ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ‘ಕೆಲಸ ಮಾಡೋಕೆ ದೊಡ್ಡ ಜಗಳ ಮಾಡ್ತೀರಿ, ನಮ್‌ ಮನೇಲಿ ನಾನೇ ಪಾತ್ರೆ ತೊಳಿತಿನಿ’; ʻಬಿಗ್‌ ಬಾಸ್‌ʼ ಸ್ಪರ್ಧಿಗಳ ನೀರಿಳಿಸಿದ ‘ಕಿಚ್ಚ’ ಸುದೀಪ್!

Kiccha Sudeep: ಈ ವಾರದ ಬಿಗ್ ಬಾಸ್ ವಾರಾಂತ್ಯದ ಪಂಚಾಯಿತಿಯಲ್ಲಿ ಸ್ಪರ್ಧಿಗಳ ಅಹಂಕಾರ ಮತ್ತು ಸೋಮಾರಿತನವನ್ನು ಕಿಚ್ಚ ಸುದೀಪ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಮನೆಯಲ್ಲಿ ನಾನೇ ಪಾತ್ರೆ ತೊಳೆದು ಅಡುಗೆ ಮಾಡುವುದಾಗಿ ಕಿಚ್ಚ ತಿಳಿಸಿದರು.

'ಬಿಗ್ ಬಾಸ್' ಮನೆಯಲ್ಲಿ ಸಣ್ಣಪುಟ್ಟ ಮನೆಗೆಲಸಗಳ ವಿಚಾರಕ್ಕೆ ಸ್ಪರ್ಧಿಗಳು ಕಿತ್ತಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ವಾರಾಂತ್ಯದ ಪಂಚಾಯಿತಿಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನಿರೂಪಕ ‘ಕಿಚ್ಚ’ ಸುದೀಪ್, ಸ್ಪರ್ಧಿಗಳ ವರ್ತನೆಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯ ಕೆಲಸಗಳನ್ನು ಮಾಡಲು ಈ ಪರಿ ಜಗಳವಾಡುವ ಸ್ಪರ್ಧಿಗಳ ಅಹಂಕಾರ ಮತ್ತು ಸೋಮಾರಿತನವನ್ನು ನೇರ ಮಾತುಗಳ ಮೂಲಕ ತಿದ್ದಿ ಬುದ್ಧಿ ಹೇಳಿದ್ದಾರೆ.

ಇಷ್ಟೊಂದು ಗಲಾಟೆ ಮಾಡಿಕೊಳ್ಳಬೇಕಾ?

ವೇದಿಕೆ ಮೇಲಿಂದ ಸ್ಪರ್ಧಿಗಳಿಗೆ ಚಾಟಿ ಬೀಸಿದ ಸುದೀಪ್, "ಮನೆಯಲ್ಲಿ ಪಾತ್ರೆ ತೊಳೆಯುವುದೇ ನಿಮಗೊಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ನೀವು ತಿಂದಿರುವ ತಟ್ಟೆಗಳು ಮತ್ತು ಪಾತ್ರೆಗಳನ್ನು ತೊಳೆಯುವುದಕ್ಕೂ ಅಷ್ಟೊಂದು ಇಗೋ ಯಾಕೆ? ನಾಲ್ಕು ಪಾತ್ರೆ ತೊಳೆಯುವುದರಿಂದ ಏನಾದರೂ ಸಮಸ್ಯೆ ಆಗುತ್ತಾ? ಅದಕ್ಕಾಗಿ ಇಷ್ಟೊಂದು ಗಲಾಟೆ ಮಾಡಿಕೊಳ್ಳಬೇಕಾ?" ಎಂದು ನೇರವಾಗಿಯೇ ಪ್ರಶ್ನಿಸಿದರು.

ಪ್ರತಿದಿನ ನಾನೇ ಪಾತ್ರೆ ತೊಳೆಯುತ್ತೇನೆ

ಅಲ್ಲದೆ ತಮ್ಮ ವೈಯಕ್ತಿಕ ಬದುಕಿನ ಉದಾಹರಣೆ ನೀಡಿದ ಅವರು, "ನಿಮಗೆ ಗೊತ್ತಿರಲಿ ಅಂತ ಒಂದು ಮಾತು ಹೇಳ್ತೀನಿ, ನಮ್ಮ ಮನೆಯಲ್ಲಿ ಪ್ರತಿದಿನ ನಾನೇ ಪಾತ್ರೆ ತೊಳೆಯುತ್ತೇನೆ. ಅಡುಗೆಯನ್ನೂ ನಾನೇ ಮಾಡಿಕೊಳ್ಳುತ್ತೇನೆ. ಕೆಲಸ ಮಾಡುವುದರಲ್ಲಿ ಯಾವುದೇ ಸಣ್ಣತನವಿಲ್ಲ" ಎಂದು ಹೇಳುವ ಮೂಲಕ ಸ್ಪರ್ಧಿಗಳ ಬಾಯಿ ಮುಚ್ಚಿಸಿದರು.

Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್

ನಾನು ಬರೀ 2 ಗಂಟೆ ಮಲಗುತ್ತೇನೆ

ಇಷ್ಟಕ್ಕೇ ನಿಲ್ಲಿಸದ ಅವರು, ಸಣ್ಣಪುಟ್ಟ ವಿಷಯಗಳಿಗೂ ಅತಿಯಾಗಿ ಕೋಪಿಸಿಕೊಳ್ಳುವ ಸ್ಪರ್ಧಿಗಳಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು. "ಪ್ರತಿದಿನ ನಿಮಗೋಸ್ಕರ ಕನಿಷ್ಠ ಅರ್ಧ ಗಂಟೆ ಸಮಯ ಮೀಸಲಿಟ್ಟು ಏಕಾಂತದಲ್ಲಿ ಯೋಚಿಸಿ. ಇಡೀ ದಿನ ನೀವು ಮಾಡಿದ್ದೇನು? ಆಡಿದ ಮಾತುಗಳೇನು? ನಿಮ್ಮಿಂದ ಯಾರಿಗಾದರೂ ನೋವಾಯಿತೇ? ಎಂಬುದನ್ನು ಅವಲೋಕಿಸಿದರೆ ಅರ್ಧ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುತ್ತದೆ. ನಾನು ಪ್ರತಿದಿನ ಮಲಗುವುದು ರಾತ್ರಿ 2 ಗಂಟೆಗೆ, ಏಳುವುದು ಮುಂಜಾನೆ 4 ಗಂಟೆಗೆ. ಕೇವಲ ಎರಡು ಗಂಟೆಗಳ ನಿದ್ದೆಯ ನಂತರ ಎದ್ದು, ನಿನ್ನೆ ನನ್ನಿಂದ ಯಾರಿಗಾದರೂ ನೋವಾಗಿದೆಯಾ ಅಥವಾ ನನ್ನಿಂದ ಯಾರದಾದರೂ ಮುಖದಲ್ಲಿ ನಗು ಮೂಡಿದೆಯಾ ಎಂದು ದಿನದ ಲೆಕ್ಕಾಚಾರ ಹಾಕಿಕೊಂಡೇ ಮುಂದಿನ ಕೆಲಸ ಶುರು ಮಾಡುತ್ತೇನೆ" ಎಂದು ತಮ್ಮ ದಿನಚರಿ ಬಗ್ಗೆ ತಿಳಿಸಿದ್ದಾರೆ ಕಿಚ್ಚ.

ಶಾಂತವಾಗಿ ಕುಳಿತು ವಿಶ್ಲೇಷಿಸಿಕೊಳ್ಳಿ

ಕೊನೆಯದಾಗಿ ಸ್ಪರ್ಧಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಸುದೀಪ್, "ನಾವು ಕನ್ನಡಿ ಮುಂದೆ ನಿಂತು ನಮ್ಮ ಮುಖ ನೋಡಿಕೊಂಡಾಗ, ನಮ್ಮ ನಡೆ-ನುಡಿಗಳ ಬಗ್ಗೆ ನಮಗೇ ಆತ್ಮಸಾಕ್ಷಿ ಚುಚ್ಚಬಾರದು. ಸೋಮವಾರದಿಂದ ಶುಕ್ರವಾರದವರೆಗೆ ನೀವು ಮನೆಯಲ್ಲಿ ಏನು ಮಾಡಿದಿರಿ ಮತ್ತು ಶನಿವಾರ ನಾವು ವೇದಿಕೆಯಲ್ಲಿ ಏನು ಹೇಳಿದೆವು ಎಂಬುದನ್ನು ಶಾಂತವಾಗಿ ಕುಳಿತು ವಿಶ್ಲೇಷಿಸಿಕೊಳ್ಳಿ. ಇದು ಆಟದಲ್ಲಿ ನಿಮ್ಮ ಗೆಲುವಿಗೆ ಖಂಡಿತ ನೆರವಾಗುತ್ತದೆ. ಇದನ್ನು ಪಾಲಿಸುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು" ಎಂದು ಗಂಭೀರವಾಗಿಯೇ ತಿಳಿಹೇಳಿದರು. ಸುದೀಪ್ ಅವರ ಈ ಖಡಕ್ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿವೆ.