ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ‘ಶ್ರೀಗಂಧದ ಗುಡಿ’ ಕೂಡ ಒಂದು. ಕಳೆದ ಅಕ್ಟೋಬರ್ 6 ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯು ನಾಲ್ವರು ಅಣ್ಣತಮ್ಮಂದಿರು ಮತ್ತು ಒಬ್ಬ ನಾಯಕಿಯ ವಿಭಿನ್ನ ಕಥಾಹಂದರ ಹೊಂದಿದೆ. ಈ ಧಾರಾವಾಹಿಯಲ್ಲಿ 'ಚಂದನಾ' ಎಂಬ ಪಾತ್ರವನ್ನು ನಟಿ ಸಂಜನಾ ಬುರ್ಲಿ ಅವರು ನಿಭಾಯಿಸುತ್ತಿದ್ದರು. ಆದರೆ ಈಗ ಅವರು ಈ ಪಾತ್ರದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಂಜನಾ ಬುರ್ಲಿ ಗುಡ್ ಬೈ ಹೇಳಿದ್ದೇಕೆ?
ನಟಿ ಸಂಜನಾ ಬುರ್ಲಿ ಅವರು ‘ಶ್ರೀಗಂಧದ ಗುಡಿ’ ಧಾರಾವಾಹಿಯಿಂದ ಹೊರಬರಲು ಮುಖ್ಯ ಕಾರಣ ಮದುವೆ ಎನ್ನಲಾಗುತ್ತಿದೆ. ಹೌದು, ಜನವರಿ 25 ರಂದು ದಾವಣಗೆರೆ ಮೂಲದ ವೈದ್ಯರಾದ ಸಮರ್ಥ್ ಎಂಬುವವರ ಸಂಜನಾ ಬುರ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಈ ಜೋಡಿಯ ಮದುವೆ ನಡೆಯಲಿರುವ ಹಿನ್ನೆಲೆಯಲ್ಲಿ, ಮದುವೆ ತಯಾರಿಗಾಗಿ ಸಂಜನಾ ಅವರು ನಟನೆಯಿಂದ ತಾತ್ಕಾಲಿಕ ವಿರಾಮ ಪಡೆಯುತ್ತಿರಬಹುದು ಎಂದು ಹೇಳಲಾಗುತ್ತಿದೆ.
ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ʻಪುಟ್ಟಕ್ಕನ ಮಕ್ಕಳುʼ ನಟಿ ಸಂಜನಾ ಬುರ್ಲಿ; ಇಲ್ಲಿವೆ ನಿಶ್ಚಿತಾರ್ಥದ ಫೋಟೋಗಳು
ʻಲಗ್ನ ಪತ್ರಿಕೆʼ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಂಜನಾ, ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನ 'ಸ್ನೇಹಾ' ಎಂಬ ಪಾತ್ರದಿಂದ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡರು. ಆದರೆ ಅಲ್ಲೂ ಕೂಡ ನಾನಾ ಕಾರಣಗಳಿಂದ ಸ್ನೇಹ ಪಾತ್ರವನ್ನು ಅರ್ಧದಲ್ಲೇ ಬಿಟ್ಟು ಹೊರಬಂದಿದ್ದರು. ಇದೀಗ ʻಶ್ರೀಗಂಧದ ಗುಡಿʼಸೀರಿಯಲ್‌ಗೂ ಸಂಜನಾ ವಿದಾಯ ಹೇಳುವ ಸಮಯ ಬಂದಿದೆ. ಇನ್ಮುಂದೆ ಅವರನ್ನು ಚಂದನಾ ಪಾತ್ರದಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.
Sanjana Burli: ಸದ್ದಿಲ್ಲದೇ ಎಂಗೇಜ್ ಆದ ಸಂಜನಾ ಬುರ್ಲಿ; ಹುಡುಗ ಯಾರು ಗೊತ್ತಾ?
ಚಂದನಾ ಪಾತ್ರವನ್ನು ಯಾರು ಮಾಡಲಿದ್ದಾರೆ?
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ಇನ್ನು ಕೆಲವು ಸಂಚಿಕೆಗಳವರೆಗೂ ಸಂಜನಾ ಅವರೇ ಚಂದನಾ ಆಗಿ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಂತರ ಚಂದನಾ ಪಾತ್ರಕ್ಕೆ ನಟಿ ಸ್ನೇಹಾ ಮಂಜುನಾಥ್ ನಿಭಾಯಿಸಲಿದ್ದಾರೆ ಎನ್ನಲಾಗಿದೆ. ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಸ್ನೇಹಾ ಬಣ್ಣ ಹಚ್ಚಿದ್ದರು.
ಇದೀಗ ಆ ಧಾರಾವಾಹಿ ಮುಕ್ತಾಯವಾಗಿದ್ದರಿಂದ ‘ಶ್ರೀಗಂಧದ ಗುಡಿ’ ಧಾರಾವಾಹಿಯ ಚಂದನಾ ಪಾತ್ರವನ್ನು ಸ್ನೇಹಾ ಮಂಜುನಾಥ್ ಒಪ್ಪಿ, ನಟಿಸಲಿದ್ದಾರೆ ಎನ್ನಲಾಗಿದೆ.