ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಐಕಾನಿಕ್ ‘ಊರ್ವಶಿ’ ಥಿಯೇಟರ್‌ ನೆಲಸಮ; 5 ದಶಕಗಳ ಭವ್ಯ ಇತಿಹಾಸಕ್ಕೆ ತೆರೆ, ಈ ಚಿತ್ರಮಂದಿರ ಕೆಡವಲು ಕಾರಣವೇನು?

ರಾಜಧಾನಿಯ ಸಿನಿಪ್ರೇಮಿಗಳ ಐದು ದಶಕಗಳ ನೆಚ್ಚಿನ ತಾಣವಾಗಿ ಮೆರೆದಿದ್ದ ಊರ್ವಶಿ ಚಿತ್ರಮಂದಿರ, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈಗ ನೆಲಸಮಗೊಳ್ಳುತ್ತಿದೆ. 1970ರಲ್ಲಿ ಡಾ. ರಾಜ್‌ಕುಮಾರ್ ಉದ್ಘಾಟಿಸಿದ್ದ ಈ ಐತಿಹಾಸಿಕ ತಾಣವು ಅತ್ಯಾಧುನಿಕ 4K ತಂತ್ರಜ್ಞಾನ ಹಾಗೂ 3D ಪ್ರದರ್ಶನಕ್ಕೆ ಹೆಸರುವಾಸಿಯಾಗಿತ್ತು.

ರಾಜಧಾನಿಯ ಸಿನಿರಸಿಕರ ಪಾಲಿನ ನೆಚ್ಚಿನ ತಾಣ, ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರಪ್ರೇಮಿಗಳನ್ನು ರಂಜಿಸಿದ್ದ ಲಾಲ್‌ಬಾಗ್ ಮುಖ್ಯರಸ್ತೆಯ ಐಕಾನಿಕ್ ‘ಊರ್ವಶಿ’ ಚಿತ್ರಮಂದಿರ ಇನ್ನು ಇತಿಹಾಸದ ಪುಟ ಸೇರಲಿದೆ. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಈ ಭವ್ಯ ಚಿತ್ರಮಂದಿರವನ್ನು ನೆಲಸಮ ಮಾಡುವ ಕಾರ್ಯ ಆರಂಭವಾಗಿದ್ದು, ಚಿತ್ರರಂಗ ಹಾಗೂ ಬೆಂಗಳೂರಿನ ಸಿನಿಪ್ರೇಮಿಗಳಿಗೆ ಇದು ದೊಡ್ಡ ಆಘಾತ ತಂದಿದೆ.

ಅಣ್ಣಾವ್ರು ಉದ್ಘಾಟಿಸಿದ್ದ ಚಿತ್ರಮಂದಿರ

1970ರಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿದ್ದ ಈ ಚಿತ್ರಮಂದಿರಕ್ಕೆ ಬರೋಬ್ಬರಿ 55 ವರ್ಷಗಳ ಸುವರ್ಣ ಇತಿಹಾಸವಿದೆ. ಇದು ಐದಕ್ಕೂ ಹೆಚ್ಚು ಭಾಷೆಗಳ ಸುಮಾರು 5,000ಕ್ಕೂ ಅಧಿಕ ಚಲನಚಿತ್ರಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ರಜನಿಕಾಂತ್, ಕಮಲ್ ಹಾಸನ್, ಪ್ರಭಾಸ್, ಶಾರುಖ್‌ ಖಾನ್ ಹಾಗೂ ಕನ್ನಡದ ಸ್ಟಾರ್ ನಟರ ಚಿತ್ರಗಳ ‘ಫಸ್ಟ್ ಡೇ ಫಸ್ಟ್ ಶೋ’ ಸಂಭ್ರಮ ಇಲ್ಲಿ ಯಾವಾಗಲೂ ಜೋರಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಪರಭಾಷಾ ಸಿನಿಮಾಗಳಿಗೂ ದೊಡ್ಡ ವೇದಿಕೆಯಾಗಿತ್ತು. ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರ ‘AK 47’ ಸಿನಿಮಾ ಈ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿತ್ತು.

ಬೆಂಗಳೂರಿನ ಮೊದಲ 4K ಚಿತ್ರಮಂದಿರ

ತಾಂತ್ರಿಕವಾಗಿಯೂ ‘ಊರ್ವಶಿ’ ಮುಂಚೂಣಿಯಲ್ಲಿತ್ತು. ಬೆಂಗಳೂರಿನಲ್ಲೇ ಮೊದಲ ಬಾರಿಗೆ 4K ಡಿಜಿಟಲ್ ಪ್ರೊಜೆಕ್ಷನ್ ಹಾಗೂ ಅತ್ಯಾಧುನಿಕ ‘ಮೆಯರ್ ಸೌಂಡ್’ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಕೀರ್ತಿ ಇದಕ್ಕೆ ಸಲ್ಲುತ್ತದೆ. 2009ರಲ್ಲಿ ಹಾಲಿವುಡ್‌ನ ‘ಅವತಾರ್’ ಚಿತ್ರ ತೆರೆಕಂಡಾಗ, ಕಡಿಮೆ ದರದಲ್ಲಿ ವಿಶ್ವದರ್ಜೆಯ 3D ಅನುಭವ ನೀಡುವ ಮೂಲಕ ಮಲ್ಟಿಪ್ಲೆಕ್ಸ್‌ಗಳನ್ನೇ ಮೀರಿಸಿ ಬಾಕ್ಸ್ ಆಫೀಸ್ ದಾಖಲೆ ಬರೆದಿತ್ತು. 1,150ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಮತ್ತು ವಿಶಾಲ ಪಾರ್ಕಿಂಗ್ ಸೌಲಭ್ಯದೊಂದಿಗೆ ಇದು ರಾಜಧಾನಿಯ ಚಿತ್ರಪ್ರೇಮಿಗಳ ಹೆಮ್ಮೆಯ ಕೇಂದ್ರವಾಗಿತ್ತು.

KC Rudregowda: ರಾಜ್ ಕಮಲ್ ಚಿತ್ರಮಂದಿರದ ಮಾಲೀಕ, ನಿರ್ಮಾಪಕ ಕೆ. ಸಿ. ರುದ್ರೇಗೌಡ ನಿಧನ

ಕಟ್ಟಡ ನೆಲಸಮವಾಗಲು ಕಾರಣವೇನು?

ಈ ಐತಿಹಾಸಿಕ ಕಟ್ಟಡ ನೆಲಸಮವಾಗಲು ಜಾಗದ ಮಾಲೀಕತ್ವದ ವಿವಾದವೇ ಕಾರಣ. ಮೂಲ ಭೂಮಾಲೀಕರಾದ ಬಸಟ್ಟಿ ಶೆಟ್ಟಿ ಅವರಿಂದ ಗುತ್ತಿಗೆಗೆ ಪಡೆಯಲಾಗಿದ್ದ ಈ ಜಾಗದ ಲೀಸ್ ಅವಧಿಯು 2018ರಲ್ಲೇ ಮುಕ್ತಾಯಗೊಂಡಿತ್ತು. ಕಳೆದ 8 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಭೂಮಾಲೀಕರು ಜಾಗವನ್ನು ವಶಕ್ಕೆ ಪಡೆದು ನೆಲಸಮ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

‘ಟಾಕ್ಸಿಕ್‌’ ಸಿನಿಮಾ ತೆರೆಗೆ ಬರಬೇಕಿತ್ತು!

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಇಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಬೆಳವಣಿಗೆ ತೀವ್ರ ನಿರಾಸೆ ಮೂಡಿಸಿದೆ. ಚಿತ್ರಮಂದಿರದ ಕಡೆಯಿಂದಲೂ ‘ಟಾಕ್ಸಿಕ್’ ತೆರೆಗೆ ಬರಲಿದೆ ಎಂಬ ಸುಳಿವು ಸಿಕ್ಕಿತ್ತು. ಮಲ್ಟಿಪ್ಲೆಕ್ಸ್‌ಗಳ ಯುಗದಲ್ಲೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ನಿಜವಾದ ವೈಭವ ಮತ್ತು ಸಂಭ್ರಮವನ್ನು ಜೀವಂತವಾಗಿರಿಸಿದ್ದ ‘ಊರ್ವಶಿ’ ಚಿತ್ರಮಂದಿರ ಕಣ್ಮರೆಯಾಗುತ್ತಿರುವುದು ಚಿತ್ರರಂಗ ಹಾಗೂ ಸಿನಿರಸಿಕರಿಗೆ ತುಂಬಲಾರದ ನಷ್ಟ.