‘ಮೂಗುತಿ ಮಲ್ಲಿ’ಯಂತಹ ಜನಪ್ರಿಯ ಮೆಗಾ ಸೀರಿಯಲ್ ನೀಡಿದ ಹೆಮ್ಮೆಯ ಸನ್ ಉದಯ ಟಿವಿ, ಇದೀಗ ಮಧ್ಯಮ ವರ್ಗದ ಪ್ರತಿಯೊಬ್ಬರ ಮನೆ ಮನದ ಕಥೆ ಒಳಗೊಂಡಿರುವ ಮತ್ತೊಂದು ಹೊಚ್ಚ ಹೊಸ ದೈನಿಕ ಧಾರಾವಾಹಿಯನ್ನು ಹೊತ್ತು ತಂದಿದೆ. ‘ಮಹಾಲಕ್ಷ್ಮೀ ಮದುವೆ’ ಹೆಸರಿನ ಈ ಬಹುನಿರೀಕ್ಷಿತ ಸೀರಿಯಲ್ ಇದೇ ಜೂನ್ 1 ರಿಂದ ಪ್ರಸಾರವಾಗಲು ಸಜ್ಜಾಗಿದೆ.
ಮಧ್ಯಮ ವರ್ಗದ ವಿಭಿನ್ನ ಪ್ರೇಮಕಥೆ
ಇದು ಮಧ್ಯಮ ವರ್ಗದ ಹಿನ್ನೆಲೆಯುಳ್ಳ ಶ್ರೀಹರಿ ಹಾಗೂ ಮಹಾಲಕ್ಷ್ಮೀ ಎಂಬ ಇಬ್ಬರು ವ್ಯಕ್ತಿಗಳ ಸುತ್ತ ನಡೆಯುವ ಕಥೆ. ಬ್ಯಾಂಕ್ ಉದ್ಯೋಗಿಯಾಗಿರುವ ಮಗ ಶ್ರೀಹರಿಗೆ ಭರಪೂರ ವರದಕ್ಷಿಣೆ ಮತ್ತು ಒಡವೆ ತರುವಂತಹ ಶ್ರೀಮಂತ ಹುಡುಗಿ ಬರಬೇಕೆಂಬುದು ಆತನ ತಾಯಿಯ ಆಸೆ. ಇದಕ್ಕೆ ಅಕ್ಕನ ಬೆಂಬಲವೂ ಇರುತ್ತದೆ. ಆದರೆ, ನಾಯಕಿ ಮಹಾಲಕ್ಷ್ಮೀ ಮಾತ್ರ ಅತ್ಯಂತ ಗಟ್ಟಿಗಿತ್ತಿ.
ತಂದೆಯ ಆಸರೆ ಇಲ್ಲದಿದ್ದರೂ ಇಡೀ ಕುಟುಂಬದ ಜವಾಬ್ದಾರಿಯನ್ನು ತಾನೇ ಹೆಗಲಿಗೆ ಹೊತ್ತುಕೊಂಡು, ತಂಗಿಯರ ಓದು ಹಾಗೂ ತಾಯಿಯ ಆಸರೆಗಾಗಿ ಶ್ರಮಿಸುವ ಸ್ವಾಭಿಮಾನಿ ಹೆಣ್ಣುಮಗಳು. ಮದುವೆಯಾದ ಮೇಲೂ ತನ್ನ ಸಂಬಳವನ್ನು ತಾಯಿಗೇ ನೀಡುವುದಾಗಿ ಷರತ್ತು ವಿಧಿಸುವ ಮಹಾಲಕ್ಷ್ಮೀ ಹಾಗೂ ಶ್ರೀಹರಿ ಅವರ ವಿವಾಹ ಕೇವಲ ಒಂದೇ ಒಂದು ಸುಳ್ಳಿನ ಹಿನ್ನೆಲೆಯಲ್ಲಿ ಹೇಗೆ ನಡೆಯುತ್ತದೆ? ಆ ನಂತರ ಅವರ ಜೀವನ ಯಾವ ತಿರುವು ಪಡೆದುಕೊಳ್ಳುತ್ತದೆ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾವಸ್ತು.
‘ಮಹಾಲಕ್ಷ್ಮೀ’ ಪಾತ್ರದಲ್ಲಿ ಮಿಂಚಲಿದ್ದಾರೆ ಅಮೂಲ್ಯ ಗೌಡ
ಕಿರುತೆರೆಯ ಖ್ಯಾತ ನಟಿ ಅಮೂಲ್ಯ ಗೌಡ ಅವರು ಇಲ್ಲಿ ‘ಮಹಾಲಕ್ಷ್ಮೀ’ ಪಾತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದರೆ, ನಾಯಕನಾಗಿ ಭರತ್ ಶಿವಣ್ಣ ಹೊಸದಾಗಿ ಕಿರುತೆರೆಗೆ ಭರವಸೆಯ ಹೆಜ್ಜೆ ಇಡುತ್ತಿದ್ದಾರೆ. ಉಳಿದಂತೆ ಶಿವಾಜಿ ರಾವ್ ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ʻಬಿಗ್ ಬಾಸ್ʼ ವಿನ್ನರ್ ಮಂಜು ಪಾವಗಡ, ಮಾನಸ, ಮೇಘಶ್ರೀ, ಸ್ನೇಹಾ ಭಟ್, ಪ್ರತೀಕ್ಷಾ, ಧನುಷ್ ಗೌಡ ಹಾಗೂ ಹರಿಪ್ರಿಯಾ ಸೇರಿದಂತೆ ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯ ದಂಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ.
Mooguthi Malli Serial: ‘ಮೂಗುತಿ ಮಲ್ಲಿ’ಗೆ ಚಂದನ್ ಗೌಡ ನಾಯಕ; ಸೀರಿಯಲ್ ಯಾವಾಗಿನಿಂದ ಶುರು?
ಲೈಮ್‌ಲೈಟ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ಈ ಧಾರಾವಾಹಿಯನ್ನು ಅತ್ಯಂತ ಪ್ರೀಮಿಯಂ ಆಗಿ ನಿರ್ಮಿಸುತ್ತಿದ್ದಾರೆ. ಪಾಪಾ ಔಟ್‌ಡೋರ್ ಯೂನಿಟ್‌ನ ಗಾಯತ್ರಿ ಸೆಲ್ವಂ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರರಂಗದ ಅನುಭವಿ ನಿರ್ದೇಶಕ ಶಿವು ಪೂಜೇನಹಳ್ಳಿ (ಅಗ್ರಹಾರ) ಈ ಸೀರಿಯಲ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಯೋಗೇಶ್ ಗೌಡ ಅವರ ಛಾಯಾಗ್ರಹಣ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಗೆ ಇದೆ.
ಜೂನ್ 1 ರಿಂದ ಸಂಜೆ 6.30ಕ್ಕೆ ಪ್ರಸಾರ
ಮಧ್ಯಮ ವರ್ಗದ ಭಾವನೆಗಳ ಮಹಾಪೂರ ಹರಿಸಲಿರುವ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯು ಜೂನ್ 1 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.