Ghaati Movie: ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ನಿರಾಸೆ; ʼಘಾಟಿʼ ಚಿತ್ರದ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ
Anushka Shetty: ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ನಟಿಸುತ್ತಿರುವ ತೆಲುಗು ಚಿತ್ರ ಘಾಟಿ ಈಗಾಗಲೇ ಕುತೂಹಲ ಕೆರಳಿಸಿದೆ. ಇತ್ತೀಚೆಗೆ ರಿಲೀಸ್ ಆದ ಟೀಸರ್‌ನಲ್ಲಿ ಅವರು ಹೊಸದೊಂದು ಅವತಾರದಲ್ಲಿ ಮಿಂಚಿರುವುದು ಕಂಡುಬಂದು ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಚಿತ್ರತಂಡ ರಿಲಸ್ ಡೇಟ್ ಮುಂದೂಡಿದೆ.

ʼಘಾಟಿʼ ಚಿತ್ರದ ಪೋಸ್ಟರ್.

ಹೈದರಾಬಾದ್: ದಕ್ಷಿಣ ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಅನುಷ್ಕಾ ಶೆಟ್ಟಿ (Anushka Shetty) ಕೂಡ ಒಬ್ಬರು. ಇವರು ನಾಯಕಿ ಪ್ರಧಾನ ಚಿತ್ರಗಳಿಗೂ ಸೈ, ಗ್ಲ್ಯಾಮರ್ ರೋಲ್‌ಗೆ ಜೈ. ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಅವರು ಕಾಲಿವುಡ್-ಟಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 20 ವರ್ಷ ಕಳೆದಿದ್ದು ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಚಿತ್ರಗಳನ್ನು ಅಳೆದೂ ತೂಗಿ ಒಪ್ಪಿಕೊಳ್ಳುತ್ತಿದೆ. ಹೀಗೆ ಅವರು ಬಹಳ ಇಷ್ಟಪಟ್ಟು ಒಪ್ಪಿದ ಸಿನಿಮಾದಲ್ಲಿ ತೆಲುಗಿನ 'ಘಾಟಿʼ (Ghaati Movie) ಕೂಡ ಒಂದು. ಇದೇ ಕಾರಣಕ್ಕೆ ಭಾರಿ ಕುತೂಹಲ ಮೂಡಿಸಿದ್ದು, ಅವರ ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅಂತಹವರಿಗೆ ಇದೀಗ ಬ್ಯಾಡ್ ನ್ಯೂಸ್ ಹೊರ ಬಿದ್ದಿದೆ. ಜು. 11ರಂದು ರಿಲೀಸ್ ಆಗಲಿದೆ ಎಂದು ಘೋಷಿಸಿದ್ದ ಚಿತ್ರತಂಡ ಇದೀಗ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.
ಕ್ರಿಷ್ ಜಾಗರ್ಲಮುಡಿ ನಿರ್ದೇಶನದ ಈ ಆ್ಯಕ್ಷನ್ ಕ್ರೈಂ ಡ್ರಾಮಾ ಈಗಾಗಲೇ ಟೀಸರ್, ಪೋಸ್ಟರ್ ಮೂಲಕ ಗಮನ ಸೆಳೆದಿದೆ. ಮತ್ತೊಂದು ಪವರ್‌ಫುಲ್ ಪಾತ್ರದ ಮೂಲಕ ಅನುಷ್ಕಾ ಶೆಟ್ಟಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ನ. 7ರಂದು ʼಘಾಟಿʼ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಹಿಂದೆಂದೂ ಕಂಡಿರದ ಅವತಾರದಲ್ಲಿ ಅನುಷ್ಕಾ ಇದರಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ಕತ್ತಿ ಹಿಡಿದು ರಕ್ತ ಸುರಿಸಿ ಗಂಭೀರ್ ಲುಕ್ ನೀಡಿ ಕುತೂಹಲ ಹೆಚ್ಚಿಸಿದ್ದರು. ಸಂತ್ರಸ್ತ ಮಹಿಳೆಯೊಬ್ಬಳು ಅಪರಾಧಿಯಾಗಿ ಬಳಿಕ ಸಮಾಜಕ್ಕೆ ಬೆಳಕಾಗಿ ಬದಲಾಗುವ ಪವರ್‌ಫುಲ್ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನುವುದು ಟೀಸರ್ ಮೂಲಕ ಗೊತ್ತಾಗಿತ್ತು.
ಈ ಸುದ್ದಿಯನ್ನೂ ಓದಿ: Ghaati Release Date: ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್; 'ಘಾಟಿ' ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಮುಂದೂಡಿದ್ದು ಏಕೆ?
ಈ ಸಿನಿಮಾದ ಮೂಲಕ ಅನುಷ್ಕಾ ಮೊದಲ ಬಾರಿಗೆ ವಿಕ್ರಂ ಪ್ರಭು ಜತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ 2010ರಲ್ಲಿ ಬಿಡುಗಡೆಯಾಗಿದ್ದ ತೆಲುಗಿನ ʼವೇದಂʼ ಮತ್ತು 2011ರಲ್ಲಿ ರಿಲೀಸ್ ಆಗಿದ್ದ ತಮಿಳಿನ ʼವಾನಂʼ ಸಿನಿಮಾಗಳಲ್ಲಿ ಕೃಷ್ ಮತ್ತು ಅನುಷ್ಕಾ ಜತೆಯಾಗಿ ಕೆಲ ಮಾಡಿದ್ದರು. ಈ ಚಿತ್ರಗಳು ವಿಮರ್ಶಕರ ಜತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಯಶಸ್ವಿ ಜೋಡಿ ಮತ್ತೊಮ್ಮೆ ಒಂದಾಗುವ ಕಾರಣಕ್ಕೂ ʼಘಾಟಿʼ ಕುತೂಹಲ ಮೂಡಿಸಿತ್ತು. ಹೀಗಾಗಿ ಚಿತ್ರವನ್ನು ನೋಡಲು ಕುತೂಹಲದಿಂದ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಅನಿವಾರ್ಯ ಕಾರಣಗಳಿಂದ ಚಿತ್ರ ಜು. 11ರಂದು ಬಿಡುಗಡೆಯಾಗುತ್ತಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಹೊಸ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಾಗಿದೆ.
ಹಾಗೇ ನೋಡಿದರೆ ಚಿತ್ರದ ಬಿಡುಗಡೆ ಮುಂದೂಡಿಕೆಯಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಆರಂಭದಲ್ಲಿ ಸಿನಿಮಾವನ್ನು ಏ. 18ರಂದು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿತ್ತು. ಬಳಿಕ ಜು. 11ಕ್ಕೆ ಮುಂದೂಡಿಕೆಯಾಗಿತ್ತು. ಇದೀಗ 2ನೇ ಬಾರಿಗೆ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ತೆಲುಗಿನ ಜತೆಗೆ ಇದು ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ತೆರೆಗೆ ಬರಲಿದೆ.