ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ, ʻಪವರ್ ಸ್ಟಾರ್ʼ ಪವನ್ ಕಲ್ಯಾಣ್ ನಟನೆಯ ʻಉಸ್ತಾದ್ ಭಗತ್ ಸಿಂಗ್ʼ ಸಿನಿಮಾವು ಈಚೆಗಷ್ಟೇ ತೆರೆಕಂಡಿದೆ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಕ್ರೇಜ್ ಸೃಷ್ಟಿಸುವಲ್ಲಿ ವಿಫಲವಾಗಿದೆ. ಅದರಲ್ಲೂ ʻಧುರಂಧರ್ 2ʼ ಎದುರು ರಿಲೀಸ್ ಮಾಡಿ, ದೊಡ್ಡ ಮಿಸ್ಟೇಕ್ ಮಾಡಿಕೊಂಡಿತಾ ʻಉಸ್ತಾದ್ ಭಗತ್ ಸಿಂಗ್ʼ ಟೀಮ್ ಅನ್ನೋ ಮಾತುಗಳು ಕೇಳಿಬಂದಿವೆ. ಈ ಮಧ್ಯೆ ಪವನ್ ಕಲ್ಯಾಣ್ ಮುಂದಿನ ಸಿನಿಮಾಗಳ ಕುರಿತಾಗಿ ಒಂದಷ್ಟು ಊಹಾಪೋಹಗಳು ಹಬ್ಬಿವೆ. ಆ ಕುರಿತಂತೆ ಸದ್ಯ ಒಂದಷ್ಟು ಸ್ಪಷ್ಟನೆ ಸಿಕ್ಕಿದೆ.
ಏನದು ಊಹಾಪೋಹ?
ಉಸ್ತಾದ್ ಭಗತ್ ಸಿಂಗ್ ಬಳಿಕ ಪವನ್ ಕಲ್ಯಾಣ್ ಯಾರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬುದು ದೊಡ್ಡ ಚರ್ಚೆಯ ವಿಷಯವಾಗಿದೆ. ನಿರ್ದೇಶಕ ಸುರೇಂದರ್ ರೆಡ್ಡಿ ಅವರು ಪವನ್ ಜೊತೆಗೆ ಹೊಸ ಸಿನಿಮಾ ಮಾಡಲಿದ್ದಾರೆ, ಕಥೆಯ ಫೈನಲ್ ಆಗಿದೆ. ಪ್ರಿ-ಪ್ರೊಡಕ್ಷನ್ಸ್ ವರ್ಕ್ ಕೂಡ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಅತ್ತ ಕೊರಟಾಲ ಶಿವ ಕೂಡ ಪವನ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಇದ್ಯಾವುದು ನಿಜವಲ್ಲ. ಸದ್ಯ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಪವನ್, ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆಯುವ ಆಲೋಚನೆಯಲ್ಲಿ ಇದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಪವನ್ ಕಲ್ಯಾಣ್ ಟೀಮ್ ನೀಡಿದ ಸ್ಪಷ್ಟನೆ ಏನು?
"ಸದ್ಯದ ಮಾಹಿತಿಯ ಪ್ರಕಾರ, ಪವನ್ ಕಲ್ಯಾಣ್ ಅವರು ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ. ಸದ್ಯ ನಡೆಯುತ್ತಿರುವ ಪ್ರಾಜೆಕ್ಟ್‌ಗಳ ಕುರಿತಾದ ಊಹಾಪೋಹಗಳು ನಿಖರವಾಗಿಲ್ಲ. ಸದ್ಯಕ್ಕೆ ಹೊಸ ಚಿತ್ರಗಳನ್ನು ಆರಂಭಿಸುವ ಯಾವುದೇ ತಕ್ಷಣದ ಯೋಜನೆಗಳಿಲ್ಲ. ಈ ಕುರಿತಾದ ಯಾವುದೇ ಬೆಳವಣಿಗೆಗಳಿದ್ದಲ್ಲಿ, ಅಧಿಕೃತ ಮೂಲಗಳ ಮೂಲಕವೇ ತಿಳಿಸಲಾಗುವುದು. ಇನ್ನು ʻಓಜಿ 2ʼ ಚಿತ್ರದ ಕುರಿತು ಯಾವುದೇ ಅಪ್‌ಡೇಟ್ ಇದ್ದರೂ, ಅದನ್ನು ಪವನ್ ಕಲ್ಯಾಣ್ ಅವರೇ ವೈಯಕ್ತಿಕವಾಗಿ ಸರಿಯಾದ ಸಮಯದಲ್ಲಿ ಹಂಚಿಕೊಳ್ಳಲಿದ್ದಾರೆ" ಎಂದು ಪವನ್ ಕಲ್ಯಾಣ್ ತಂಡ ಟ್ವೀಟ್ ಮಾಡಿದೆ.
ಪವನ್ ಕಲ್ಯಾಣ್ ತಂಡದ ಅಧಿಕೃತ ಟ್ವೀಟ್
ಅಲ್ಲಿಗೆ ಪವನ್ ಕಲ್ಯಾಣ್ ಸದ್ಯಕ್ಕೆ ಯಾವ ಸಿನಿಮಾದಲ್ಲೂ ನಟಿಸೋದಿಲ್ಲ ಎಂಬುದು ಖಾತ್ರಿಯಾಗಿದೆ. ಅಂದಹಾಗೆ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪವನ್ ಯಾವ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಕಳೆದ ವರ್ಷ ತೆರೆಕಂಡ ಹರಿಹರ ವೀರ ಮಲ್ಲು, ಓಜಿ ಹಾಗೂ ಈ ವರ್ಷ ಬಂದಿರುವ ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳು ತುಂಬಾ ಹಳೆಯ ಕಮಿಟ್ಮೆಂಟ್ ಆಗಿದ್ದವು. ಬಹಳ ಹಿಂದೆ ಶುರು ಮಾಡಿದ ಸಿನಿಮಾಗಳು ಈಗ ತೆರೆಗೆ ಬಂದಿದ್ದವು ಅಷ್ಟೇ. ಇದರ ಹೊರತಾಗಿ ಅಧಿಕೃತವಾಗಿ ಪವನ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ.