Koragajja Movie: ʼಕೊರಗಜ್ಜʼ ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸ್ತಾರಾ ಶ್ರುತಿ? ನಟಿಗೆ ಶುಭ ಹಾರೈಸಿದ ಚಿತ್ರತಂಡ
Shruthi: ಸ್ಯಾಂಡಲ್‌ವುಡ್‌ನ ಹಿರಿಯ ನಟಿ, ಬಹುಭಾಷಾ ಕಲಾವಿದೆ ಶ್ರುತಿ 18ರಂದು 50ನೇ ವರ್ಷಕ್ಕೆ ಕಾಲಿಟಿದ್ದಾರೆ. ಈ ವೇಳೆ ಅವರು ಅಭಿನಯಿಸಿರುವ ʼಕೊರಗಜ್ಜʼ ಚಿತ್ರತಂಡ ಅವರನನು ಭೇಟಿಯಾಗಿ ಶುಭ ಹಾರೈಸಿತು. ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ, ನಟಿ ಭವ್ಯಾ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ಮತ್ತು ಎಡಿಟರ್ ವಿದ್ಯಾಧರ್ ಶೆಟ್ಟಿ ಮೊದಲಾದವರು ನೆನಪಿನ ಕಾಣಿಕೆ ನೀಡಿದರು.

-

ಬೆಂಗಳೂರು: ಸದ್ಯ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿರುವ ಚಿತ್ರಗಳಲ್ಲಿ ʼಕೊರಗಜ್ಜʼ (Koragajja Movie) ಕೂಡ ಒಂದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಚಿತ್ರದಲ್ಲಿ ಹಿರಿಯ ನಟಿ ಶ್ರುತಿ (Shruthi) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೊರಗಜ್ಜನ ಸಾಕುತಾಯಿ ಬೈರಕ್ಕೆಯಾಗಿ ಶ್ರುತಿ ಕಾಣಿಸಿಕೊಂಡಿದ್ದು, ಅವರ ವೃತ್ತಿ ಜೀವನದಲ್ಲೇ ಅತ್ಯುತ್ತಮ ಅಭಿನಯ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಚಿತ್ರದ ಮೂಲಕ ಅವರಿಗೆ ರಾಷ್ಟ್ರ ಪ್ರಶಸ್ತಿಯ ಗರಿ ಸಿಗಬೇಕು ಎನ್ನುವುದು ಅಭಿಮಾನಿಗಳ ಹಾರೈಕೆ. ಸೆಪ್ಟೆಂಬರ್ 18ರಂದು 50ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ ಚಿತ್ರತಂಡ ಶುಭ ಹಾರೈಸಿದೆ.
ಶ್ರುತಿ ಅವರ 50ನೇ ಜನ್ಮ ದಿನ ಕಾರ್ಯಾಕ್ರಮದಲ್ಲಿ ʼಕೊರಗಜ್ಜʼ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ, ನಟಿ ಭವ್ಯಾ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ಮತ್ತು ಎಡಿಟರ್ ವಿದ್ಯಾಧರ್ ಶೆಟ್ಟಿ ಮೊದಲಾದವರು ಪಾಲ್ಗೊಂಡು ನೆನಪಿನ ಕಾಣಿಕೆ ಮತ್ತು ಹೂಗುಚ್ಛ ನೀಡಿ ಶುಭ ಹಾರೈಸಿದರು.
ಈ ಸುದ್ದಿಯನ್ನೂ ಓದಿ: Actress Shruthi: ವಿಷ್ಣುವರ್ಧನ್ ಸಮಾಧಿಗೆ ನನ್ನ ಜಾಗವನ್ನೇ ಕೊಡುತ್ತಿದ್ದೆ: ನಟಿ ಶ್ರುತಿ
ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಕಥೆಯನ್ನು ಹೊಂದಿರುವ ʼಕೊರಗಜ್ಜʼ ಸಿನಿಮಾದ ಬಗ್ಗೆ ಪ್ರೇಕ್ಷಕರ ಜತೆಗೆ ಇಂಡಸ್ಟ್ರಿಯ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರಿಗೂ ಕೂತೂಹಲವಿದ್ದು, ಶ್ರುತಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು. ಸುಮಾರು 2 ಕೋಟಿ ರೂ. ಖರ್ಚಾಗಿರುವ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ವಿಳಂಬಗೊಂಡಿರುವುದೇ ಚಿತ್ರ ಬಿಡುಗಡೆ ಮುಂದೂಡಲು ಕಾರಣ ಎಂದು ಸಿನಿಮಾತಂಡ ಹೇಳಿದೆ.
ಈಗ ಸಿನಿಮಾದ ಎಲ್ಲ ವಿಭಾಗದ ಕೆಲಸಗಳು ಮುಗಿದಿದ್ದು, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇದೇ ವೇಳೆ ಶ್ರುತಿ ನಿರ್ವಹಿಸಿದ ಬೈರಕ್ಕೆ ಪಾತ್ರ ಲೈಫ್ ಟೈಮ್ ಪರ್ಫಾರ್ಮೆನ್ಸ್ ಎಂಬ ಮಾತು ಕೇಳಿಬಂತು. ಅವರು ಅಭಿನಯಿಸಿರುವ ಪಾತ್ರದ ಕ್ಲೈಮ್ಯಾಕ್ಸ್ ಅನ್ನು 4 ಬಾರಿ ಚಿತ್ರೀಕರಿಸಲಾಗಿದೆಯಂತೆ.
ಹಾಲಿವುಡ್ ನಟ ಕಬೀರ್ ಬೇಡಿ, ಭವ್ಯಾ, ಶುಭ ಪೂಂಜ, ಬಾಲಿವುಡ್ ಕೊರಿಯೋಗ್ರಾಫರ್‌ಗಳಾದ ಸಂದೀಪ್ ಸೋಪರ್ಕಾರ್, ಗಣೇಶ್ ಆಚಾರ್ಯ ಮತ್ತಿತರ ಘಟಾನುಘಟಿಗಳ ಸಂಗಮವಾಗಿರುವ ಈ ಚಿತ್ರದ ಮೂಲಕ ಋತಿಕಾ ಎನ್ನುವ ಅಚ್ಚ ಕನ್ನಡದ ಪ್ರತಿಭೆ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ, ಮಲಯಳಂನ ಮನೋಜ್ ಪಿಳ್ಳೈ ಕ್ಯಾಮರಾ ಕೈ ಚಳಕ ಇದೆ.
ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ತಾವೂ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ʼಕೊರಗಜ್ಜʼ ಚಿತ್ರದ ನಿರ್ದೇಶಕರಿಗೆ ಮತ್ತು ತಂಡದ ಎಲ್ಲರಿಗೂ 50ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶ್ರುತಿ ಶಾಲು ಮತ್ತು ನೆನಪಿನ ಕಾಣಿಕೆ ನೀಡಿದರು.
ಕಳೆದ ವರ್ಷ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ವಿಶೇಷ ಕೋಲ ಸೇವೆಯನ್ನು ನೀಡಿದ ಬಳಿಕ ನಿರ್ದೇಶಕ ಸುಧೀರ್ ಅತ್ತಾವರ್ ʼಕೊರಗಜ್ಜʼ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ವಿಶೇಷ.