ಮುಂಬೈನಲ್ಲಿರುವ ತಮ್ಮ ನಿವಾಸ 'ಜಲ್ಸಾ' ಮುಂದೆ ಅಭಿಮಾನಿಗಳನ್ನು ಭೇಟಿಯಾಗುವ ತಮ್ಮ ಎಂದಿನ ಸಂಪ್ರದಾಯವನ್ನು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಈ ಭಾನುವಾರವೂ ಮುಂದುವರಿಸಿದ್ದಾರೆ. ಆದರೆ ಈ ಬಾರಿ ಭದ್ರತಾ ಕಾರಣಗಳಿಂದಾಗಿ ಅವರು ಬುಲೆಟ್‌ಪ್ರೂಫ್ ಗಾಜಿನ (bulletproof glass cover) ರಕ್ಷಣೆಯ ಒಳಗಿನಿಂದ ಅಭಿಮಾನಿಗಳಿಗೆ ಕೈಬೀಸಿ ಶುಭಾಶಯ ತಿಳಿಸಿದ್ದಾರೆ.
ಕಳೆದ ವಾರ ಅಮಿತಾಭ್ ಬಚ್ಚನ್ ಅವರ ನಿವಾಸ ಜಲ್ಸಾಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ ಅಭಿಮಾನಿಗಳನ್ನು ಭೇಟಿಯಾಗುವಾಗ ವಿಶೇಷ ಗಾಜಿನ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಅಮಿತಾಭ್ ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡ ತಂದೆಯ ಪಕ್ಕದಲ್ಲೇ ನಿಂತು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು. ಭದ್ರತಾ ಸಿಬ್ಬಂದಿಯೂ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿದ್ದರು.
ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆಯಿಂದ ದೊಡ್ಮನೆವರೆಗಿನ ಜರ್ನಿ ಮುಕ್ತಾಯ; ಕುಮಾರಿ ಔಟ್!
ಪ್ರತಿವಾರ ಭಾನುವಾರ ಅಮಿತಾಭ್ ಬಚ್ಚನ್ ತಮ್ಮ ಮನೆಯ ಹೊರಗೆ ನೆರೆದಿರುವ ಅಭಿಮಾನಿಗಳನ್ನು ಭೇಟಿಯಾಗಿ ಕೈಬೀಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾಮಾನ್ಯವಾಗಿ ಅವರು ಮನೆಯ ಹೊರಗೆ ಬಂದು ಅಭಿಮಾನಿಗಳಿಗೆ ಶುಭಾಶಯ ತಿಳಿಸುತ್ತಾರೆ. ಆದರೆ ಈ ಬಾರಿ ಸುರಕ್ಷತೆಯ ದೃಷ್ಟಿಯಿಂದ ಗಾಜಿನ ಒಳಗಿನಿಂದಲೇ ಅಭಿಮಾನಿಗಳಿಗೆ ನಮಸ್ಕರಿಸಿ ಕೈಬೀಸಿದ್ದಾರೆ. ಈ ಭೇಟಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬುಲೆಟ್‌ಪ್ರೂಫ್ ಗಾಜಿನ ವ್ಯವಸ್ಥೆ ಎಲ್ಲರ ಗಮನ ಸೆಳೆದಿದೆ.
ಇತ್ತೀಚೆಗೆ ಮುಂಬೈ ಪೊಲೀಸರಿಗೆ ಅಮಿತಾಭ್ ಅವರ ನಿವಾಸವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿತ್ತು. ಈ ಇ-ಮೇಲ್ ಅನ್ನು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಶಾಲೆಯೊಂದಕ್ಕೆ ಕಳುಹಿಸಲಾಗಿತ್ತು ಎಂದು ವರದಿಯಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಜಲ್ಸಾ ಮನೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದರ ಜೊತೆಗೆ ನಟ ಟೈಗರ್ ಶ್ರಾಫ್ ಮೇಲೆ ಇತ್ತೀಚೆಗೆ ನಡೆದ ದಾಳಿಯೂ ಚಿತ್ರರಂಗದ ಗಣ್ಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿಸಿದೆ.
ಇಷ್ಟೆಲ್ಲಾ ಭದ್ರತಾ ವ್ಯವಸ್ಥೆಗಳ ನಡುವೆಯೂ ಅಮಿತಾಭ್ ಬಚ್ಚನ್ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸದ್ಯ ಅವರು 'ಕೌನ್ ಬನೇಗಾ ಕರೋಡ್‌ಪತಿ 18' ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. 2024ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ ತಮಿಳು ಸಿನಿಮಾ 'ವೆಟ್ಟೈಯನ್'ನಲ್ಲಿ ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Bigg Boss Kannada 13: ಮಾತಿಗೆ ಮಾತು ಬೆಳೆದು ಕೂಗಾಡಿಕೊಂಡ ಆಸಿಯಾ-ಗಾನವಿ!
ಅಭಿಮಾನಿಗಳೊಂದಿಗೆ ಭಾನುವಾರ ಭೇಟಿಯಾಗುವ ಅಮಿತಾಭ್ ಅವರ ಸಂಪ್ರದಾಯ ಈ ವಾರವೂ ಮುಂದುವರಿದಿದೆ. ಆದರೆ ಈ ಬಾರಿ ಅಭಿಮಾನಿಗಳ ಭೇಟಿಗೆ ಭದ್ರತೆಯ ಹೆಚ್ಚುವರಿ ಕವಚ ಸೇರಿಕೊಂಡಿದೆ.