ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಜೈಲುವಾಸದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ಅಲೈಯನ್ಸ್' (Alliance) ಶೋಗೆ ಅತಿಥಿಯಾಗಿ ಆಗಮಿಸಿದ್ದ ಅವರು, ಜೈಲಿನಲ್ಲಿದ್ದಾಗ ತಾವು ಎದುರಿಸಿದ ಕಷ್ಟಕರ ಹಾಗೂ ಅಸಹ್ಯಕರ ಪರಿಸ್ಥಿತಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ತಮ್ಮ ಸಹೋದರ ಸೊಹೈಲ್ ಖಾನ್ ಸ್ಪರ್ಧಿಯಾಗಿರುವ ಈ ಶೋನಲ್ಲಿ ಭಾಗವಹಿಸಿ ಮಾತನಾಡಿದ ಸಲ್ಮಾನ್, ಜೈಲಿನಲ್ಲಿ ಅನುಭವಿಸಿದ ದಿನಗಳನ್ನು ಹಂಚಿಕೊಂಡರು.
ಜೈಲಿನಲ್ಲಿದ್ದ ಸಣ್ಣ ಕೊಠಡಿ, ಹಲ್ಲಿಗಳಿದ್ದ ಟಾಯ್ಲೆಟ್
ಜೈಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡ ಸಲ್ಮಾನ್ ಖಾನ್, "ಆ ಜಾಗ ತುಂಬಾ ಚಿಕ್ಕದಾಗಿತ್ತು. ಅಲ್ಲಿ ಕೇವಲ ಒಂದೇ ಶೌಚಾಲಯವಿತ್ತು. ಅದನ್ನು 50 ರಿಂದ 70 ಜನರು ಹಂಚಿಕೊಳ್ಳಬೇಕಾಗಿತ್ತು. ಮುಂದೆ ಕಬ್ಬಿಣದ ಕಂಬಿಗಳಿದ್ದವು ಹಾಗೂ ಅಲ್ಲಿದ್ದ ಇಂಡಿಯನ್ ಶೈಲಿಯ ಕಮೋಡ್‌ನಲ್ಲಿ ಕೆಲವೊಮ್ಮೆ ಹಲ್ಲಿಗಳಿರುತ್ತಿದ್ದವು" ಎಂದು ಆ ದಿನಗಳ ಭೀಕರತೆಯನ್ನು ವಿವರಿಸಿದ್ದಾರೆ.
Salman Khan: ಆಮೀರ್ ಖಾನ್ ಕಾಲೆಳೆದ ಸಲ್ಮಾನ್ ಖಾನ್; ಫುಲ್ ವೈರಲ್ ಆಗ್ತಿದೆ ಈ ವಿಡಿಯೊ
ಸಲ್ಮಾನ್ ಖಾನ್ ಮೇಲೆ ಇರುವ ಕೇಸ್ ಏನು?
ಕೃಷ್ಣಮೃಗ ಮತ್ತು ಚಿಂಕಾರ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ 4 ಬಾರಿ ಜೈಲು ಪಾಲಾಗಿದ್ದಾರೆ. 1998ರಲ್ಲಿ ಅವರು 3 ದಿನಗಳ ಕಾಲ ಬಂಧನದಲ್ಲಿದ್ದರು. 2006ರಲ್ಲಿ 6 ದಿನಗಳ ಕಾಲ ಜೈಲಿನಲ್ಲಿದ್ದರು. 2007ರಲ್ಲಿ 5 ದಿನಗಳ ಶಿಕ್ಷೆ ಅನುಭವಿಸಿದರು. 2018ರಲ್ಲಿ 2 ದಿನಗಳ ಕಾಲ ಕಸ್ಟಡಿಯಲ್ಲಿದ್ದರು.
ರಿತೇಶ್ ದೇಶ್‌ಮುಖ್ ಕಾಲೆಳೆದ ಸಲ್ಮಾನ್!
ಇದೇ ವೇಳೆ ನೆಟ್‌ಫ್ಲಿಕ್ಸ್‌ನಲ್ಲಿ 'ಲಾಕಪ್' ಶೋ ನಡೆಸಿಕೊಡುತ್ತಿರುವ ನಟ ರಿತೇಶ್ ದೇಶ್‌ಮುಖ್ ಅವರ ಕುರಿತು ತಮಾಷೆ ಮಾಡಿದ ಸಲ್ಮಾನ್, "ನಟ ರಿತೇಶ್ ದೇಶ್‌ಮುಖ್ ಅವರ ಕೆಲಸ ಈಗ ಅಪಾಯದಲ್ಲಿದೆ ಎಂದು ನನಗೆ ಅನಿಸುತ್ತಿದೆ" ಎಂದು ಕಾಲೆಳೆದಿದ್ದಾರೆ. ಸಲ್ಮಾನ್ ಅವರ ಈ ತಮಾಷೆಯ ಹೇಳಿಕೆ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಶೋನಲ್ಲಿ ಸಹೋದರ ಸೊಹೈಲ್ ಖಾನ್‌ಗೆ ಹಿನ್ನಡೆ
ಮತ್ತೊಂದೆಡೆ, 'ಅಲೈಯನ್ಸ್' ಶೋನಿಂದ ಸೊಹೈಲ್ ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ ಎಲಿಮಿನೇಟ್ ಆದ ನಂತರ ಸೊಹೈಲ್ ಆಟದಲ್ಲಿ ಮುನ್ನಡೆಯಲು ಹೆಣಗಾಡುತ್ತಿದ್ದಾರೆ. ಫೈನಲ್ ವಾರ ಸಮೀಪಿಸುತ್ತಿದ್ದು, ಇತರ ಸ್ಪರ್ಧಿಗಳು ಸೊಹೈಲ್ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.
ಈ ವಿಚಾರವಾಗಿ ಬೇಸರದಲ್ಲಿದ್ದ ಸೊಹೈಲ್‌ಗೆ ಸ್ಪರ್ಧಿ ಅರ್ಸ್ಲಾನ್ ಗೋನಿ ಪದೇ ಪದೇ ಆಟದತ್ತ ಗಮನ ಹರಿಸುವಂತೆ ಹೇಳಿದಾಗ ತಾಳ್ಮೆ ಕಳೆದುಕೊಂಡ ಸೊಹೈಲ್, "ಒಂದು ವಿಷಯವನ್ನು ಒಮ್ಮೆ ಹೇಳಿದರೆ ಅರ್ಥವಾಗುತ್ತದೆ, ಮರಕುಟಿಗದಂತೆ ಹೇಳಿದ್ದನ್ನೇ ಹೇಳಿ ಪೀಡಿಸಬೇಡ" ಎಂದು ಗರಂ ಆಗಿ ಶೋನಿಂದ ಹೊರಹೋಗಲು ಯತ್ನಿಸಿದ್ದರು. ನಂತರ ಆಯೋಜಕರು ಅವರನ್ನು ಸಮಾಧಾನಪಡಿಸಿ ವಾಪಸ್ ಕರೆತಂದಿದ್ದಾರೆ. ತಮ್ಮನ ಬೆಂಬಲಕ್ಕೆ ನಿಲ್ಲಲು ಸಲ್ಮಾನ್ ಖಾನ್ ಈ ಶೋಗೆ ಆಗಮಿಸಿದ್ದಾರೆ.