ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ವೀಕ್ಷಕರ ಮನಗೆದ್ದಿರುವ ಮತ್ತೊಂದು ಜೋಡಿ ಇದೀಗ ನಿಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಮಲ್ಲಿ ಮತ್ತು ಜೈದೇವ್ (Jaidev) ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಟಿ ರಾಧಾ ಭಗವತಿ (Radha Bhagavati) ಹಾಗೂ ನಟ ರಾಣವ್ ಗೌಡ ಇದೀಗ ಮದುವೆಯಾಗುತ್ತಿದ್ದಾರೆ. ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರಿಬ್ಬರು ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.
ಅದ್ಧೂರಿಯಾಗಿ ನೆರವೇರಿದ ಆರತಕ್ಷತೆ
ರಾಧಾ ಭಗವತಿ ಮತ್ತು ರಾಣವ್ ಗೌಡ ಅವರ ವಿವಾಹ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ನವೆಂಬರ್ 25ರಂದು ಬೆಂಗಳೂರಿನಲ್ಲಿ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ. ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಹಾಗೂ ಕಿರುತೆರೆಯ ಆಪ್ತರು ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಈಗೇನ್ ಮಾಡುತ್ತೆ ಗುಳ್ಳೆನರಿ? ಕಿರಣ್ ಕೊಟ್ಟ ಚಮಕ್ಗೆ ಯಶಸ್ ವಿಲ ವಿಲ!
ನವೆಂಬರ್ 26ರಂದು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಬೆಳಗ್ಗೆ 8.45ರಿಂದ 9.45ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಸೇರಿದಂತೆ ಮದುವೆಯ ವಿಧಿವಿಧಾನಗಳು ನೆರವೇರಲಿವೆ.
ಕಷ್ಟದ ಹಾದಿಯಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡ ರಾಣವ್ ಗೌಡ
ರಾಣವ್ ಗೌಡ ಅವರ ಸಿನಿಮಾ ಮತ್ತು ಕಿರುತೆರೆ ಪಯಣ ಅಷ್ಟು ಸುಲಭವಾಗಿರಲಿಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಅವರು, ಹಂತ ಹಂತವಾಗಿ ನಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಮನೆ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ ರಾಣವ್, ಆರಂಭದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಬಳಿಕ ‘ಶ್ರೀಕಂಠ’, ‘ಉಪೇಂದ್ರ ಮತ್ತೆ ಬಾ’, ‘ಡ್ಯಾಡ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.
‘ಜೀವನದಿ’, ‘ರಾಜಕುಮಾರಿ’, ‘ಗಟ್ಟಿಮೇಳ’ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ವಿಶೇಷವಾಗಿ ನೆಗೆಟಿವ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಆದರೆ, ಇವರ ನಟನಾ ಬದುಕಿಗೆ ದೊಡ್ಡ ತಿರುವು ನೀಡಿದ್ದು ಜೀ ಕನ್ನಡದ ‘ಅಮೃತಧಾರೆ’ ಧಾರಾವಾಹಿ. ಇದರಲ್ಲಿ ಜೈದೇವ್ ಅಲಿಯಾಸ್ ಜೆಡಿ ಪಾತ್ರ ನಿರ್ವಹಿಸುವ ಮೂಲಕ ಮನೆಮಾತಾದರು.
ಇಷ್ಟೇ ಅಲ್ಲದೆ, ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾದ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲಿ ನಾಯಕನಾಗಿಯೂ ನಟಿಸುವ ಅವಕಾಶ ರಾಣವ್ ಅವರಿಗೆ ಸಿಕ್ಕಿತ್ತು.
ರಾಧಾ ಭಗವತಿ ಬಣ್ಣದ ಲೋಕದ ಪಯಣ
ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ರಾಧಾ ಭಗವತಿ ಅವರಿಗೆ ಕಿರುತೆರೆಯಲ್ಲಿ ಮೊದಲ ಗುರುತನ್ನು ತಂದುಕೊಟ್ಟಿದ್ದು ‘ರಾಮಾಚಾರಿ’ ಧಾರಾವಾಹಿ. ಇದರಲ್ಲಿ ನಾಯಕನ ತಂಗಿ ಶ್ರುತಿ ಪಾತ್ರದಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು.
ನಂತರ ಜೀ ಕನ್ನಡದ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿತು. ಈ ಪಾತ್ರ ರಾಧಾ ಅವರ ನಟನಾ ಬದುಕಿನಲ್ಲಿ ಮಹತ್ವದ ತಿರುವಾಯಿತು. ಮಲ್ಲಿಯಾಗಿ ಅವರು ತೋರಿದ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಆ ಬಳಿಕ ನಾಯಕಿಯಾಗಿ ನಟಿಸುವ ಅವಕಾಶವೂ ಒಲಿದುಬಂತು. ಕಲರ್ಸ್ ಕನ್ನಡ ವಾಹಿನಿಯ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯಲ್ಲಿ ನಾಯಕಿ ಭಾರ್ಗವಿ ಪಾತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಕಿರುತೆರೆಯ ಜೊತೆಗೆ ಸಿನಿಮಾಗಳಲ್ಲಿಯೂ ರಾಧಾ ಅಭಿನಯಿಸಿದ್ದಾರೆ.
ಇದನ್ನೂ ಓದಿ: Sai Pallavi: ಮತ್ತೊಮ್ಮೆ ಶಾರ್ಟ್ ಹೇರ್ ಲುಕ್ನಲ್ಲಿ ಮಿಂಚಿದ ಸಾಯಿ ಪಲ್ಲವಿ!
ಮಲ್ಲಿ - ಜೈದೇವ್ ಸ್ನೇಹ ಪ್ರೀತಿಯಾಗಿ ಬದಲಾಯಿತೇ?
‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಗಳನ್ನು ನಿರ್ವಹಿಸುವಾಗ ರಾಧಾ ಭಗವತಿ ಹಾಗೂ ರಾಣವ್ ಗೌಡ ನಡುವೆ ಆತ್ಮೀಯತೆ ಬೆಳೆದಿತ್ತು. ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಗಾಢವಾಯಿತು. ರಾಣವ್ ಅವರ ಒಳ್ಳೆಯ ಗುಣಗಳನ್ನು ಮೆಚ್ಚಿದ ರಾಧಾ ಅವರೇ ಮೊದಲು ಪ್ರೀತಿಯನ್ನು ವ್ಯಕ್ತಪಡಿಸಿದ್ದರಂತೆ.ನಂತರ ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಜೀವನದಲ್ಲಿ ಜೊತೆಯಾಗಿ ಸಾಗುವ ನಿರ್ಧಾರ ಕೈಗೊಂಡಿದ್ದಾರೆ. ಇದೀಗ ಈ ಪ್ರೀತಿ ಮದುವೆಯ ರೂಪ ಪಡೆದುಕೊಳ್ಳುತ್ತಿರುವುದು ವಿಶೇಷ.