ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಲ್ಕನೇ ದಿನ 300 ಕೋಟಿ ಕ್ಲಬ್ ಸೇರಿದ ‘ದೃಶ್ಯಂ 3: ದಿ ಕನ್‌ಕ್ಲೂಷನ್’; ಸೋಮವಾರದ ಪರೀಕ್ಷೆಯಲ್ಲೂ ಅಜಯ್ ದೇವಗನ್ ಪಾಸ್‌!

Drishyam 3 Movie: ಅಜಯ್‌ ದೇವ್‌ಗನ್‌ ನಟನೆಯ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು, ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಮೈಲಿಗಲ್ಲನ್ನು ಯಶಸ್ವಿಯಾಗಿ ತಲುಪಿದೆ. ಮೊದಲ ಸೋಮವಾರದ ಪರೀಕ್ಷೆಯಲ್ಲೂ ಗಟ್ಟಿಯಾಗಿ ಈ ಸಿನಿಮಾವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಬಾಲಿವುಡ್‌ನ ಬಹುನಿರೀಕ್ಷಿತ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರದ ಓಟ ಮುಂದುವರಿಸಿದೆ. ಮೊದಲ ವಾರಾಂತ್ಯದಲ್ಲಿ ಬ್ಲಾಕ್‌ಬಸ್ಟರ್ ಪ್ರದರ್ಶನ ಕಂಡಿದ್ದ ಈ ಸಿನಿಮಾ, ನಾಲ್ಕನೇ ದಿನವಾದ ಮೊದಲ ಸೋಮವಾರದ ಗಳಿಕೆಯಲ್ಲಿ ತುಸು ಇಳಿಕೆ ಕಂಡಿದ್ದರೂ ವಿಶ್ವಾದ್ಯಂತ 300 ಕೋಟಿ ಮೈಲಿಗಲ್ಲನ್ನು ಯಶಸ್ವಿಯಾಗಿ ದಾಟಿ ಮುನ್ನುಗ್ಗುತ್ತಿದೆ. ಅಜಯ್ ದೇವಗನ್, ಟಬು, ಜೈದೀಪ್ ಅಹ್ಲಾವತ್ ಹಾಗೂ ಪ್ರಕಾಶ್ ರಾಜ್ ಅವರಂತಹ ಘಟಾನುಘಟಿ ಕಲಾವಿದರ ಅಭಿನಯ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ 200 ಕೋಟಿ ರೂ. ಗಳಿಕೆ

ಮೂಲಗಳ ಪ್ರಕಾರ, ನಾಲ್ಕನೇ ದಿನವಾದ ಸೋಮವಾರ ಭಾರತದಾದ್ಯಂತ ಒಟ್ಟು 16,254 ಪ್ರದರ್ಶನಗಳಿಂದ ಚಿತ್ರ 21 ಕೋಟಿ ಗಳಿಕೆಯಾಗಿದೆ. ಭಾರತದಲ್ಲಿ ಮೊದಲ ದಿನ 62 ಕೋಟಿ ಗಳಿಸುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ‘ದೃಶ್ಯಂ 3ʼ ನಂತರ ಎರಡನೇ ದಿನ 53.50 ಕೋಟಿ ಹಾಗೂ ಮೂರನೇ ದಿನ ಭಾನುವಾರ 61 ಕೋಟಿ ಗಳಿಸಿತ್ತು. ನಾಲ್ಕನೇ ದಿನದ 21 ಕೋಟಿ ಗಳಿಕೆಯೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್‌ ಕಲೆಕ್ಷನ್ 197.50 ಕೋಟಿ ತಲುಪಿದ್ದು, ಭಾರತದಲ್ಲಿನ ಒಟ್ಟು ಗ್ರಾಸ್ ಕಲೆಕ್ಷನ್‌ 237 ಕೋಟಿ ರೂ. ಮುಟ್ಟಿದೆ.

Ajay Devgn: ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಸಿನಿಮಾದ ಅಬ್ಬರ ಶುರು; ಮೊದಲ ದಿನವೇ ದಾಖಲೆ ಪ್ರಮಾಣದ ಕಲೆಕ್ಷನ್‌ ಗ್ಯಾರಂಟಿ!

ವಿಶ್ವಾದ್ಯಂತ 300 ಕೋಟಿ ಕ್ಲಬ್‌ಗೆ ದೃಶ್ಯಂ 3 ಎಂಟ್ರಿ

ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ತನ್ನ ದರ್ಬಾರ್ ಮುಂದುವರಿಸಿದೆ. ನಾಲ್ಕನೇ ದಿನ ಓವರ್‌ಸೀಸ್ ಮಾರುಕಟ್ಟೆಯಲ್ಲಿ ₹5 ಕೋಟಿ ಗಳಿಸುವ ಮೂಲಕ ವಿದೇಶದ ಒಟ್ಟು ಗ್ರಾಸ್ ಕಲೆಕ್ಷನ್ ₹66 ಕೋಟಿಗೆ ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯ ₹237 ಕೋಟಿ ಗ್ರಾಸ್ ಹಾಗೂ ವಿದೇಶಿ ಕಲೆಕ್ಷನ್‌ನ ₹66 ಕೋಟಿ ಗ್ರಾಸ್ ಸೇರಿ, ‘ದೃಶ್ಯಂ 3’ ವಿಶ್ವಾದ್ಯಂತ ಒಟ್ಟು ₹303 ಕೋಟಿ ಬಾಚಿಕೊಂಡು ಭರ್ಜರಿ ದಾಖಲೆ ಬರೆದಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಅಬ್ಬರಿಸಿದ ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರಕ್ಕೆ, ವಾರದ ದಿನಗಳಲ್ಲೂ ಇದೇ ರೀತಿಯ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮುಂದಿರುವ ಪ್ರಮುಖ ಸವಾಲಾಗಿದೆ.

ಏನಿದರ ಕಥೆ?

ಕಥೆಯ ವಿಚಾರಕ್ಕೆ ಬಂದರೆ, ‘ದೃಶ್ಯಂ 3’ ವಿಜಯ್ ಸಾಲ್ಗಾಂವ್ಕರ್ ಮತ್ತು ಆತನ ಕುಟುಂಬದ ರಹಸ್ಯ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ತನ್ನ ಸಂಸಾರವನ್ನು ರಕ್ಷಿಸಿಕೊಳ್ಳಲು ಆತ ಹೆಣೆಯುವ ರಕ್ಷಣಾ ಜಾಲ, ಸಾಕ್ಷ್ಯಾಧಾರಗಳು, ಕಾನೂನು ಮತ್ತು ತನಿಖಾಧಿಕಾರಿಗಳ ನಡುವಿನ ಹಗ್ಗಜಗ್ಗಾಟ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದೆ. ಈ ಮೂರನೇ ಭಾಗದಲ್ಲಿ ಎಂದಿನ ಕೌಟುಂಬಿಕ ಭಾವನಾತ್ಮಕ ಅಂಶಗಳ ಜೊತೆಗೆ ಹೊಸದೊಂದು ತಿರುವು ಮತ್ತು ತೀವ್ರ ಸಂಘರ್ಷವನ್ನು ಸೇರಿಸಲಾಗಿದೆ.

ಈ ಚಿತ್ರದಲ್ಲಿ ವಿಜಯ್ ಸಾಲ್ಗಾಂವ್ಕರ್ ಆಗಿ ಅಜಯ್ ದೇವಗನ್ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದರೆ, ನಂದಿನಿ ಪಾತ್ರದಲ್ಲಿ ಶ್ರಿಯಾ ಶರಣ್ ಹಾಗೂ ಅಂಜು ಪಾತ್ರದಲ್ಲಿ ಇಶಿತಾ ದತ್ತಾ ಎಂದಿನಂತೆ ಮುಂದುವರಿದಿದ್ದಾರೆ. ಮೀರಾ ದೇಶಮುಖ್ ಆಗಿ ಟಬು ನಟಿಸಿದ್ದು, ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಅವರ ಹೊಸ ಪಾತ್ರಗಳ ಪ್ರವೇಶ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಉಳಿದಂತೆ ರಜತ್ ಕಪೂರ್, ಸೌರಭ್ ಶುಕ್ಲಾ ಹಾಗೂ ಕಮಲೇಶ್ ಸಾವಂತ್ ಕೂಡ ಪ್ರಮುಖ ಪಾತ್ರಗಳಲ್ಲಿ ಸಾಥ್ ನೀಡಿದ್ದಾರೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ರಜಾ ದಿನದಂದು ತೆರೆಕಂಡ ಈ ಚಿತ್ರ, ವಾರದ ಉಳಿದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಮೂಡಿಸಿದೆ.