ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಕ್ಷಮೆ ಕೇಳಿದ ನಟ ಸತೀಶ್‌ ನೀನಾಸಂ; ಅಷ್ಟಕ್ಕೂ ʻಅಯೋಗ್ಯ 2ʼ ಪ್ರೆಸ್‌ಮೀಟ್‌ನಲ್ಲಿ ಆಗಿದ್ದೇನು?

'ಅಯೋಗ್ಯ 2' ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಸಿನಿಮಾಗಳ ಸೋಲು ಹಾಗೂ ನಿರ್ಮಾಪಕರ 'ಶಿಕ್ಷಣ'ದ ಕುರಿತು ಆಡಿದ್ದ ಮಾತುಗಳು ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಟ ಸತೀಶ್ ನೀನಾಸಂ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾವು ಚಿತ್ರರಂಗದ ವ್ಯವಹಾರದ ಜ್ಞಾನದ ಅರ್ಥದಲ್ಲಿ ಆ ಪದ ಬಳಸಿದ್ದಾಗಿ ತಿಳಿಸಿರುವ ಸತೀಶ್‌, ನಿರ್ಮಾಪಕರ ಸಂಘದ ಪದಾಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.

ನಟ ಸತೀಶ್‌ ನೀನಾಸಂ ಅವರು ಈಚೆಗೆ ಅಯೋಗ್ಯ 2 ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಮಾತನಾಡುವಾಗ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು. ಆದರೆ, ಅವರು ಅಲ್ಲಿ ಹೇಳಿದ ಕೆಲವೊಂದು ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ಆ ಹಿನ್ನೆಲೆಯಲ್ಲಿ ಸತೀಶ್‌ ನೀನಾಸಂ ಅವರು ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಸ್ಪಷ್ಟನೆ ನೀಡಿದ್ದಾರೆ.

ನಾನೂ ಕೂಡ ಒಬ್ಬ ನಿರ್ಮಾಪಕ

"ನಾನು ಅಯೋಗ್ಯ 2 ಪ್ರೆಸ್‌ಮೀಟ್‌ನಲ್ಲಿ ಎಜುಕೇಶನ್ ಬಗ್ಗೆ ಒಂದು ಮಾತಾಡಿದ್ದೆ. ಅದ್ರಲ್ಲಿ ತುಂಬಾ ಜನಕ್ಕೆ ಕ್ಲಾರಿಟಿ ಸಿಕ್ಕಿಲ್ಲ. ಕೆಲವು ನಿರ್ಮಾಪಕರಿಗೆ ನೋವಾಗಿದೆ ಅಂತ ನನ್ನ ಗಮನಕ್ಕೆ ಬಂತು. ನಾನು ಎಜುಕೇಶನ್ ಬೇಡ ಅಂತ ಹೇಳಿಲ್ಲ. ಎಜುಕೇಶನ್ ಅಂದ್ರೆ ನಾವೆಲ್ಲ ಬರೀ ಸ್ಕೂಲ್‌ಗೆ ಹೋಗಿ ಓದಿದ್ದಲ್ಲ. ನಾನು ಹೇಳಿದ್ದು ಏನು ಅಂದ್ರೆ, ಎಜುಕೇಶನ್ ಸಿನಿಮಾ ಒಂದರಲ್ಲೇ ಅಲ್ಲ, ನಮಗೆಲ್ಲ ಎಜುಕೇಶನ್ ಸಿಗಲಿ ಅಂತ. ಯಾಕೆಂದ್ರೆ, ನಾನೂ ಕೂಡ ಒಬ್ಬ ನಿರ್ಮಾಪಕ. ಅದನ್ನ ಕಲಿತುಕೊಳ್ಳೋಕೆ ನಾನು ತುಂಬಾ ಟೈಮ್ ತಗೊಂಡಿದ್ದೀನಿ" ಎಂದು ಸತೀಶ್‌ ನೀನಾಸಂ ಹೇಳಿದ್ದಾರೆ.

ʻಅಂದು 9 ಲಕ್ಷ, ಇಂದು 2 ಕೋಟಿʼ; ಹೊಸ ದಾಖಲೆ ಬರೆದ ಸತೀಶ್‌ ನೀನಾಸಂ - ರ‌ಚಿತಾ ರಾಮ್ ʻಅಯೋಗ್ಯ 2ʼ ಸಿನಿಮಾ

ಎಜುಕೇಶನ್ ಪದ ಬಳಸಿದ್ದು ಬೇರೆ ಅರ್ಥದಲ್ಲಿ

"ಹೊಸದಾಗಿ ಬರೋವರಿಗೆ ಯಾವ ಡಿಪಾರ್ಟ್ಮೆಂಟ್‌ನಲ್ಲಿ ಎಷ್ಟು ದುಡ್ಡು ಹೋಗ್ತಾ ಇದೆ ಅಥವಾ ಯಾವ ಡಿಪಾರ್ಟ್ಮೆಂಟ್‌ನಲ್ಲಿ ಇನ್ವಾಲ್ವ್ ಆಗ್ಬೇಕು, ಎಲ್ಲಾ ಡಿಪಾರ್ಟ್ಮೆಂಟ್‌ನಲ್ಲಿ ಇನ್ವಾಲ್ವ್ ಆಗಿದ್ದಾಗ ಪ್ರತಿಯೊಂದು ಅವರಿಗೂ ಗೊತ್ತಾಗುತ್ತೆ ಅನ್ನೋ ಒಂದು ದೃಷ್ಟಿಯಿಂದ ನಾನು ಹೇಳಿದ್ದೆ. ಒಳ್ಳೆಯದು ಅನ್ನೋ ಒಂದು ದೃಷ್ಟಿಯಿಂದ ನಾನು ಆ ಎಜುಕೇಶನ್ ಅನ್ನೋ ಪದ ಬಳಸಿದ್ದೆ. ಬೇರೆ ಅರ್ಥದಲ್ಲಿ ಅಲ್ಲ" ಎಂದು ಸತೀಶ್‌ ನೀನಾಸಂ ಹೇಳಿದ್ದಾರೆ.

ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆ ಕೇಳ್ತೀನಿ

"ನನ್ನ ಮಾತಿನಿಂದ ಯಾರಿಗೆ ನೋವು ಆಗಿದೆ, ಅವರಿಗೆ ಕ್ಷಮೆ ಕೇಳ್ತೀನಿ. ಯಾಕೆಂದರೆ ಯಾರನ್ನೂ ನೋಯಿಸಿ ಖುಷಿ ಪಡುವ ವ್ಯಕ್ತಿತ್ವ ನಂದಲ್ಲ. ಅಷ್ಟು ದೊಡ್ಡವನೂ ನಾನಲ್ಲ. ನಾನಿನ್ನೂ ಸಾಕಷ್ಟು ಸಿನಿಮಾಗಳು ಮಾಡಬೇಕು, ಸಾಕಷ್ಟು ಕೆಲಸಗಳು ಇದೆ, ಕಲಿಯೋಕೆ ಇದೆ. ನಾನು ಕೂಡ ಸಿನಿಮಾ ಮಾಡಿ ಸೋತಿದ್ದೇನೆ, ಗೆದ್ದಿದ್ದೇನೆ. ನಮ್ಮ ಇಡೀ ತಂಡಕ್ಕೆ ಎಲ್ಲರ ಸಪೋರ್ಟ್ ಬೇಕು. ಇಂಡಸ್ಟ್ರಿಯಲ್ಲಿ ಲಕ್ಷಾಂತರ ಜನರ ಬದುಕು ಇದೆ. ಹಂಗಾಗಿ ನಮ್ಮ ಇಂಡಸ್ಟ್ರಿ ಇನ್ನು ದೊಡ್ಡದಾಗಿ ಬೆಳೆಯಬೇಕು ಅನ್ನೋ ದೃಷ್ಟಿಯಿಂದ ಮಾತಾಡಿದೆ" ಎಂದು ಸತೀಶ್‌ ನೀನಾಸಂ ತಿಳಿಸಿದ್ದಾರೆ.

The Rise of Ashoka: 'ಒಂದು ಸಿನಿಮಾಗೆ 50 ಲಕ್ಷ ತಗೊಂಡಿದ್ರು 3 ವರ್ಷದಲ್ಲಿ 6 ಫಿಲ್ಮ್ ಮಾಡ್ತಿದ್ದೆ': ಸತೀಶ್‌ 'ನೀನಾಸಂ' ಹೇಳಿದ ಸತ್ಯವಿದು!

ʻಅಯೋಗ್ಯ 2ʼ ಸಿನಿಮಾ ರಿಲೀಸ್‌ ಆಗುತ್ತಿದೆ

"ನಾನು ನಿರ್ಮಾಪಕ ಸುಪ್ರಿತ್‌ ಅವರ ಬಗ್ಗೆ ಮಾತನಾಡಿದ್ದೆ. ಅಲ್ಲಿ ನಾನು ಮಾತಾಡುವಾಗ ಡಿಸ್ಟ್ರಿಬ್ಯೂಷನ್ ಪದ ಮಿಸ್ ಆಗಿದೆ. ಹಾಗಾಗಿ ಅದು ಬೇರೆ ಥರ ಆಗಿ, ಕೆಲವರಿಗೆ ನೋವು ಆಗಿದೆ ಅಂತ ಗೊತ್ತಾಯ್ತು. ದಯವಿಟ್ಟು ಬೇಜಾರ್ ಮಾಡ್ಕೋಬೇಡಿ. ನಿರ್ಮಾಪಕರೂ ಇದ್ದರೇನೆ ಚಿತ್ರರಂಗ. ನಿರ್ಮಾಪಕರಿಂದಲೇ ಚಿತ್ರರಂಗಕ್ಕೆ ಕೊಡುಗೆ ಸಿಕ್ಕಿದೆ. ನಮ್ಮ ಅಯೋಗ್ಯ 2 ಬರುತ್ತಿದೆ. ನಿಮ್ಮೆಲ್ಲರ ಸಪೋರ್ಟ್ ಬೇಕು. ನಿಮ್ಮೆಲ್ಲರ ಜೊತೆ ನಿಲ್ಲಬೇಕು. ಒಂದು ಸಿನಿಮಾ ಗೆದ್ದಾಗ ಎಷ್ಟೊಂದು ಜನರ ಬದುಕು ಚೇಂಜ್ ಆಗುತ್ತೆ" ಎಂದು ಸತೀಶ್‌ ನೀನಾಸಂ ಹೇಳಿದ್ದಾರೆ.

ನಾನು ಕಲಿಯುತ್ತಿರುವ ಹಂತದಲ್ಲೇ ಇದ್ದೇನೆ

"ನನ್ನ ಹೇಳಿಕೆಯಿಂದ ಚಿತ್ರರಂಗದ ಹಿರಿಯ ನಿರ್ಮಾಪಕರಿಗೆ, ಅದರಲ್ಲೂ ವಿಶೇಷವಾಗಿ ನಿರ್ಮಾಪಕರ ಸಂಘದ ಪದಾಧಿಕಾರಿಗಳಿಗೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಯಾರನ್ನೂ ನೋಯಿಸಿ ಖುಷಿಪಡುವ ವ್ಯಕ್ತಿತ್ವ ನನ್ನದಲ್ಲ. ನಾನು ಕೂಡ ಇನ್ನೂ ಕಲಿಯುತ್ತಿರುವ ಹಂತದಲ್ಲೇ ಇದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದರಿಂದ ಚಿತ್ರತಂಡಗಳು ಡಿಮೋಟಿವೇಟ್ ಆಗುತ್ತವೆ ಎಂಬ ಕಾರಣಕ್ಕೆ ನಾನು ಧ್ವನಿ ಎತ್ತಿದ್ದೆ. ಥ್ಯಾಂಕ್ ಯು ಸೋ ಮಚ್. ನಿಮ್ಮೆಲ್ಲರ ಸಪೋರ್ಟ್ ನಮಗೆ ಹೀಗೆ ಇರಲಿ. ಥ್ಯಾಂಕ್ ಯು" ಎಂದು ಸತೀಶ್‌ ನೀನಾಸಂ ಹೇಳಿದ್ದಾರೆ.

ಸತೀಶ್‌ ನೀನಾಸಂ ವಿಡಿಯೋ



ಪ್ರೆಸ್‌ಮೀಟ್‌ನಲ್ಲಿ ಆಗಿದ್ದೇನು?

ಈಚೆಗೆ ʻಅಯೋಗ್ಯ 2’ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಸಿನಿಮಾಗಳ ಸೋಲು-ಗೆಲುವು, ಚಿತ್ರರಂಗದಲ್ಲಿ ನಿರ್ಮಾಪಕರ ಹಿತರಕ್ಷಣೆ ಹಾಗೂ ಸದ್ಯದ ಕನ್ನಡ ಸಿನಿಮಾ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಯುವಾಗ ಮಾತಿನ ಚಕಮಕಿ ನಡೆಯಿತು. "ಸಿನಿಮಾ ಸೋಲುತ್ತೆ ಅಂತ ಗೊತ್ತಿದ್ರೆ ಯಾಕೆ ಸಿನಿಮಾ ಮಾಡ್ತೀರಾ? ಸರಿಯಾದ ಶಿಕ್ಷಣವನ್ನು ಪಡೆಯಿರಿ" ಎಂದು ಸತೀಶ್‌ ನೀನಾಸಂ ಹೇಳಿದ್ದರು. ಈ ಹೇಳಿಕೆಯೇ ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಬೇಸರ ಮೂಡಿಸಿತ್ತು ಎನ್ನಲಾಗಿದೆ.