ಕಲರ್ಸ್ ಕನ್ನಡದ ಧಾರಾವಾಹಿ ‘ಅಗ್ನಿಸಾಕ್ಷಿ’ ತನ್ನ ಯಶಸ್ವಿ 100 ಸಂಚಿಕೆಗಳ ಸಂಭ್ರಮವನ್ನು ಹೊಸಪೇಟೆಯ ಪ್ರೇಕ್ಷಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಿದೆ. ನಗರದಲ್ಲಿ ಆಯೋಜಿಸಲಾಗಿದ್ದ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ವಿಶೇಷ ಕಾರ್ಯಕ್ರಮದಲ್ಲಿ 1,000ಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಂಡು ತಮ್ಮ ನೆಚ್ಚಿನ ತಾರೆಯರೊಂದಿಗೆ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಾದ ಅಗ್ನಿ, ಸಾಕ್ಷಿ ಹಾಗೂ ಅಗ್ನಿಯ ಸಹೋದರಿ ಅದಿತಿ ಸೇರಿದಂತೆ ಇಡೀ ತಾರಾಗಣ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿತು. ಬಳಿಕ ಮುಖ್ಯ ವೇದಿಕೆಗೆ ಆಗಮಿಸಿದ ಕಲಾವಿದರಿಗೆ ನೆರೆದಿದ್ದ ಅಪಾರ ಜನಸ್ತೋಮ ಜಯಘೋಷ, ಶಿಳ್ಳೆ ಹಾಗೂ ಚಪ್ಪಾಳೆಗಳ ಮೂಲಕ ಅದ್ಧೂರಿ ಸ್ವಾಗತ ಕೋರಿತು.
'ಅಗ್ನಿಸಾಕ್ಷಿ' ಧಾರಾವಾಹಿಯ ಕಲರ್‌ಫುಲ್ ರೋಮ್ಯಾಂಟಿಕ್ ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ
ಹೊಸಪೇಟೆ ಜನತೆಗೆ ಧನ್ಯವಾದಗಳು
ವೇದಿಕೆಯ ಮೇಲೆ ನೂರು ಸಂಚಿಕೆಗಳ ಸವಿನೆನಪಿಗಾಗಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಯಶಸ್ಸಿನ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಕಲಾವಿದರು, "ಧಾರಾವಾಹಿ ಆರಂಭವಾದ ಮೊದಲ ದಿನದಿಂದಲೂ ಪ್ರೇಕ್ಷಕರು ನೀಡುತ್ತಿರುವ ಬೆಂಬಲ ಮತ್ತು ಅತಿಯಾದ ಪ್ರೀತಿಯೇ ಈ ಯಶಸ್ಸಿಗೆ ಕಾರಣ" ಎಂದು ಹೊಸಪೇಟೆಯ ಜನತೆಗೆ ಮನದುಂಬಿ ಧನ್ಯವಾದ ಅರ್ಪಿಸಿದರು.
ಸಾರ್ವಜನಿಕವಾಗಿ ಧಾರಾವಾಹಿ ಪ್ರದರ್ಶನ
ಈ ಸಮಾರಂಭದ ಪ್ರಮುಖ ಆಕರ್ಷಣೆಯೆಂದರೆ ‘ಅಗ್ನಿಸಾಕ್ಷಿ’ಯ ಎರಡು ಗಂಟೆಗಳ ಮಹಾ ಸಂಚಿಕೆಯ ಸಾಮೂಹಿಕ ಪ್ರದರ್ಶನ. ತೆರೆಯ ಮೇಲೆ ಕಥೆಯ ರೋಚಕ ತಿರುವುಗಳು ಅನಾವರಣಗೊಳ್ಳುತ್ತಿದ್ದಂತೆ, ಆ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರೇ ತಮ್ಮ ಪಕ್ಕದಲ್ಲೇ ಕುಳಿತು ವೀಕ್ಷಿಸುತ್ತಿದ್ದ ಅಪರೂಪದ ಕ್ಷಣ ಹೊಸಪೇಟೆಯ ಕಿರುತೆರೆ ಪ್ರಿಯರಿಗೆ ಮರೆಯಲಾಗದ ಅನುಭವ ನೀಡಿತು.
ಇದರೊಂದಿಗೆ ಅಭಿಮಾನಿಗಳೊಂದಿಗೆ ಕ್ಯಾಂಡಿಡ್ ಸಂವಾದ, ರಸಪ್ರಶ್ನೆ, ವೇದಿಕೆಯ ಮೇಲಿನ ನೃತ್ಯ ಹಾಗೂ ಮನರಂಜನಾ ಚಟುವಟಿಕೆಗಳು ಇಡೀ ಸಂಜೆಯ ರಂಗನ್ನು ಹೆಚ್ಚಿಸಿದವು. ಅಗ್ನಿ, ಸಾಕ್ಷಿ ಹಾಗೂ ಅದಿತಿ ಪಾತ್ರಧಾರಿಗಳು ಪ್ರೇಕ್ಷಕರೊಂದಿಗೆ ನೇರವಾಗಿ ಬೆರೆತು, ಅವರ ಪ್ರಶ್ನೆಗಳಿಗೆ ಉತ್ತರಿಸಿ ಫೋಟೋ-ಸೆಲ್ಫಿಗಳಿಗೆ ಪೋಸ್ ನೀಡಿದರು. ಕಿರುತೆರೆಯ ಕಥೆ ಮತ್ತು ಪಾತ್ರಗಳನ್ನು ಕೇವಲ ಟಿವಿ ಪರದೆಗೆ ಸೀಮಿತಗೊಳಿಸದೆ ನೇರವಾಗಿ ಜನರ ಬಳಿಗೆ ಕೊಂಡೊಯ್ದ ಈ ‘ಸೀರಿಯಲ್ ಸಂಭ್ರಮ’, ಅಭಿಮಾನಿಗಳು ಹಾಗೂ ಕಲಾವಿದರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಯಿತು.