ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆದಿತ್ಯ, ಪ್ರಕಾಶ್‌ ರಾಜ್‌ ನಟನೆಯ ʻವೀರ ಕಂಬಳʼ ಸಿನಿಮಾ ರಿಲೀಸ್‌ ಬಗ್ಗೆ ಬಿಗ್‌ ಅಪ್ಡೇಟ್;‌ ಇದು ತುಳುನಾಡಿನ ನೆಲಮೂಲದ ಕಥೆ

ವೀರ ಕಂಬಳ ಸಿನಿಮಾವು ತುಳುನಾಡಿನ 800 ವರ್ಷಗಳ ಐತಿಹಾಸಿಕ ಕ್ರೀಡೆಯಾದ ಕಂಬಳದ ನೈಜ ಚಿತ್ರಣವನ್ನು ಒಳಗೊಂಡಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಆದಿತ್ಯ, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆದಿತ್ಯ-ಪ್ರಕಾಶ್ ರೈ ನಟನೆಯ ʻವೀರ ಕಂಬಳʼ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್!

-

Avinash GR
Avinash GR Jan 24, 2026 11:52 AM

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾ ʻವೀರ ಕಂಬಳʼ. ಕಂಬಳ ಎಂಬುದು ತುಳುನಾಡಿನ ನೆಲಮೂಲದ ಸಂಸ್ಕೃತಿಯ ಸೆಲೆಯಂಥಾ ಕ್ರೀಡೆ. 800 ವರ್ಷಗಳಿಗೂ ಹೆಚ್ಚಿನ ಸಮೃದ್ಧವಾದ ಇತಿಹಾಸವಿರುವ ಈ ಕ್ರೀಡೆ ಇಂದಿಗೂ ಜನಜನಿತ. ಆದರೆ ಕಾಲ ಕಳೆದಂತೆ ಒಂದಷ್ಟು ಕಾನೂನು ತೊಡಕುಗಳೆದುರಾಗುವ ಮೂಲಕ ಕಂಬಳ ಒಂದಷ್ಟು ರೂಪಾಂತರಗಳನ್ನು ಹೊಂದಿದೆ.

ಇದೀಗ ಅದರ ನಿಖರ ಇತಿಹಾಸದ ಜಾಡಿನಲ್ಲಿ ಹೆಜ್ಜೆಯಿಡುವ ಮೂಲಕ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ವೀರ ಕಂಬಳ ಚಿತ್ರವನ್ನು ರೂಪಿಸಿದ್ದಾರೆ ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು. ಆರಂಭದಿಂದಲೂ ಸಖತ್‌ ಸುದ್ದಿ ಆಗುತ್ತಿರುವ ವೀರ ಕಂಬಳ ಚಿತ್ರವನ್ನು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ತೆರೆಗಾಣಿಸಲು ಚಿತ್ರತಂಡ ನಿರ್ಧರಿಸಿದೆ.

Kambala: ಕಂಬಳ ಕ್ರೀಡೆಗೆ ರಾಜ್ಯದ ಅಧಿಕೃತ ಮಾನ್ಯತೆ, ಅಸೋಸಿಯೇಷನ್‌ ಸ್ಥಾಪನೆ

ಎರಡು ವರ್ಷಗಳ ಕಾಲ ಶ್ರಮ

"ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ, ಚಿತ್ರಕಥೆ ಸಿದ್ಧಪಡಿಸಲು ಎರಡು ವರ್ಷಗಳ ಕಾಲ ಶ್ರಮ ಹಾಕಲಾಗಿದೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಚಿತ್ರಕಥೆ ಮತ್ತು ಸಂಭಾಷಣೆಯ ಮೂಲಕ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ನಾಯಕನಾಗಿ ಸವಾಲಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನದಲ್ಲಿ ಯಾವುದೇ ತೊಡಕಿಲ್ಲದಂತೆ ವೀರ ಕಂಬಳವನ್ನು ಅಣಿಗೊಳಿಸಿದ್ದೇವೆ" ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.

ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಭಾಗಿ

ದಕ್ಷಿಣ ಕನ್ನಡದ ಮೂಡುಬಿದರೆಯ ಬಳಿಯಲ್ಲಿ ವಿಶಾಲವಾದ ಕಂಬಳದ ಗದ್ದೆಯನ್ನು ಸಿದ್ಧಪಡಿಸಿ, ಅಲ್ಲಿ ಪ್ರಮುಖ ಸೀನ್‌ಗಳನ್ನು ಸೆರೆಹಿಡಿಯಲಾಗಿದೆ. ಪ್ರತಿ ದಿನವೂ ಇಪ್ಪತ್ತು ಜೊತೆ ಕೋಣಗಳು ಹಾಗೂ ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ವಿಶೇಷವೆಂದರೆ, ಕಂಬಳದಲ್ಲಿ ಕೋಣಗಳನ್ನು ಓಡಿಸೋದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿಯೂ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರಿಗೆ ಸ್ವರಾಜ್ ಶೆಟ್ಟಿ ಜೊತೆಯಾಗಿದ್ದಾರೆ. ಈ ಸಿನಿಮಾಕ್ಕೆ ದುಬೈನಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ಅಂತಿಮ ಘಟ್ಟದಲ್ಲಿದ್ದು, ಶೀಘ್ರದಲ್ಲೇ ನಿಖರವಾದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.

Kantara: ಕಾಂತಾರದ ಕಂಬಳದಲ್ಲಿ ಮಿಂಚಿದ್ದ ಅಪ್ಪು ಇನ್ನಿಲ್ಲ

ತುಳು ರಂಗಭೂಮಿ ನಟರ ಅಭಿನಯ

ವೀರ ಕಂಬಳ ಚಿತ್ರವನ್ನು ಬಾಬಾ'ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರಾಜ್, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ.

ಚಿತ್ರಕಥೆ ಮತ್ತು ಸಂಭಾಷಣೆಯನ್ನು ವಿಜಯ್ ಕೊಡಿಯಾಲ್‌ಬೈಲ್ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್. ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸ ವೀರ ಕಂಬಳ ಚಿತ್ರಕ್ಕಿದೆ.