ಬಾಲಿವುಡ್ ನಟರಾದ ಆಯುಷ್ಮಾನ್ ಖುರಾನಾ (Ayushmann Khurrana) ಮತ್ತು ತುಷಾರ್ ಕಪೂರ್ (Tusshar Kapoor) ಸೇರಿದಂತೆ ಹಲವು ನಟರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಗೂ ಹಣ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನ 30 ವರ್ಷದ ಐಟಿ ಎಂಜಿನಿಯರ್‌ನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವೈಭವ್ ಮಿಶ್ರಾ (30) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿ ಐಟಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ಸೆಲೆಬ್ರಿಟಿಗಳನ್ನು ಬೆದರಿಸುವ ಉದ್ದೇಶದಿಂದ ನಡೆಸಿದೆ ಎನ್ನಲಾದ ಗುಂಡಿನ ದಾಳಿ ಹಾಗೂ ಬೆದರಿಕೆ ಪ್ರಕರಣಗಳನ್ನು ಬಳಸಿಕೊಂಡು ತ್ವರಿತವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ನಟರಿಗೆ ಇನ್‌ಸ್ಟಾಗ್ರಾಂ ಮೂಲಕ ಬೆದರಿಕೆ
ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ನಟರಿಗೆ ಆರೋಪಿ ಇನ್‌ಸ್ಟಾಗ್ರಾಂ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ನಟರಿಂದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ಆರೋಪಿಯ ಆನ್‌ಲೈನ್ ಪ್ರೊಫೈಲ್ ಹಾಗೂ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು. ಈ ಮೂಲಕ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, "ನಟರು ಮಾಹಿತಿ ನೀಡಿದ ಬಳಿಕ ಸಂದೇಶ ಕಳುಹಿಸಿದ ವ್ಯಕ್ತಿಯ ಆನ್‌ಲೈನ್ ಪ್ರೊಫೈಲ್ ಮತ್ತು ತಾಂತ್ರಿಕ ವಿವರಗಳನ್ನು ಪರಿಶೀಲಿಸಿ ಆತನನ್ನು ಪತ್ತೆಹಚ್ಚಿದ್ದೇವೆ. ಸದ್ಯ ಆತನನ್ನು ವಶಕ್ಕೆ ಪಡೆದಿದ್ದೇವೆ" ಎಂದು ತಿಳಿಸಿದ್ದಾರೆ. ಅಲ್ಲದೆ, ನಟ ತುಷಾರ್ ಕಪೂರ್ ಅವರಿಗೆ ಆಡಿಯೋ ಕ್ಲಿಪ್ ಕಳುಹಿಸಿ ₹5 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಕ್ರೈಂ ಬ್ರಾಂಚ್ ಉಪ ಪೊಲೀಸ್ ಆಯುಕ್ತ ರಾಜತಿಲಕ್ ರೌಶನ್ ಅವರು ಬಂಧನವನ್ನು ಖಚಿತಪಡಿಸಿದ್ದಾರೆ. ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದ ಬಳಿಕ ಆರೋಪಿಯನ್ನು ಮುಂಬೈಗೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ಜೊತೆ ನಂಟಿದೆಯೇ?
ಸದ್ಯದ ತನಿಖೆಯಲ್ಲಿ ವೈಭವ್ ಮಿಶ್ರಾಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಯಾವುದೇ ನೇರ ಸಂಬಂಧ ಇರುವುದು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. "ಸದ್ಯದ ಮಟ್ಟಿಗೆ ಆರೋಪಿಗೂ ಬಿಷ್ಣೋಯ್ ಗ್ಯಾಂಗ್‌ಗೂ ಯಾವುದೇ ಸಂಬಂಧವಿರುವಂತೆ ಕಾಣುತ್ತಿಲ್ಲ. ಆದರೆ ಆತನನ್ನು ವಿಚಾರಣೆ ನಡೆಸಿದ ಬಳಿಕವಷ್ಟೇ ಸಂಪೂರ್ಣ ಮಾಹಿತಿ ತಿಳಿಯಲಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಬಳಿಕ ಬೆದರಿಕೆ
ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ ನಟ ತುಷಾರ್ ಕಪೂರ್ ಅವರಿಗೆ ಬೆದರಿಕೆ ಆಡಿಯೋ ಕ್ಲಿಪ್ ಬಂದಿತ್ತು.ಈ ಆಡಿಯೋ ಸಂದೇಶವನ್ನು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಸಹಾಯಕ ಎಂದು ಹೇಳಲಾಗುವ ಹರಿ ಚಂದ್ ಜಾಟ್ ಅಲಿಯಾಸ್ ಹ್ಯಾರಿ ಬಾಕ್ಸರ್ ಕಳುಹಿಸಿದ್ದಾನೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.
ಇದನ್ನೂ ಓದಿ: Spandana Somanna: ಹಸೆಮಣೆ ಏರಲು ಸಜ್ಜಾದ ಸ್ಪಂದನಾ ಸೋಮಣ್ಣ: ಹೂ ಮುಡಿಸುವ ಶಾಸ್ತ್ರ ಫೋಟೋ ಹಂಚಿಕೊಂಡ ನಟಿ
ಬೆದರಿಕೆ ಸಂದೇಶ ಬಂದ ತಕ್ಷಣ ತುಷಾರ್ ಕಪೂರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಡಿಯೋ ಕ್ಲಿಪ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದರು.ಆದರೆ, ಆಡಿಯೋದಲ್ಲಿದ್ದ ಧ್ವನಿ ಪೊಲೀಸ್ ದಾಖಲೆಗಳಲ್ಲಿದ್ದ ಹ್ಯಾರಿ ಬಾಕ್ಸರ್‌ನ ಧ್ವನಿ ಮಾದರಿಗೆ ಹೊಂದಿಕೆಯಾಗಿರಲಿಲ್ಲ. ಹೀಗಾಗಿ ಈ ಬೆದರಿಕೆಯ ಹಿಂದೆ ಬೇರೊಬ್ಬ ವ್ಯಕ್ತಿ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದರು.ಬಿಷ್ಣೋಯ್ ಗ್ಯಾಂಗ್‌ನಿಂದ ಬಾಲಿವುಡ್‌ನಲ್ಲಿ ಉಂಟಾಗಿದ್ದ ಭಯದ ವಾತಾವರಣವನ್ನು ಬಳಸಿಕೊಂಡು ಹಣ ಸಂಪಾದಿಸಲು ಯಾರೋ ಈ ರೀತಿ ಬೆದರಿಕೆ ಹಾಕಿರುವ ಸಾಧ್ಯತೆಯಿದೆ ಎಂಬುದು ಪೊಲೀಸರ ಪ್ರಾಥಮಿಕ ಅನುಮಾನವಾಗಿದೆ.
ಆರೋಪಿಯ ವಿಚಾರಣೆ ಬಳಿಕ ಬೆದರಿಕೆ ಸಂದೇಶಗಳ ಹಿಂದಿನ ಉದ್ದೇಶ ಹಾಗೂ ಇತರ ವ್ಯಕ್ತಿಗಳ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.