ಬುರ್ಜ್ ಖಲೀಫಾದ ತೀರಾ ಪಕ್ಕದಲ್ಲೇ ಹಾದು ಹೋದ ವಿಮಾನ: ಬೆಚ್ಚಿಬೀಳಿಸುವ ವಿಡಿಯೊ
Burj Khalifa: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ದುಬೈಯ ಅತೀ ಎತ್ತರ ಹಾಗೂ ಐಷಾರಾಮಿ ಕಟ್ಟಡ ಬುರ್ಜ್ ಖಲೀಫಾ ಪಕ್ಕದಲ್ಲೇ ವಿಮಾನವೊಂದು ಚಲಿಸುತ್ತಿರುವ ವಿಡಿಯೊ ಭಾರಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಬುರ್ಜ್ ಖಲೀಫಾದ ಸಮೀಪದಲ್ಲಿ ಕಂಡುಬಂದ ವಿಮಾನ -
ದುಬೈ, ಮಾ. 3: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದೆ. ಇದಕ್ಕೆ ಇರಾನ್ ಪ್ರತಿ ದಾಳಿ ನಡೆಸಿದೆ. ಸದ್ಯ ದೇಶ-ವಿದೇಶದೆಲ್ಲೆಡೆ ಯುದ್ಧದ ಭೀತಿ ಹೆಚ್ಚಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ದುಬೈಯ ಅತೀ ಎತ್ತರ ಹಾಗೂ ಐಷಾರಾಮಿ ಕಟ್ಟಡ ಬುರ್ಜ್ ಖಲೀಫಾ ಪಕ್ಕದಲ್ಲೇ ವಿಮಾನವೊಂದು ಚಲಿಸುತ್ತಿರುವ ವಿಡಿಯೊ ಭಾರಿ ವೈರಲ್ (Viral Video) ಆಗಿದೆ. ಈ ಬಗ್ಗೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
828 ಮೀಟರ್ ಎತ್ತರದ ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಕಟ್ಟಡ ಮತ್ತು ದುಬೈಯ ಅತ್ಯಂತ ಪ್ರಸಿದ್ಧ ಸ್ಥಳ ಎನಿಸಿಕೊಂಡಿದೆ. ಇತ್ತೀಚೆಗೆ ಇರಾನ್ ನಡೆಸಿದ ಪ್ರತಿ ದಾಳಿಯಲ್ಲಿ ಬುರ್ಜ್ ಖಲೀಫಾದ ಬಳಿ ಸ್ಫೋಟ ನಡೆದಿದ್ದು, ದಟ್ಟ ಹೊಗೆಯನ್ನು ತೋರಿಸುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಇದೀಗ ವಿಮಾನವೊಂದು ಕಟ್ಟಡಕ್ಕೆ ಡಿಕ್ಕಿಯಾಗುವಷ್ಟು ಅಂತರದಲ್ಲಿರುವ ದೃಶ್ಯ ಕಂಡು ಬಂದಿದೆ.
ವಿಡಿಯೊ ನೋಡಿ:
There’s no way someone actually caught this on camera pic.twitter.com/WbsriWBzLj
— HustleBitch (@HustleBitch_) March 1, 2026
ರಾತ್ರಿ ಸೆರೆ ಹಿಡಿಯಲಾದ ಈ ಕ್ಲಿಪ್ ವಿಮಾನವು ಗೋಪುರದ ಪಕ್ಕದಲ್ಲಿ ನೇರವಾಗಿ ಏರುತ್ತಿರುವುದು ಸೆರೆಯಾಗಿದೆ. ಇದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಈ ದೃಶ್ಯವು ವಿಮಾನ ಗಗನಚುಂಬಿ ಕಟ್ಟಡಕ್ಕೆ ಹತ್ತಿರದಲ್ಲಿ, ಅಪಾಯಕಾರಿಯಾಗಿದೆ ಎನ್ನುವುದನ್ನು ತೋರಿಸುತ್ತದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ವಿಮಾನವು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ವರದಿಯಾಗಿದೆ. ಇದು ಬುರ್ಜ್ ಖಲೀಫಾದಿಂದ ಸುಮಾರು 1,300ರಿಂದ 1,400 ಅಡಿಗಳಷ್ಟು ಸುರಕ್ಷಿತ ಅಂತರ ಕಾಯ್ದುಕೊಂಡಿತ್ತು.
ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಕ್ಯಾಮರಾದ ಲೋ-ಆಂಗಲ್ ಮತ್ತು ಹೆಚ್ಚಿನ ಜೂಮ್ ಬಳಸಿ ಈ ವಿಡಿಯೊ ಚಿತ್ರೀಕರಿಸಲಾಗಿದೆ. ಹಾಗಾಗಿ ಇಷ್ಟು ಹತ್ತಿರದಲ್ಲಿರುವಂತೆ ಕಾಣುತ್ತವೆ. ವಿಮಾನವು ಬುರ್ಜ್ ಖಲೀಫಾದಿಂದ ಸುಮಾರು 1,300–1,400 ಅಡಿ ದೂರದಲ್ಲಿ ಇದೆ ಎಂದು ಸ್ಪಷ್ಟನೆ ಸಿಕ್ಕಿದೆ. ಈ ವಿಡಿಯೊ ತ್ವರಿತವಾಗಿ 9.3 ಮಿಲಿಯನ್ ವೀಕ್ಷಣೆ ಗಳಿಸಿದ್ದು ಕೆಲವರು ಈ ದೃಶ್ಯದಿಂದ ವಿಸ್ಮಯಗೊಂಡರೆ ಇನ್ನು ಕೆಲವರು ಅದನ್ನು ಭಯಾನಕವೆಂದು ಕರೆದಿದ್ದಾರೆ.
ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಹೆಚ್ಚಿನವರು ಆತಂಕಕ್ಕೆ ಒಳಗಾಗಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ದುಬೈ ಮತ್ತು ಅಬುಧಾಬಿಯಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದವು. ಹಾಗಾಗಿ ವಿಮಾನವು ಇಷ್ಟು ಕೆಳಮಟ್ಟದಲ್ಲಿ ಹಾರುತ್ತಿದೆಯೇ ಎಂಬ ಅನುಮಾನ ಕೆಲವರಲ್ಲಿ ಇದೆ.