ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Veera Kambala Review: ಕರಾವಳಿ ಸೊಗಡಿನ ಕಂಬಳದ ಹಿಂದಿರುವ ನಂಬಿಕೆ, ಆಚರಣೆಗಳ ಅನಾವರಣ

Veera Kambala Kannada Movie Review: ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ವೀರ ಕಂಬಳ' ಸಿನಿಮಾ ಕರಾವಳಿಯ ನೂರಾರು ವರ್ಷಗಳ ಇತಿಹಾಸವಿರುವ ಕಂಬಳ ಕ್ರೀಡೆಯ ಸುತ್ತ ಸಾಗುತ್ತದೆ. ಎರಡು ಕುಟುಂಬಗಳ ನಡುವಿನ ದ್ವೇಷದಿಂದ ನಿಂತುಹೋದ ಕಂಬಳವನ್ನು ಮತ್ತೆ ಆರಂಭಿಸುವ ಹರಕೆಯ ಸುತ್ತ ಕಥೆ ಹೆಣೆಯಲಾಗಿದೆ.

ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಅವರು ಕನ್ನಡದಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ಕೊಟ್ಟವರು. ಇದೀಗ ಅವರು ಕರಾವಳಿ ಸೊಗಡಿನ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಅದೇ ʻವೀರ ಕಂಬಳʼ. ಹೆಸರೇ ಹೇಳುವಂತೆ ಇದು ಕಂಬಳ ಕುರಿತ ಸಿನಿಮಾ. ಕರಾವಳಿಯ ಸಂಸ್ಕೃತಿಯ ಭಾಗವಾದ ಈ ಕ್ರೀಡೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇದರ ಸುತ್ತವೇ ಕಥೆ ಹೆಣೆದು, ಅದನ್ನು ಸಿನಿಮಾವಾಗಿಸಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು.

ವೀರ ಕಂಬಳದ ಕಥೆ ಏನು?

ಕಂಬಳ ಇದೆ ಎಂದ ಮಾತ್ರಕ್ಕೆ, ಅದನ್ನೇ ಹೈಲೈಟ್‌ ಮಾಡಿಕೊಂಡು, ಕಂಬಳ ರೇಸ್‌ ಅನ್ನೇ ತೋರಿಸಿ, ಸಿನಿಮಾ ಮಾಡುವ ಬದಲು, ಅದಕ್ಕೊಂದು ಗಟ್ಟಿ ಕಥೆಯನ್ನು ಬರೆದುಕೊಂಡಿರುವುದು ಇದರ ಮೊದಲ ಪ್ಲಸ್‌ ಪಾಯಿಂಟ್.‌ ಮಂಜೊಟ್ಟಿ ಗುತ್ತು ಮತ್ತು ಮಿತ್ತ ಬೈಲ್‌ ಎಂಬೆರಡು ಕುಟುಂಬಗಳ ಮಧ್ಯೆ ಕಂಬಳದ ಹಿನ್ನೆಲೆಯಲ್ಲಿ ವ್ಯಾಜ್ಯ ಶುರುವಾಗಿರುತ್ತದೆ. 6-7 ದಶಕಗಳ ಹಿಂದೆ ನಡೆದ ಈ ಗಲಾಟೆಯಿಂದ ಕಂಬಳವೇ ನಿಂತಹೋಗಿರುತ್ತದೆ. ಕೊನೆಗೆ ಮಂಜೊಟ್ಟಿ ಗುತ್ತು ಕುಟುಂಬದಲ್ಲಿನ ಕೆಲವೊಂದು ಘಟನೆಗಳಿಂದಾಗಿ, ಕಂಬಳ ನಡೆಸುವ ಹರಕೆ ಶುರುವಾಗುತ್ತದೆ.

ಮತ್ತೆ ಆ ಎರಡು ಕುಟುಂಬಗಳು ಕಂಬಳದ ಓಟ ಕೋಣಗಳನ್ನು ಇಳಿಸುವ ಪಂದ್ಯಕ್ಕೆ ಅಣಿಯಾಗುತ್ತವೆ. ಆದರೆ ಆ ನಡುವೆ ಸಾಕಷ್ಟು ತಿರುವುಗಳು ಎದುರಾಗುತ್ತವೆ. ಅದೇನು ಎಂಬುದನ್ನು ಎಳೆ ಎಳೆಯಾಗಿ ಹೇಳಿಕೊಂಡು ಹೋಗಿದ್ದಾರೆ ರಾಜೇಂದ್ರ ಸಿಂಗ್‌ ಬಾಬು. ಅಂತಿಮವಾಗಿ ಕಂಬಳ ನಡೆಯುತ್ತದೆಯೇ? ಇಲ್ಲವೇ? ಕಂಬಳದಲ್ಲಿ ಯಾರು ಗೆಲ್ಲುತ್ತಾರೆ ಎಂಬ ರೋಚಕತೆಯನ್ನು ಕೊನೆಯವರೆಗೂ ಕಾಪಾಡಿಕೊಳ್ಳಲಾಗಿದೆ.

'ವೀರ ಕಂಬಳ' ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಟನೆ: ಈ ಸಿನಿಮಾ ಯಾವಾಗ ಬಿಡುಗಡೆ?

ಮೇಕಿಂಗ್‌ ಹೇಗಿದೆ? ‌

ಮೊದಲರ್ಧಕ್ಕಿಂತ ದ್ವಿತಿಯಾರ್ಧಕ್ಕೆ ತೂಕವಿದೆ. ಸೆಕೆಂಡ್‌ ಹಾಫ್‌ನ ಆರಂಭದಲ್ಲೇ ಬರುವ ಕೋರ್ಟ್‌ ಸನ್ನಿವೇಶಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಪ್ರಕಾಶ್‌ ರಾಜ್‌ ಅವರು ವಕೀಲರಾಗಿ ಕಂಬಳದ ಮಹತ್ವವನ್ನು ಮತ್ತು ಅದರ ಇತಿಹಾಸವನ್ನು ಬಹಳ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಈ ಕೋರ್ಟ್‌ ಸನ್ನಿವೇಶವನ್ನು ಬಹಳ ಅಚ್ಚುಕಟ್ಟಾಗಿ ತೆರೆಮೇಲೆ ತರಲಾಗಿದೆ ಮತ್ತು ಅದು ಸಿನಿಮಾದ ತೂಕವನ್ನು ಜಾಸ್ತಿ ಮಾಡಿದೆ. ಕೊನೆಯಲ್ಲಿ ಬರುವ ಕಂಬಳದ ರೇಸ್‌ನ ಚಿತ್ರಣ ಕೂಡ ಉತ್ತಮವಾಗಿದೆ. ಪ್ರೇಕ್ಷಕರಿಗೆ ಕಂಬಳ ರೇಸ್‌ ಅನ್ನು ಶೂಟ್‌ ಮಾಡಿರುವ ರೀತಿಯೂ ಚೆನ್ನಾಗಿದೆ.

ವೀರ ಕಂಬಳದಲ್ಲಿ ಗಟ್ಟಿ ಕಥೆ ಇದ್ದರೂ, ಮೇಕಿಂಗ್‌ ಮಾತ್ರ ಹಳೆಯ ಶೈಲಿಯಲ್ಲಿದೆ. ಕಮರ್ಷಿಯಲ್‌ ಎಲಿಮಿಂಟ್‌ಗಳಾದ ಹಾಡುಗಳು, ಫೈಟ್‌ ಎಲ್ಲವನ್ನು ಬಳಸಲಾಗಿದೆ. ಕದ್ರಿ ಮಣಿಕಾಂತ್‌ ಅವರ ಸಂಗೀತ ನಿರ್ದೇಶನದ ಕಂಬಳ ಹಾಡು ಚೆನ್ನಾಗಿದ್ದರೆ, ಹಿನ್ನೆಲೆ ಸಂಗೀತ ಕರಾವಳಿಯ ಸೊಗಡಿಗೆ ಆಪ್ತವಾಗಿದೆ. ಕಂಬಳದ ಹೆಸರಿನಲ್ಲಿ ನಡೆಯುವ ರಾಜಕಾರಣ, ಷಡ್ಯಂತ್ರಗಳನ್ನು ಕೂಡ ಸಿನಿಮಾದಲ್ಲಿ ಹೇಳಲಾಗಿದೆ.

Mahakumbh 2025: ಮಹಾಕುಂಭಮೇಳದಲ್ಲಿ ‘ವೀರ ಕಂಬಳ’ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹಾಗೂ ನಿರ್ಮಾಪಕ ಅರುಣ್ ರೈ ತೊಡರ್ ಪುಣ್ಯಸ್ನಾನ

ಬಣ್ಣ ಹಚ್ಚಿದ ಶ್ರೀನಿವಾಸ್‌ ಗೌಡ

ಈ ಚಿತ್ರದಲ್ಲಿ ಯಾರೂ ಹೀರೋ ಅಂತ ಇಲ್ಲ. ನಟ ಆದಿತ್ಯ ಅವರು ದುಬೈನಲ್ಲಿ ಇರುವ ಡಾನ್‌ ಪಾತ್ರ ಮಾಡಿದ್ದಾರೆ. ಸಿನಿಮಾದ ಆರಂಭ ಮತ್ತು ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಕಂಬಳದ ಓಟಗಾರರಾಗಿ ಸ್ವರಾಜ್‌ ಶೆಟ್ಟಿ ಮತ್ತು ಶ್ರೀನಿವಾಸ್‌ ಗೌಡ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಮಿಂಚಿರುವ ಇಬ್ಬರು, ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಿಜ ಜೀವನದಲ್ಲಿಯೂ ಕಂಬಳದ ಓಟಗಾರರಾಗಿರುವ, ಇಂಡಿಯನ್ ಉಸೇನ್ ಬೋಲ್ಟ್ ಎಂದು ಕರೆಸಿಕೊಳ್ಳುವ ಶ್ರೀನಿವಾಸ ಗೌಡ, ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವುದು ವಿಶೇಷ.

ಮಂಜೊಟ್ಟಿ ಗುತ್ತು ಕುಟುಂಬದ ಮುಖ್ಯಸ್ಥನಾಗಿ ಗೋಪಿನಾಥ್‌ ಭಟ್‌, ನವೀನ್‌ ಪಡೀಲ್‌, ಉಷಾ ಭಂಡಾರಿ, ಪೊಲೀಸ್‌ ಅಧಿಕಾರಿ ಪಾತ್ರ ಮಾಡಿರುವ ರಾಧಿಕಾ ನಾರಾಯಣ್‌ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಪ್ರಕಾಶ್‌ ರಾಜ್‌ ಮತ್ತು ರವಿಶಂಕರ್‌ ಕೆಲವೇ ನಿಮಿಷ ಕಾಣಿಸಿಕೊಂಡರೂ, ಇಂಪ್ಯಾಕ್ಟ್‌ ಬೀರುತ್ತಾರೆ. ಕಂಬಳವನ್ನು ಇಷ್ಟಪಡುವವರಿಗೆ, ಅದರಲ್ಲೂ ಕರಾವಳಿ ಭಾಗದವರಿಗೆ ಈ ಸಿನಿಮಾ ಹಿಡಿಸಬಹುದು.

Movie: ವೀರ ಕಂಬಳ
Release Date: ಫೆ.27, 2026
Language: ಕನ್ನಡ
Genre: ಥ್ರಿಲ್ಲರ್‌, ಡ್ರಾಮಾ, ಆಕ್ಷನ್
Director: ಎಸ್.‌ ವಿ. ರಾಜೇಂದ್ರ ಸಿಂಗ್‌ ಬಾಬು
Cast: ಸ್ವರಾಜ್‌ ಶೆಟ್ಟಿ, ಶ್ರೀನಿವಾಸ ಗೌಡ, ಪ್ರಕಾಶ್‌ ರಾಜ್‌, ಆದಿತ್ಯ, ರವಿಶಂಕರ್‌, ರಾಧಿಕಾ ಚೇತನ್‌,
Duration: 154 Minutes
Rating: 3/5