ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಭೋಗಿ’ ಸಿನಿಮಾದ ಪ್ರಚಾರಕ್ಕೆ ಅನುಪಮಾ ಪರಮೇಶ್ವರನ್ ಗೈರಾಗಿದ್ದೇಕೆ? ಮತ್ತೋರ್ವ ನಟಿಯ ಎಂಟ್ರಿಯೇ ಕಾರಣವೇ?

ಶರ್ವಾನಂದ್ ನಟನೆಯ ‘ಭೋಗಿ’ ಚಿತ್ರದ ಪ್ರಚಾರದಿಂದ ದೂರ ಉಳಿದಿದ್ದಕ್ಕೆ ನಟಿ ಅನುಪಮಾ ಪರಮೇಶ್ವರನ್ ಸ್ಪಷ್ಟನೆ ನೀಡಿದ್ದಾರೆ. ಡಿಂಪಲ್ ಹಯಾತಿ ಅಥವಾ ಚಿತ್ರತಂಡದೊಂದಿಗಿನ ಮನಸ್ತಾಪದ ವದಂತಿಗಳನ್ನು ತಳ್ಳಿಹಾಕಿರುವ ಅವರು, ಊಟಿಯಲ್ಲಿ ಬೇರೆ ಚಿತ್ರದ ಶೂಟಿಂಗ್‌ನಲ್ಲಿದ್ದ ಕಾರಣ ಪ್ರಚಾರಕ್ಕೆ ಹೋಗಲಿಲ್ಲ ಎಂದು ಅನುಪಮಾ ಹೇಳಿದ್ದಾರೆ.

ನಟ ಶರ್ವಾನಂದ್ ಅಭಿನಯದ ‘ಭೋಗಿ’ ಸಿನಿಮಾ ಇಂದು (ನ.27) ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಆದರೆ, ಬಿಡುಗಡೆಗೂ ಮುನ್ನ ನಡೆದ ಸಿನಿಮಾದ ಪ್ರಚಾರದಲ್ಲಿ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಟಾಲಿವುಡ್ ಅಂಗಳದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಟ್ರೇಲರ್ ಲಾಂಚ್ ಸಮಾರಂಭದಿಂದ ಹಿಡಿದು ಮಾಧ್ಯಮ ಸಂದರ್ಶನಗಳವರೆಗೆ ಎಲ್ಲೆಡೆ ಶರ್ವಾನಂದ್ ಜೊತೆಗೆ ಚಿತ್ರದ ಮತ್ತೋರ್ವ ನಾಯಕಿ ಡಿಂಪಲ್ ಹಯಾತಿ ಮಾತ್ರ ಕಾಣಿಸಿಕೊಂಡಿದ್ದರು.

ಅನುಪಮಾ ಅವರ ಈ ಗೈರುಹಾಜರಿಯನ್ನು ಕಂಡವರಿಗೆ, ಚಿತ್ರತಂಡದೊಂದಿಗೆ ಅನುಪಮಾಗೆ ಏನಾದರೂ ಭಿನ್ನಾಭಿಪ್ರಾಯ ಇರಬಹುದೇ ಎಂಬ ಅನುಮಾನ ಮೂಡಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಅನುಪಮಾ ಪರಮೇಶ್ವರನ್ ತೆರೆ ಎಳೆದಿದ್ದು, ಪ್ರಚಾರಕ್ಕೆ ಬರದಿರಲು ಇದ್ದ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

ಎಲ್ಲದಕ್ಕೂ ಡಿಂಪಲ್ ಹಯಾತಿ ಕಾರಣವೇ?

ಸಿನಿಮಾ ಸೆಟ್ಟೇರಿದ ದಿನದಿಂದಲೂ ‘ಭೋಗಿ’ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಮುಖ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದೇ ಪ್ರಚಾರ ಮಾಡಲಾಗಿತ್ತು. ಆದರೆ, ಪ್ರಚಾರದ ಅಖಾಡದಿಂದ ಅವರು ದೂರ ಉಳಿದಿದ್ದು ಅಭಿಮಾನಿಗಳು ಹಾಗೂ ಸಿನಿಪ್ರಿಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಚಿತ್ರಕಥೆಯಲ್ಲಿ ಆದ ಬದಲಾವಣೆಗಳಿಂದಾಗಿ ಡಿಂಪಲ್ ಹಯಾತಿ ಅವರ ಪಾತ್ರದ ಅವಧಿ ಹೆಚ್ಚಾಗಿದೆ, ಇದರಿಂದ ಅಸಮಾಧಾನಗೊಂಡಿರುವ ಅನುಪಮಾ ಪ್ರಚಾರದಿಂದ ದೂರ ಉಳಿದಿದ್ದಾರೆ, ಚಿತ್ರತಂಡ ಕೂಡ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಿಲ್ಲ ಎಂಬ ಬಗೆಬಗೆಯ ಗುಸುಗುಸು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. "ನಟಿ ಅನುಪಮಾ ಎಲ್ಲಿ?" ಎಂದು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದರು.

ʻಭೋಗಿʼ ಟೀಮ್‌ಗೆ ಥ್ಯಾಂಕ್ಸ್‌ ಹೇಳಿದ ಅನುಪಮಾ

ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿರುವ ಅನುಪಮಾ, ತಮ್ಮ ವೃತ್ತಿಪರ ಅನಿವಾರ್ಯತೆಯಿಂದಾಗಿಯೇ ಸಿನಿಮಾದ ಪ್ರಮೋಷನ್‌ಗೆ ಬರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ʻಭೋಗಿʼ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಹಲವು ಬಾರಿ ಬದಲಾಯಿಸಿತು. ಆ ಹೊಸ ದಿನಾಂಕಗಳಿಗೆ ತಕ್ಕಂತೆ ತಮ್ಮ ಕಾಲ್‌ಶೀಟ್‌ಗಳನ್ನು ಹೊಂದಿಸಿಕೊಳ್ಳಲು ತಾವು ಶಕ್ತಿಮೀರಿ ಪ್ರಯತ್ನಿಸಿದ್ದಾಗಿ ಅವರು ವಿವರಿಸಿದ್ದಾರೆ. ಆದರೆ, ತಾವು ಈ ಮೊದಲೇ ಒಪ್ಪಿಕೊಂಡಿದ್ದ ಮತ್ತೊಂದು ಪ್ರಾಜೆಕ್ಟ್‌ನ ಚಿತ್ರೀಕರಣದ ನಿಮಿತ್ತ ಊಟಿಗೆ ತೆರಳಬೇಕಾಗಿದ್ದರಿಂದ, ಅನಿವಾರ್ಯವಾಗಿ ‘ಭೋಗಿ’ ಪ್ರಚಾರ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಸಮಯದಲ್ಲಿ ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಂಪೂರ್ಣ ಸಹಕಾರ ನೀಡಿದ ‘ಭೋಗಿ’ ಚಿತ್ರತಂಡಕ್ಕೆ ಅನುಪಮಾ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಗಾಳಿಸುದ್ದಿಗಳಿಗೆ ಕೊನೆಗೂ ಫುಲ್‌ಸ್ಟಾಪ್

ತಾವು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿದ್ದರೂ, ತಮ್ಮ ಮನಸ್ಸು ಯಾವಾಗಲೂ ಚಿತ್ರತಂಡದೊಂದಿಗೇ ಇರುತ್ತದೆ ಎಂದು ಅನುಪಮಾ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಪ್ರೇಕ್ಷಕರೆಲ್ಲರೂ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ನೋಡಿ ಆನಂದಿಸುವ ಕ್ಷಣಕ್ಕಾಗಿ ತಾವು ಅತ್ಯಂತ ಕುತೂಹಲದಿಂದ ಕಾಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅನುಪಮಾ ಅವರ ಈ ಸ್ಪಷ್ಟನೆಯಿಂದಾಗಿ, ಚಿತ್ರತಂಡದೊಂದಿಗೆ ಮನಸ್ತಾಪವಿದೆ ಎಂಬ ಗಾಳಿಸುದ್ದಿಗಳಿಗೆ ಕೊನೆಗೂ ಫುಲ್‌ಸ್ಟಾಪ್ ಬಿದ್ದಿದೆ.