'ವೀರ ಕಂಬಳ' ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಟನೆ: ಈ ಸಿನಿಮಾ ಯಾವಾಗ ಬಿಡುಗಡೆ?
ಕರಾವಳಿಯ ಜಾನಪದ ಕ್ರೀಡೆ ಕಂಬಳದ ಹಿನ್ನೆಲೆಯಲ್ಲಿ 'ವೀರ ಕಂಬಳ' ಚಿತ್ರ ಮೂಡಿಬರುತ್ತಿದ್ದು, ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಟಿಸಿರುವುದು ವಿಶೇಷ.
-
ಹಿರಿಯ ಸಿನಿಮಾ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ಕರಾವಳಿ ಐತಿಹಾಸಿಕ ಕಂಬಳದ ಬಗ್ಗೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ʻವೀರ ಕಂಬಳʼ ಹೆಸರಿನ ಈ ಸಿನಿಮಾ ತಂಡದಿಂದ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ. ಅದೇನಪ್ಪ ಅಂದ್ರೆ, ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಟಿಸಿದ್ದಾರೆ.
ಫೆ.27ರಂದು ತೆರೆಗೆ ಬರಲಿರುವ ʻವೀರ ಕಂಬಳʼ
ʻವೀರ ಕಂಬಳʼ ಸಿನಿಮಾವು ಫೆ.27ರಂದು ತೆರೆಗೆ ಬರುತ್ತಿದೆ. ಸರಿಸುಮಾರು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಇದೀಗ ಮಹತ್ವದ ಪಾತ್ರವೊಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿರೋದು ವಿಶೇಷ.
ವೀರೇಂದ್ರ ಹೆಗ್ಗಡೆ ಅವರು ನಟಿಸಿದ್ದೇಕೆ?
ಈ ಚಿತ್ರದಲ್ಲಿ ಪಾತ್ರವೊಂದಕ್ಕೆ ವೀರೇಂದ್ರ ಹೆಗ್ಗಡೆ ಅವರು ಜೀವ ತುಂಬಿದ್ದಾರೆಂಬ ವಿಷಯ ಹಿಂದೆಯೇ ಗೊತ್ತಾಗಿತ್ತು. ಆದರೆ, ಚಿತ್ರತಂಡ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಯಾಕೆ ಈ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ, ಕಂಬಳದ ಇತಿಹಾಸ ಅರಿಯುತ್ತಾ ಹೋದಂತೆಲ್ಲ ಅದಕ್ಕೂ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಇರುವ ಅವಿನಾಭಾವ ನಂಟಿನ ವಿಚಾರ ರಾಜೇಂದ್ರ ಸಿಂಗ್ ಬಾಬು ಅವರನ್ನು ಬೆರಗುಗೊಳಿಸಿತ್ತಂತೆ. ಆ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತುಳುನಾಡ ಸೀಮೆಯ ಖಾಸಗಿ ಮನೋರಂಜನೆಯ ಕ್ರೀಡೆಯಾಗಿದ್ದ ಕಂಬಳವನ್ನು ಎಪ್ಪತ್ತರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದವರು ವೀರೇಂದ್ರ ಹೆಗ್ಗಡೆ. ಆ ನಂತರ ಅದು ಬೇರೆ ಬೇರೆ ರೂಪಗಳಲ್ಲಿ ರೂಪಾಂತರ ಹೊಂದಿ ಇಡೀ ಕರುನಾಡನ್ನೇ ಸೆಳೆದುಕೊಂಡಿತ್ತು. ಈ ಕಾರಣದಿಂದಲೇ ವೀರೇಂದ್ರ ಹೆಗ್ಗಡೆ ಈ ಸಿನಿಮಾದಲ್ಲಿನ ಮಹತ್ವದ ಪಾತ್ರ ಮಾಡಬೇಕೆಂಬ ಆಲೋಚನೆ ನಿರ್ದೇಶಕರಿಗೆ ಬಂದಿತ್ತು.
"ಕಂಬಳದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ವೀರೇಂದ್ರ ಹೆಗ್ಗಡೆಯವರು ನಟಸಲು ಒಪ್ಪಿಗೆ ಸೂಚಿಸಿದ್ದರು. ಕಡೆಗೂ ಒಂದಿಡೀ ಸಿನಿಮಾದ ಆತ್ಮದಂಥ, ಮೌಲಿಕ ಸಂದೇಶವೊಂದನ್ನು ರವಾನಿಸುವ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಜೀವ ತುಂಬಿದ್ದಾರೆ. ಅವರ ಪಾತ್ರ ಕೂಡ ವೀರ ಕಂಬಳ ಚಿತ್ರದ ಆಕರ್ಷಣೆಗಳಲ್ಲಿ ಒಂದಾಗಿದೆ" ಎನ್ನುತ್ತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
ಪ್ರಧಾನ ಪಾತ್ರದಲ್ಲಿ ಪ್ರಕಾಶ್ ರೈ
ವೀರೇಂದ್ರ ಹೆಗ್ಗಡೆ ಅವರು ಅತ್ಯಂತ ಸಂಭ್ರಮದಿಂದಲೇ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಚಿತ್ರವನ್ನು ಬಾಬಾ'ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ - ಸಂಭಾಷಣೆಯನ್ನು ವಿಜಯ್ ಕೊಡಿಯಾಲ್‌ಬೈಲ್ ಬರೆದಿದ್ದು. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.