ತಮಿಳು ಚಿತ್ರರಂಗದ ಸ್ಟಾರ್ ನಟ 'ಥಲಾ' ಅಜಿತ್ ಕುಮಾರ್ ತಮ್ಮ ಮುಂದಿನ ಚಿತ್ರದ ಕುರಿತು ಅತ್ಯಂತ ಮಹತ್ವದ ಹಾಗೂ ಧೈರ್ಯದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ನಿರ್ದೇಶಕ ಆದಿಕ್ ರವಿಚಂದ್ರನ್ ಜೊತೆಗಿನ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರಕ್ಕೆ ಬೇರೆ ನಿರ್ಮಾಪಕರಿಗಾಗಿ ಕಾಯುವ ಬದಲು, ತಾವೇ ಸ್ವತಃ ಬಂಡವಾಳ ಹೂಡಲು ಅಜಿತ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಗಾಸಿಪ್ ವಲಯದಲ್ಲಿ ಸದ್ದು ಮಾಡಿದ್ದ ಸಂಭಾವನೆ
ಅಜಿತ್ ಹಾಗೂ ಆದಿಕ್ ರವಿಚಂದ್ರನ್ ಕಾಂಬಿನೇಷನ್‌ನ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವು ಭಾರಿ ಯಶಸ್ಸು ಕಂಡಿತ್ತು. ಇದರ ಬೆನ್ನಲ್ಲೇ ಈ ಜೋಡಿ ಮತ್ತೊಮ್ಮೆ ಒಂದಾಗಲಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಈ ವರ್ಷದ ಆರಂಭದಿಂದಲೇ ಆ ಸಿನಿಮಾ ಸೆಟ್ಟೇರಲು ದೊಡ್ಡ ವಿಘ್ನವೊಂದು ಎದುರಾಗಿತ್ತು. ಅಜಿತ್ ಕುಮಾರ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 100 ರಿಂದ 150 ಕೋಟಿ ರೂ.ಗಳ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದರು ಎಂಬ ಮಾತು ಕೇಳಿಬಂದಿತ್ತು.
Ajith Kumar: ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ
ಇಷ್ಟೊಂದು ದೊಡ್ಡ ಮೊತ್ತ ನೀಡಿ ರಿಸ್ಕ್ ತೆಗೆದುಕೊಳ್ಳಲು ಪ್ರಮುಖ ನಿರ್ಮಾಣ ಸಂಸ್ಥೆಗಳು ಹಿಂಜರಿದಿದ್ದವು. ಕೆಲವು ನಿರ್ಮಾಪಕರು ಲಾಭದಲ್ಲಿ ಪಾಲು ನೀಡುವ ಮಾದರಿಗೆ ಒಪ್ಪಿದ್ದರೂ, ಅಂತಿಮವಾಗಿ ಸಿನಿಮಾ ಮಾತ್ರ ಸೆಟ್ಟೇರಿರಲಿಲ್ಲ.
ನಾನೇ ಬಂಡವಾಳ ಹಾಕ್ತೀನಿ ಎಂದ್ರಾ 'ಥಲಾ'?
ಸಂಭಾವನೆ ಸಮಸ್ಯೆಯಿಂದ ಸಿನಿಮಾ ತಡವಾಗುತ್ತಿರುವುದನ್ನು ಕಂಡು ಬೇಸತ್ತ ಅಜಿತ್, ಈಗ ತಾವೇ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಮಾಸ್ಟರ್ ಪ್ಲಾನ್‌ನಿಂದಾಗಿ ಸಿನಿಮಾದ ಕೆಲಸಗಳು ಅತ್ಯಂತ ವೇಗವಾಗಿ ಸಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಮೂಲಗಳ ಪ್ರಕಾರ, ಅಜಿತ್ ಕುಮಾರ್ ಅವರು ಪ್ರಸ್ತುತ ತಮ್ಮ ರೇಸಿಂಗ್‌ಗೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಿದ ತಕ್ಷಣವೇ ಈ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
Ajith Kumar: ಎದೆಯ ಮೇಲೆ ದೇವಿಯ ಟ್ಯಾಟೋ ಹಾಕಿಸಿಕೊಂಡ ಕಾಲಿವುಡ್ ನಟ ಅಜಿತ್ ಕುಮಾರ್!
ಅನಿರುದ್ಧ್ ಸಂಗೀತ, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ
ಇದು ಅಜಿತ್ ಕುಮಾರ್ ಅವರ ವೃತ್ತಿಜೀವನದ 64ನೇ (AK 64) ಸಿನಿಮಾವಾಗಿದ್ದು, ಜೂನ್ 24ರಂದು ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಸಂಭಾವನೆ ವಿಚಾರಕ್ಕೆ ನಟನೊಬ್ಬ ಸುದ್ದಿಯಾಗಿ, ಕೊನೆಗೆ ಸ್ವತಃ ತಾನೇ ನಿರ್ಮಾಣಕ್ಕೆ ಇಳಿದಿರುವುದು ಸದ್ಯ ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.