Chaitra Vasudevan: ಬಹುಕಾಲದ ಗೆಳೆಯನ ಕೈ ಹಿಡಿದ ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್... ಮದ್ವೆ ವಿಡಿಯೊ ಫುಲ್ ವೈರಲ್
ಸ್ಯಾಂಡಲ್ ವುಡ್ ಮತ್ತೊಂದು ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಖ್ಯಾತ ನಿರೂಪಕಿ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ವಾಸುದೇವನ್ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಜಗದೀಪ್ ಅವರನ್ನು ವರಿಸಿದ್ದಾರೆ. ಈ ಮದುವೆಗೆ ಸಂಬಂಧಿಸಿದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ವಾಸುದೇವನ್.

ಬೆಂಗಳೂರು: ಖ್ಯಾತ ನಿರೂಪಕಿ (Anchor) ಚೈತ್ರಾ ವಾಸುದೇವನ್ (Chaitra Vasudevan) ಅದ್ದೂರಿ ವಿವಾಹ ಸಮಾರಂಭದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇಲ್ಲಿನ ಅರಮನೆ ಮೈದಾನದಲ್ಲಿ (Palace Ground) ನಡೆದ ವಿವಾಹ ಸಮಾರಂಭದಲ್ಲಿ ಚೈತ್ರಾ ಅವರು, ಜಗದೀಪ್ ಎಲ್. ಜೊತೆ ಹಸೆಮಣೆ ಏರಿದ್ದಾರೆ. ಈ ಸಂದರ್ಭದಲ್ಲಿ ನಿರೂಪಕಿ ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಮದುವೆಯ ಸೀರೆಯಲ್ಲಿ ಮದುಮಗಳು ಮಿಂಚಿದ್ದು, ಅದರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿವಾಹ ಸಮಾರಂಭಕ್ಕೆ ಕಿರುತೆರೆ, ಹಿರಿತೆರೆಯ ಸೆಲೆಬ್ರಿಟಿಗಳು ಆಗಮಿಸಿ ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ. ಇನ್ನು, ಕೆಲವು ದಿನಗಳ ಹಿಂದೆ ಚೈತ್ರಾ, ಜಗದೀಪ್ ಜೊತೆ ಪ್ಯಾರಿಸ್ ನಲ್ಲಿ (Paris) ಪ್ರೀವೆಡ್ಡಿಂಗ್ ಶೂಟ್ (Pre Wedding Shoot) ಮಾಡಿಸಿಕೊಂಡಿದ್ದರು. ಈ ವಿಡಿಯೋವನ್ನು ಚೈತ್ರಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ನಾನು ನಿಮ್ಮೊಂದಿಗೆ ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕಳಾದ್ದು, ನಾನು ಈ ವರ್ಷ ಮಾರ್ಚ್ ತಿಂಗಳಿನಲ್ಲಿ ನನ್ನ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಈ ಸುಂದರ ಪಯಾಣ ಮತ್ತು ನನ್ನ ಜೀವನದ ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವನ್ನು ಕೋರುತ್ತೇನೆ ಎಂದು ತಮ್ಮ ಪ್ರಿವೆಡ್ಡಿಂಗ್ ವಿಡಿಯೋ ಪೋಸ್ಟ್ ಜೊತೆ ಚೈತ್ರಾ ಬರೆದುಕೊಂಡಿದ್ದರು.
ಇದೀಗ ತನ್ನ ಮದುವೆಯ ಬಳಿಕ ಮಾಧ್ಯಮಗಳ ಜೊತೆ ತನ್ನ ಫ್ಯೂಚರ್ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಚೈತ್ರಾ, ನಾವಿಬ್ಬರು ಹೇಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವೋ, ಅದೇ ರೀತಿ ಬೇರೆಯವರಿಗೂ ಸಪೋರ್ಟ್ ಮಾಡಬೇಕು ಎನ್ನುವುದು ನಮ್ಮ ಆಸೆ. ಅದಕ್ಕಾಗಿಯೇ ನಾನೊಂದು ಅಕಾಡೆಮಿ ಶುರು ಮಾಡಬೇಕೆಂದಿದ್ದೇನೆ. ಅದಕ್ಕೆ ನನ್ನ ಪತಿ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ ಎಂದು ಆಕೆ ಹೇಳಿದ್ದಾರೆ.
ಅಂದ ಹಾಗೆ, ಚೈತ್ರಾ ಮತ್ತು ಜಗದೀಪ್ ಅವರ ಮೊದಲ ಭೇಟಿ, ಪ್ರೀತಿ, ಪ್ರೇಮ, ಮದುವೆಯ ಬಗ್ಗೆ ಈ ಹಿಂದೆ ಚೈತ್ರಾ ಮಾತನಾಡಿದ್ದರು. ಪ್ಯಾರೀಸ್ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ನಲ್ಲಿ ಮಾಡಿಕೊಂಡಿದ್ದ ಬಗ್ಗೆಯೂ ಮಾತನಾಡಿದ್ದ ಚೈತ್ರಾ, ಪ್ಯಾರೀಸ್ ಮತ್ತು ಫ್ರಾನ್ಸ್ಗೆ ಹೋಗುವ ಪ್ಲ್ಯಾನ್ ಮೊದಲೇ ಇತ್ತು. ಆ ಬಳಿಕ ಮದುವೆ ಫಿಕ್ಸ್ ಆಯಿತು. ಆದ್ದರಿಂದ ಜಗದೀಪ್ ಅವರನ್ನೂ ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡಿರುವುದಾಗಿ ತಿಳಿಸಿದರು. ಮತ್ತು ಇದು ಅಚಾನಕ್ ಆಗಿದ್ದ ಒಂದು ಘಟನೆಯಷ್ಟೇ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: Actor Darshan: ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟ ಪತ್ನಿ ವಿಜಯಲಕ್ಷ್ಮಿ; ಹಳೇ ಪಟಾಲಂಗೆ ಗೇಟ್ ಪಾಸ್!
ಇದೇ ವೇಳೆ, ತಮ್ಮ ಮತ್ತು ಜಗದೀಪ್ ನಡುವೆ ಪರಿಚಯ ಉಂಟಾದ ಬಗ್ಗೆ ಮಾತನಾಡಿದ್ದ ಚೈತ್ರಾ, ನಾನು ಈವೆಂಟ್ ನಡೆಸುತ್ತಿದ್ದೇನೆ. ಜಗದೀಪ್ ಅವರ ಸ್ನೇಹಿತರ ಮಗನ ಹುಟ್ಟುಹಬ್ಬಕ್ಕೆ ಎಲ್ಲಾ ಕಡೆ ಸರ್ಚ್ ಮಾಡಿ, ನನ್ನ ಈವೆಂಟ್ ಕಂಪೆನಿಗೆ ಬಂದರು. ಅವರ ಸ್ನೇಹಿತರಿಗೆ ಮಗುವನ್ನು ನೋಡಿಕೊಳ್ಳಬೇಕಾಗಿದ್ದರಿಂದ ಜಗದೀಪ್ ಅವರೇ ಅದರ ಉಸ್ತುವಾರಿ ವಹಿಸಿಕೊಂಡಿದ್ದರಿಂದ, ನನ್ನ ಮತ್ತು ಅವರ ನಡುವೆ ಮಾತುಕತೆ ನಡೆಯಿತು. ಕೊನೆಗೆ ಅವರು ಇದೇ ವಿಷಯವಾಗಿ ನಮ್ಮ ಕಂಪೆನಿಗೆ ಬಂದರು. ಹೀಗೆ ಪರಿಚಯ ಶುರುವಾಯಿತು.
ಒಂದೇ ಜಿಮ್, ಒಂದೇ ಕಾಲೇಜು ಈ ಎಲ್ಲಾ ಮಾತುಕತೆಗಳ ನಡುವೆ ಅವರಿಗೆ ನಾನು ಇಷ್ಟವಾದೆ. ನೇರವಾಗಿಯೇ ಅವರು ಈ ವಿಷಯವನ್ನು ನನಗೆ ಹೇಳಿದರು. ಮದುವೆಯ ಬಗ್ಗೆ ಪ್ರಸ್ತಾಪಿಸಿದರು ಎಂದು ಚೈತ್ರಾ ಹೇಳಿದ್ದರು. ನಾನು ಅಷ್ಟು ಬೇಗ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಸ್ವಲ್ಪ ಸಮಯ ಬೇಕು ಎಂದೆ. ಅವರು ನೇರವಾಗಿ ನನ್ನ ಅಪ್ಪ-ಅಮ್ಮನ ಬಳಿ ಮಾತನಾಡಿದರು. ಅವರ ಗುಣ ನನ್ನ ಅಪ್ಪ-ಅಮ್ಮನಿಗೆ ಇಷ್ಟವಾಯಿತು. ಅವರಿಗೆ ಅಪ್ಪ ಇಲ್ಲ. ಜೀವನದಲ್ಲಿ ತುಂಬಾ ಪ್ರಯತ್ನಪಟ್ಟು ಮೇಲೆ ಬಂದವರು. ಅವರನ್ನು ನೋಡಿ ನನಗೂ ಖುಷಿಯಾಯಿತು. ಇಬ್ಬರ ಮೈಂಡ್ ಸೆಟ್, ಗುರಿ ಎಲ್ಲವೂ ಒಂದೇ ರೀತಿ ಎನ್ನಿಸಿತು. ಅವರು ಫ್ಯಾಮಿಲಿ ಮ್ಯಾನ್ ಎಂದು ನನಗೆ ಅನ್ನಿಸಿತು ಹಾಗಾಗಿ ನನಗೂ ಅವರು ಇಷ್ಟವಾಗಿ ಒಪ್ಪಿಕೊಂಡೆ ಎಂದು ಚೈತ್ರಾ ತಮ್ಮಿಬ್ಬರ ಭೇಟಿಯ ಬಗ್ಗೆ ಹೇಳಿಕೊಂಡಿದ್ದರು.
ಅಂದಹಾಗೆ, ಚೈತ್ರಾ ವಾಸುದೇವನ್ ಅವರಿಗೆ ಇದು ಎರಡನೇ ಮದುವೆ. ತಮ್ಮ ಪದವಿ ಮುಗಿಯುತ್ತಿದ್ದಂತೆ ಚೈತ್ರಾ ಅವರು ಸತ್ಯ ನಾಯ್ಡು ಎಂಬುವವರ ಕೈ ಹಿಡಿದಿದ್ದರು. 2017ರಲ್ಲಿ ಈ ಮದುವೆ ನಡೆದಿತ್ತು. ಆದ್ರೆ ಮದುವೆಯಾಗಿ 5 ವರ್ಷಗಳ ನಂತ್ರ ಈ ದಂಪತಿ ವಿಚ್ಛೇದನ ಪಡೆದುಕೊಂಡಿದ್ದರು.
2023ರಲ್ಲಿ ಚೈತ್ರಾ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದರು. ಅಲ್ಲದೆ ಈ ವಿಚ್ಛೇದನಕ್ಕೆ ಏನು ಕಾರಣ ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತನ್ನ ಸಂಸಾರ ಉಳಿಸಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದೆ ಎಂದಿದ್ದ ಚೈತ್ರಾ, ಧೈರ್ಯ ಕಳೆದುಕೊಂಡಿರಲಿಲ್ಲ. ಚೈತ್ರಾ ನಿರೂಪಕಿ ಮಾತ್ರವಲ್ಲ ಉದ್ಯಮಿಯೂ ಹೌದು. ನಾನಾ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಚೈತ್ರಾ, ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಮತ್ತು ಸ್ಟಾರ್ ಕನ್ನಡ ಮೊದಲಾದ ಚಾನೆಲ್ ಗಳಲ್ಲಿ ನಿರೂಪಣೆ ಮಾಡಿದ್ದಾರೆ. ಅಲ್ಲದೆ ಬಿಗ್ ಬಾಸ್ 7 ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಚೈತ್ರಾ, ಯೂ-ಟ್ಯೂಬ್ ನಲ್ಲಿ ಹಲವಾರು ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ.