ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಟೀಸರ್ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಈ ಚಿತ್ರದ ಇಬ್ಬರು ನಟರ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಮತ್ತು ಮಲಯಾಳಂನ ಸುದೇವ್ ನಾಯರ್ ಅವರು ಅಧಿಕೃತ ಫಸ್ಟ್ ಲುಕ್‌ಗಳನ್ನು ರಿಲೀಸ್ ಮಾಡಲಾಗಿದೆ.
ಟೋನಿಯಾಗಿ ಬಂದ ಅಕ್ಷಯ್ ಒಬೆರಾಯ್
ಟಾಕ್ಸಿಕ್ ಸಿನಿಮಾದಲ್ಲಿ ನಟ ಅಕ್ಷಯ್ ಒಬೆರಾಯ್ ಅವರು ಟೋನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಲುಕ್ 1950ರ ದಶಕದ ರೆಟ್ರೋ ಶೈಲಿಯಲ್ಲಿದೆ. ಉದ್ದನೆಯ ಸೈಡ್‌ಬರ್ನ್ಸ್ ಮತ್ತು ಆ ಕಾಲದ ವಿಂಟೇಜ್ ದಿರಿಸಿನಲ್ಲಿ ಅಕ್ಷಯ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಇವರ ಪಾತ್ರವು ಶಾಂತವಾಗಿದ್ದರೂ ಅಷ್ಟೇ ಕ್ರೂರವಾಗಿರಲಿದೆ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ.
ಕರ್ಮಡಿಯಾಗಿ ಮಿಂಚಿದ ಸುದೇವ್ ನಾಯರ್
ಮಲಯಾಳಂ ನಟ ಸುದೇವ್ ನಾಯರ್ ಕರ್ಮಡಿ (Karmadi) ಎಂಬ ಇಂಟೆನ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ತಲೆಗೆ ಫ್ಲಾಟ್ ಕ್ಯಾಪ್ ಧರಿಸಿ, ಕೈಯಲ್ಲಿ ಗನ್ ಹಿಡಿದು ಗಂಭೀರವಾಗಿ ನೋಡುತ್ತಿರುವ ಇವರ ಫಸ್ಟ್ ಲುಕ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸುದೇವ್ ಈಗಾಗಲೇ ವಿವಿಧ ಭಾಷೆಗಳಲ್ಲಿ ಮಿಂಚಿದ್ದಾರೆ. ಕನ್ನಡದಲ್ಲೂ ಈ ಹಿಂದೆ ಕಾಣಿಸಿಕೊಂಡಿದ್ದರು. ಇದೀಗ ಯಶ್ ಜೊತೆ ಒಂದೊಳ್ಳೆಯ ಪಾತ್ರ ಮಾಡಿದ ಖುಷಿಯಲ್ಲಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಹೇಳಿದ್ದೇನು?
ಈ ಇಬ್ಬರು ನಟರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ನಿರ್ದೇಶಕಿ ಗೀತು ಮೋಹನ್ ದಾಸ್, "ಕರ್ಮಾದಿ ಪಾತ್ರಕ್ಕೆ ಸುದೇವ್ ಅತ್ಯಂತ ಸೂಕ್ತ ಆಯ್ಕೆ. ಅವರ ನಟನಾ ಸಾಮರ್ಥ್ಯದ ಮೇಲೆ ನನಗೆ ಮೊದಲೇ ನಂಬಿಕೆ ಇತ್ತು. ಇನ್ನು ಅಕ್ಷಯ್ ಒಬೆರಾಯ್ ಅವರಿಗೆ ಇರುವ ಕುತೂಹಲ ಮತ್ತು ಅವರು ಕಥೆಯನ್ನು ಅರ್ಥಮಾಡಿಕೊಳ್ಳುವ ರೀತಿ ಅದ್ಭುತವಾಗಿದೆ. ಈ ಇಬ್ಬರೂ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ" ಎಂದು ಹೇಳಿದ್ದಾರೆ.
Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್ಜಿವಿ? ಗರಂ ಆದ್ರು ಕನ್ನಡಿಗರು
ದಾಖಲೆ ಬರೆದ ಟಾಕ್ಸಿಕ್ ಟೀಸರ್
ಈಚೆಗಷ್ಟೇ ಬಿಡುಗಡೆಯಾದ 'ಟಾಕ್ಸಿಕ್' ಟೀಸರ್ ಕೇವಲ 24 ಗಂಟೆಗಳಲ್ಲಿ 20 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ. ಇದರಲ್ಲಿ ಯಶ್ ಅವರು 'ಟಿಕೆಟ್' (Ticket) ಎಂಬ ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಚಿತ್ರದಲ್ಲಿ ಯಶ್‌ಗೆ ದ್ವಿಪಾತ್ರ ಇರಬಹುದೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮಾರ್ಚ್ 19 ರಂದು ತೆರೆಕಾಣಲಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿದೆ.