸಿದ ನಾನು ಮತ್ತು ಕೃಷ್ಣವಂಶಿ ಚರ್ಚಿಸಿ, ಮಗನನ್ನು ಚೆನ್ನೈನಲ್ಲೇ ಓದಿಸುವ ನಿರ್ಧಾರಕ್ಕೆ ಬಂದೆವು" ಎಂದು ತಿಳಿಸಿದ್ದಾರೆ.
Ramya Krishnan: 'ಬಾಹುಬಲಿ' ನಟಿ ರಮ್ಯಾ ಕೃಷ್ಣ ವಿಚ್ಛೇದನ? ಕೊನೆಗೂ ಕ್ಲಾರಿಟಿ ಕೊಟ್ಟ ಗಂಡ ಕೃಷ್ಣ ವಂಶಿ
ದಂಪತಿ ದೂರದೂರವಿರುವುದು ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅಭಿಪ್ರಾಯಪಟ್ಟಿರುವ ರಮ್ಯಾಕೃಷ್ಣ, "ಕೃಷ್ಣವಂಶಿ ಅವರು ತುಂಬಾ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ. ಒಟ್ಟಿಗಿದ್ದು ಪ್ರತಿದಿನ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುವುದಕ್ಕಿಂತ, ದೂರವಿದ್ದು ಒಳ್ಳೆಯ ಸ್ನೇಹಿತರಂತೆ ಇರುವುದು ಉತ್ತಮ. ಬಹುಶಃ ಅದೇ ಕಾರಣಕ್ಕೆ ನಾವಿಬ್ಬರೂ ಇಂದಿಗೂ ಸುಖಿ ದಂಪತಿಗಳಾಗಿ ಉಳಿದಿದ್ದೇವೆ" ಎಂದು ಹೇಳಿದ್ದಾರೆ.
ಮದುವೆ ಆಗೋದು ಬೇಡ ಎಂದಿದ್ದ ಕೃಷ್ಣವಂಶಿ
ಇದೇ ವೇಳೆ ಮದುವೆ ಎಂಬ ವ್ಯವಸ್ಥೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿರುವ ರಮ್ಯಾಕೃಷ್ಣ ಅವರು, "ಕೆಲವೊಮ್ಮೆ ಸಂಬಂಧದಲ್ಲಿ ಮದುವೆ ಎಂಬುದು ಓವರ್ ರೇಟೆಡ್ ಅನಿಸುತ್ತದೆ. ನಿಜವಾಗಿಯೂ ಅಗತ್ಯವಿದ್ದಾಗ ಮಾತ್ರ ಮದುವೆಯಾಗಬೇಕು. ನಿಜ ಹೇಳಬೇಕೆಂದರೆ, ಮದುವೆಗೂ ಮುನ್ನ ಕೃಷ್ಣವಂಶಿ ಕೂಡ 'ಮದುವೆ ಯಾಕೆ, ಲಿವಿಂಗ್ ಟುಗೆದರ್ ಆಗಿ ಇರೋಣ' ಎಂದು ಹೇಳಿದ್ದರು. ಆವಾಗಲೇ ನಾನು 'ಸರಿ' ಎಂದು ಒಪ್ಪಿಕೊಳ್ಳಬೇಕಿತ್ತೇನೋ ಎಂದು ಈಗ ಅನಿಸುತ್ತಿದೆ. ಮದುವೆ ಎಂಬುದು ಕೇವಲ ಇಬ್ಬರ ಸಂಬಂಧವಾಗಿರದೆ, ಎರಡು ಕುಟುಂಬಗಳು ಹಾಗೂ ಸುತ್ತಮುತ್ತಲಿನ ಅನೇಕರನ್ನು ಒಳಗೊಳ್ಳುತ್ತದೆ. ಆಗ ನಾವು ನಮ್ಮ ಸಂಗಾತಿಗಿಂತ ಹೆಚ್ಚಾಗಿ ಬೇರೆಯವರಿಗೆ ಉತ್ತರದಾಯಿಗಳಾಗಿ ಇರಬೇಕಾಗುತ್ತದೆ" ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ನಮ್ಮ ಸಂಬಂಧ ಸದಾ ಕಾಲ ಹೀಗೆಯೇ ಇರುತ್ತದೆ
ಪತಿಯ ವೃತ್ತಿಜೀವನದ ಬಗ್ಗೆ ಗೌರವ ವ್ಯಕ್ತಪಡಿಸಿರುವ ರಮ್ಯಾಕೃಷ್ಣ, "ಕೃಷ್ಣವಂಶಿ ಅವರಿಗೆ ಸಿನಿಮಾವೇ ಪ್ರಪಂಚ. ನಾನು ಅವರ ಕೆಲಸದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ, ಹಾಗೆಯೇ ಅವರೂ ನನ್ನ ವೃತ್ತಿಜೀವನದಲ್ಲಿ ತಲೆಹಾಕುವುದಿಲ್ಲ. ನಮ್ಮಿಬ್ಬರ ನಡುವಿನ ಸಂಬಂಧ ಅತ್ಯಂತ ಪರಿಪೂರ್ಣವಾಗಿದ್ದು, ಸದಾ ಕಾಲ ಹೀಗೆಯೇ ಇರುತ್ತದೆ. ಸದ್ಯ ನಾವಿಬ್ಬರೂ ನಮ್ಮದೇ ಆದ ಜಗತ್ತಿನಲ್ಲಿ ತುಂಬಾ ಸಂತೋಷವಾಗಿದ್ದೇವೆ" ಎನ್ನುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.