ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅವರ ಅಭಿನಯದ ಮೈಲಿಗಲ್ಲಿನ 175ನೇ ಚಿತ್ರ ‘ಮದರ್’ಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಹಾರೈಸಿದರು.
175ನೇ ಚಿತ್ರದ ಜವಾಬ್ದಾರಿ ದೊಡ್ಡದು
ನಟಿ ಶ್ರುತಿ ಮಾತನಾಡಿ, "ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಡಾ. ರಾಜ್‌ಕುಮಾರ್ ಸರ್ ಹಾಗೂ ಇಷ್ಟು ವರ್ಷ ನಾನು ಇಂಡಸ್ಟ್ರಿಯಲ್ಲಿ ಉಳಿಯಲು ಕಾರಣವಾದ ‘ಶ್ರುತಿ’ ಚಿತ್ರವನ್ನು ನೀಡಿದ ದ್ವಾರಕೀಶ್ ಅಣ್ಣನನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಈ ‘ಮದರ್’ ಚಿತ್ರದ ಕಥೆ ಕೇಳಿದಾಗ ನನಗೆ ಹೊಸತನ ಅನ್ನಿಸಿತು. ನನ್ನ 175ನೇ ಸಿನಿಮಾಗೆ ಚ್ಯುತಿ ಬರದಂತೆ ಮಾಡುವುದಾಗಿ ನಿರ್ದೇಶಕರು ಹೇಳಿದ್ದಾರೆ. ಆದರೆ, ನನಗೆ ಕೆಲಸ ನೀಡುವ ನಿರ್ಮಾಪಕರಿಗೆ ಯಾವುದೇ ಚ್ಯುತಿ ಬಾರದಂತೆ ಸಿನಿಮಾ ಮಾಡಿ ಎಂದು ನಾನಿಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಇಡೀ ಸಿನಿ ಜರ್ನಿಯಲ್ಲಿ ನಾನು ಯಾವ ಚಿತ್ರಕ್ಕೂ ವರ್ಕ್‌ಶಾಪ್ ಮಾಡಿರಲಿಲ್ಲ, ಆದರೆ ಈ ಚಿತ್ರಕ್ಕಾಗಿ ವಿಶೇಷವಾಗಿ ವರ್ಕ್‌ಶಾಪ್ ಮಾಡುವಂತೆ ನಾನೇ ಕೇಳಿಕೊಂಡಿದ್ದೇನೆ" ಎಂದು ಚಿತ್ರದ ಮೇಲಿರುವ ತಮ್ಮ ನಿರೀಕ್ಷೆಯನ್ನು ಹಂಚಿಕೊಂಡರು.
ಮಂಡ್ಯದ ರಗಡ್ ಕಥೆ ಇರುವ ಸಿನಿಮಾ ಇದು
ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ರಾಕೇಶ್ ಸೋಮಣ್ಣ, "ಮದರ್ ಅತ್ಯಂತ ಶಕ್ತಿಶಾಲಿ ಕಥಾಹಂದರ ಹೊಂದಿರುವ ಚಿತ್ರ. ಮಂಡ್ಯದ ಹಿನ್ನೆಲೆಯ ಅನಕ್ಷರಸ್ಥ ಮಹಿಳೆಯೊಬ್ಬಳು ತನ್ನ ಸಂಸಾರವನ್ನು ಕಾಪಾಡಿಕೊಳ್ಳಲು ನಡೆಸುವ ಹೋರಾಟವೇ ಈ ಸಿನಿಮಾದ ಮುಖ್ಯ ಕಥಾವಸ್ತು. ಇಲ್ಲಿಯವರೆಗೆ ಶ್ರುತಿ ಅವರನ್ನು ಕಣ್ಣೀರು ಹಾಕುವ ಪಾತ್ರಗಳಲ್ಲಿ ನೋಡಿದ್ದೀರಿ, ಆದರೆ ಈ ಚಿತ್ರದಲ್ಲಿ ಅವರು ಕಣ್ಣೀರು ಹಾಕಿಸುವುದಿಲ್ಲ. ಬದಲಿಗೆ ಅತ್ಯಂತ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ. ಮದರ್ ಚಿತ್ರದ ಚಿತ್ರೀಕರಣ ಮಂಡ್ಯದ ಸುತ್ತಮುತ್ತ ಸುಮಾರು 35 ದಿನಗಳ ಕಾಲ ನಡೆಯಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಶ್ರುತಿ ಅಮ್ಮನಿಗೆ ಯಾರೂ ಸಾಟಿಯಿಲ್ಲ
"ಶ್ರುತಿ ಅವರನ್ನು ನಾನು ಅಮ್ಮ ಅಂತಾನೇ ಕರಿತೀನಿ. ʻಮಾದೇವʼ ಶೂಟಿಂಗ್ ಸಮಯದಲ್ಲಿ ನನಗೆ ರಾಖಿ ಕಟ್ಟಿದ್ದರು. ಅಕ್ಕನು ಅಮ್ಮನೆ ಅಲ್ವಾ. ಮಾದೇವ ಸೈಲೆಂಟ್ ಆದಾಗೆಲ್ಲಾ ಶೃತಿ ಅಮ್ಮ ವೈಲೆಂಟ್ ಆಗ್ತಾ ಇದ್ದರು. ಅವರು ಸೈಲೆಂಟ್ ಆದಾಗ ನಾನು ವೈಲೆಂಟ್ ಆಗ್ತಿದ್ದೆ. ಆ ಕಾಂಬಿನೇಷನ್ ಸಖತ್ ವರ್ಕ್ ಆಗುತ್ತೆ. ನಾನು ಇಲ್ಲಿಗೆ ಬರೋದಕ್ಕೆ ಕಾರಣ ಶ್ರುತಿ ಅವರ 175ನೇ ಸಿನಿಮಾ ಅನ್ನೋದು. 175 ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಒಬ್ಬರೇ ಶ್ರುತಿ, ಅವರ ಬದಲು ಬೇರೆ ಯಾರೂ ಇಲ್ಲ" ಎಂದು ಹೆಮ್ಮೆಯಿಂದ ನಟ ವಿನೋದ್ ಪ್ರಭಾಕರ್ ಹೇಳಿದರು.
ಶಾಂತೂ ಬ್ಯಾನರ್ ಅಡಿಯಲ್ಲಿ ಆರತಿ ಹಾಗೂ ಕೆ. ಸತೀಶ್ ಚಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರುತಿ ಅವರ ಮಗನಾಗಿ ರಗಡ್ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ, ಹಿಮಶ್ರೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅಂಜನ್ ಸಂಗೀತ, ಯು. ಅಶ್ವಿನ್ ಛಾಯಾಗ್ರಹಣ, ವಸಂತ್ ಸಂಕಲನ ಹಾಗೂ ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ.