ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರೆಬೆಲ್‌ ಸ್ಟಾರ್‌ʼ ಅಂಬರೀಶ್‌ಗೆ ‘ಕರ್ನಾಟಕ ರತ್ನ’ ನೀಡುವಂತೆ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ; ಕನ್ನಡ ರಾಜ್ಯೋತ್ಸವಕ್ಕೆ ಘೋಷಿಸಲು ಆಗ್ರಹ

ʻರೆಬೆಲ್‌ ಸ್ಟಾರ್‌ʼ ಅಂಬರೀಶ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕೆಂದು ಸಚಿವ ರಾಮಲಿಂಗಾ ರೆಡ್ಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಾಡಿನ ಕಲೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ನೆಚ್ಚಿನ ನಾಯಕನಿಗೆ ರಾಜ್ಯೋತ್ಸವದಂದು ಮರಣೋತ್ತರವಾಗಿ ಅತ್ಯುನ್ನತ ಮನ್ನಣೆ ಕಲ್ಪಿಸಬೇಕೆಂಬುದು ಅಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದೆ.

ಕನ್ನಡ ಚಿತ್ರರಂಗದ ಧೀಮಂತ ನಟ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ ಡಾ. ಎಂ. ಎಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ನೀಡಿ ಗೌರವಿಸಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆದು, ಮುಂಬರುವ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸುವಂತೆ ಮನವಿ ಮಾಡಿದ್ದಾರೆ.

ಅಂಬರೀಶ್‌ ಅವರ ಕೊಡುಗೆ ಅಪಾರ

ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಹಂಚಿಕೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ, "ಬೆಳ್ಳಿ ತೆರೆಯ ಮೇಲಿನ 'ರೆಬೆಲ್ ಸ್ಟಾರ್', ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದ ಅಚ್ಚುಮೆಚ್ಚಿನ 'ಮಂಡ್ಯದ ಗಂಡು' ಡಾ. ಅಂಬರೀಶ್ ನಮ್ಮೆಲ್ಲರ ನೆನಪಿನಲ್ಲಿ ಸದಾ ಅಮರ. ಕನ್ನಡ ನಾಡು, ನುಡಿ, ಕಲೆ ಹಾಗೂ ರಾಜಕೀಯ ರಂಗಕ್ಕೆ ಅವರ ಕೊಡುಗೆ ಅಪಾರ. ಅಭಿಮಾನಿಗಳ ಆಶಯ ಹಾಗೂ ಅವರ ಜನಪ್ರಿಯತೆಯನ್ನು ಗುರುತಿಸಿ, ಮುಂಬರುವ ರಾಜ್ಯೋತ್ಸವದ ವೇಳೆಗೆ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅವರಿಗೆ ಸಲ್ಲಬೇಕಾದ ಈ ಗೌರವ ಪ್ರತಿಯೊಬ್ಬ ಕನ್ನಡಿಗನ ಗೌರವವಾಗಿದೆ" ಎಂದು ತಿಳಿಸಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ ಹಂಚಿಕೊಂಡಿರುವ ಪತ್ರದಲ್ಲಿ, "ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ, ಜನಪ್ರಿಯ ನಟ ಹಾಗೂ ಮಾಜಿ ಕೇಂದ್ರ/ರಾಜ್ಯ ಸಚಿವರಾಗಿದ್ದ ದಿವಂಗತ ಶ್ರೀ ಎಂ. ಎಚ್. ಅಂಬರೀಶ್ (ಮಂಡ್ಯದ ಗಂಡು) ಅವರು ನಾಡಿನ ಕಲೆ, ಸಂಸ್ಕೃತಿ ಹಾಗೂ ರಾಜಕೀಯ ರಂಗಕ್ಕೆ ನೀಡಿದ ನಿಸ್ವಾರ್ಥ ಸೇವೆ ಅಪಾರವಾದದ್ದು. ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ 'ರೆಬೆಲ್ ಸ್ಟಾರ್' ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು."

Ambareesh Birthday: ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!

"ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ. ಅವರ ಕೊಡುಗೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕರ್ನಾಟಕ ರತ್ನ'ವನ್ನು (ಮರಣೋತ್ತರವಾಗಿ) ನೀಡಿ ಗೌರವಿಸುವುದು ಅತ್ಯಂತ ಸೂಕ್ತವಾಗಿದೆ ಎಂಬುದು ನನ್ನ ಹಾಗೂ ನಾಡಿನ ಸಮಸ್ತ ಜನತೆಯ ತೀವ್ರ ಆಶಯವಾಗಿದೆ."

"ಈ ವಿಷಯವಾಗಿ ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ. ಅಂಬರೀಶ್ ಅಭಿಮಾನಿಗಳ ಸಂಘದವರು ನನಗೆ ಸಲ್ಲಿಸಿರುವ ಮನವಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಆದ್ದರಿಂದ, ಮುಂಬರುವ ರಾಜ್ಯೋತ್ಸವ ಅಥವಾ ಸೂಕ್ತ ಸಂದರ್ಭದಲ್ಲಿ ಶ್ರೀ ಎಂ. ಎಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೋಷಿಸಿ ಗೌರವಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ" ಎಂದು ಉಲ್ಲೇಖಿಸಲಾಗಿದೆ.