ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಮೌನ ನನ್ನ ದೌರ್ಬಲ್ಯವಲ್ಲ, ಕುಟುಂಬದ ನೆಮ್ಮದಿಗಾಗಿ ಈ ನಿರ್ಧಾರ’; ಕಿಡಿಗೇಡಿಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ‘ಬಿಗ್‌ ಬಾಸ್‌’ ಅಶ್ವಿನಿ ಗೌಡ

Ashwini Gowda: ನಟಿ ಅಶ್ವಿನಿ ಗೌಡ ಅವರು ಕೆಲ ಕಿಡಿಗೇಡಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಬದುಕು, ಮಗ ಮತ್ತು ತಾಯಿಯ ಘನತೆಗೆ ಕಳಂಕ ತರುತ್ತಿರುವ ಸುಳ್ಳು ವಿಡಿಯೋ, ಟ್ರೋಲ್‌ಗಳ ವಿರುದ್ಧ ಸಿಡಿದೆದ್ದಿರುವ ಅವರು, ಎಚ್ಚರಿಕೆ ನೀಡಿದ್ದಾರೆ. ಕುಟುಂಬದ ಭವಿಷ್ಯ ಮತ್ತು ಸ್ವಾಭಿಮಾನ ರಕ್ಷಿಸಿಕೊಳ್ಳಲು ಕಾನೂನಾತ್ಮಕ ಹೋರಾಟಕ್ಕೆ ಇಳಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

"ನನ್ನ ಮೌನವನ್ನು ಯಾರೂ ದೌರ್ಬಲ್ಯವೆಂದು ಭಾವಿಸಬೇಡಿ, ಅದು ನನ್ನ ಕುಟುಂಬದ ನೆಮ್ಮದಿಗಾಗಿ ತೆಗೆದುಕೊಂಡ ನಿರ್ಧಾರವಷ್ಟೇ" ಎಂದು ಖಡಕ್ ಆಗಿ ನುಡಿದಿರುವ ನಟಿ, ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ಅಶ್ವಿನಿ ಗೌಡ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧ ನಡೆಯುತ್ತಿರುವ ನಿರಂತರ ತೇಜೋವಧೆ, ನಕಲಿ ವಿಡಿಯೋ ಹಂಚಿಕೆ ಮತ್ತು ನಿಂದನೆಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ವೈಯಕ್ತಿಕ ಘನತೆಗೆ ಧಕ್ಕೆ ತರುತ್ತಿರುವವರ ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಮಾನಹಾನಿ ಮೊಕದ್ದಮೆ ದಾಖಲಿಸಿ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಮಾನಹಾನಿ ಮೊಕದ್ದಮೆ ದಾಖಲಿಸಿದ್ದೇನೆ

ಈ ಕುರಿತು ಸುದೀರ್ಘವಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಶ್ವಿನಿ ಗೌಡ, "ನನ್ನ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಪ್ರಸಾರವಾದ ವಿಡಿಯೋಗಳು, ಸಂದರ್ಶನಗಳು, ಟ್ರೋಲ್‌ಗಳು, ಫೋಟೋಗಳು ಹಾಗೂ ವೈಯಕ್ತಿಕ ವಿಚಾರಗಳು ನನ್ನನ್ನು ಮಾತ್ರವಲ್ಲ, ನನ್ನ ತಾಯಿ ಮತ್ತು ಮಗನನ್ನೂ ನೋಯಿಸಿವೆ. ನನ್ನ ಹೆಸರು, ವ್ಯಕ್ತಿತ್ವ, ಫೋಟೋ ಹಾಗೂ ನನ್ನ ಕುಟುಂಬದ ಹೆಸರು, ಫೋಟೋ-ವಿಡಿಯೋಗಳನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ನಾನು ಈಗಾಗಲೇ ಮಾನಹಾನಿ ಮೊಕದ್ದಮೆ ದಾಖಲಿಸಿದ್ದೇನೆ" ಎಂದು ‘ಬಿಗ್‌ ಬಾಸ್‌’ ಅಶ್ವಿನಿ ಗೌಡ ಹೇಳಿದ್ದಾರೆ.

ನನ್ನ ಉತ್ತರ ಕೇವಲ ಮಾತಿನಲ್ಲಿರುವುದಿಲ್ಲ

"ನನ್ನ ಬಗ್ಗೆ ಈಗಾಗಲೇ ಪ್ರಕಟಿಸಿರುವ ವಿಚಾರಗಳನ್ನೂ ತೆಗೆದುಹಾಕಬೇಕು ಹಾಗೂ ಮುಂದೆಯೂ ಯಾವುದೇ ರೀತಿಯಲ್ಲಿ ಬಳಸಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದ್ದರಿಂದ ನ್ಯಾಯಾಲಯದ ಆದೇಶವನ್ನು ಗೌರವಿಸಿ, ಸಂಬಂಧಪಟ್ಟ ಎಲ್ಲ ವಿಷಯಗಳನ್ನೂ ತಕ್ಷಣವೇ ಡಿಲೀಟ್ ಮಾಡಬೇಕು. ನಾನೊಬ್ಬ ತಾಯಿ… ನನ್ನ ಮಗನ ಭವಿಷ್ಯವೇ ನನ್ನ ಮೊದಲ ಆದ್ಯತೆ. ನಾನೊಬ್ಬ ಮಗಳು, ನನ್ನ ತಾಯಿಯ ಮನಸ್ಸಿಗೆ ನೋವಾಗುವುದು ನನಗೆ ಸಹಿಸಲಾಗದ ವೇದನೆ. ನನ್ನ ತಂದೆ ಕಲಿಸಿಕೊಟ್ಟ ದಾರಿಯಲ್ಲಿ, ಅವರ ಆಶೀರ್ವಾದದೊಂದಿಗೆ ನಾನು ಸಾಗುತ್ತಿದ್ದೇನೆ. ಭಯದಿಂದ ನಾನೇನೂ ಮೌನವಾಗಿಲ್ಲ; ನನ್ನ ಕುಟುಂಬಕ್ಕಾಗಿ ಸುಮ್ಮನಿದ್ದೆ. ಇನ್ನು ಮುಂದೆ ನನ್ನ ಉತ್ತರ ಕೇವಲ ಮಾತಿನಲ್ಲಿರುವುದಿಲ್ಲ" ಎಂದು ಅಶ್ವಿನಿ ಗೌಡ ತಿಳಿಸಿದ್ದಾರೆ.

ಬಿಗ್ ಬಾಸ್ ಮನೆ ನನಗೆ ಜೀವನದ ಪಾಠ

"ನಾನೊಬ್ಬ ಕಲಾವಿದೆ, ಮಗನಿಗೆ ತಾಯಿ ಹಾಗೂ ಒಬ್ಬ ಗೃಹಿಣಿ. ಕಳೆದ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಅಭಿನಯಿಸುತ್ತಾ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಸಂಪಾದಿಸಿಕೊಂಡು ಬಂದಿದ್ದೇನೆ. ನನ್ನ 20 ವರ್ಷಗಳ ಕಲಾ ಪಯಣ ನನ್ನನ್ನು 'ಬಿಗ್ ಬಾಸ್' ಮನೆಯವರೆಗೂ ಕರೆದುಕೊಂಡು ಹೋಯಿತು. ಬಿಗ್ ಬಾಸ್ ಮನೆ ನನಗೆ ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ; ಅದೊಂದು ಅನುಭವ, ಒಂದು ಪರೀಕ್ಷೆ ಮತ್ತು ಜೀವನದ ಪಾಠ" ಎಂದು ಅಶ್ವಿನಿ ಗೌಡ ತಿಳಿಸಿದ್ದಾರೆ.

ಕೆಲವರು ಪ್ರೋತ್ಸಾಹಿಸಿದರು, ಕೆಲವರು ಕಾಲೆಳೆದರು

"ಆ ಮನೆಯೊಳಗಿನ ನನ್ನ ನಡೆ-ನುಡಿಗಳನ್ನು ಕೆಲವರು ವಿಮರ್ಶಿಸಿದರು, ಕೆಲವರು ಪ್ರೋತ್ಸಾಹಿಸಿದರು, ಕೆಲವರು ಕಾಲೆಳೆದರು, ಕೆಲವರು ಒಪ್ಪಿಕೊಂಡರು, ಮತ್ತೆ ಕೆಲವರ ಮಾತುಗಳು ನನ್ನ ಮನಸ್ಸಿಗೆ ನೋವುಂಟುಮಾಡಿದವು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನನ್ನ ವೈಯಕ್ತಿಕ ಜೀವನ, ಕುಟುಂಬ ಹಾಗೂ ವೈವಾಹಿಕ ಬದುಕಿನ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸದೆ, ಹಳೆಯ ವಿಡಿಯೋಗಳನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಅವಮಾನಿಸುವುದು ಮತ್ತು ತೇಜೋವಧೆ ಮಾಡುವುದು ಮುಂದುವರಿಯಿತು" ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್‌

ನನ್ನ ವೈವಾಹಿಕ ಬದುಕಿನ ಸಂಪೂರ್ಣ ಸತ್ಯ ನಿಮಗೆ ಗೊತ್ತಿಲ್ಲ

"ಇವೆಲ್ಲವೂ ನನಗೆ ಮಾನಸಿಕವಾಗಿ ಮತ್ತು ನನ್ನ ಕುಟುಂಬದವರಿಗೆ ಅತೀವ ನೋವುಂಟುಮಾಡಿವೆ. ಒಬ್ಬ ಹೆಣ್ಣಿನ ಮೇಲೆ ನಡೆಯುವ ಇಂತಹ ವಾಗ್ದಾಳಿಗಳು ಕೇವಲ ಆಕೆಗೆ ಮಾತ್ರವಲ್ಲದೆ, ಆಕೆಯ ಕುಟುಂಬಕ್ಕೂ ಮತ್ತು ಮಗುವಿನ ಮನಸ್ಸಿಗೂ ಆಳವಾದ ಗಾಯ ಮಾಡುತ್ತವೆ. ನನ್ನ ಬಗ್ಗೆ ನಿಮಗೆ ಎಲ್ಲವೂ ತಿಳಿದಿಲ್ಲ; ನನ್ನ ಕುಟುಂಬದ ಹಿನ್ನೆಲೆಯಾಗಲಿ, ನನ್ನ ವೈವಾಹಿಕ ಬದುಕಿನ ಸಂಪೂರ್ಣ ಸತ್ಯವಾಗಲಿ ನಿಮಗೆ ಗೊತ್ತಿಲ್ಲ. ಹಾಗಿರುವಾಗ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುವ ಹಕ್ಕು ಯಾರಿಗೂ ಇಲ್ಲ" ಎಂದು ಎಂದು ಅಶ್ವಿನಿ ಗೌಡ ಎಚ್ಚರಿಸಿದ್ದಾರೆ.

ʻಬಿಗ್‌ ಬಾಸ್‌ʼ ಖ್ಯಾತಿಯ ಅಶ್ವಿನಿ ಗೌಡ ಹೇಳಿದ್ದೇನು?



ಕಾನೂನು ಕ್ರಮದ ಎಚ್ಚರಿಕೆ

"ನಾನು ಈಗಾಗಲೇ ಮಾನಹಾನಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ಪಡೆದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಆಧಾರರಹಿತ ಆರೋಪಗಳನ್ನು ಹೊರಿಸುವುದು, ಮಾನಹಾನಿಕರ ವಿಚಾರಗಳನ್ನು ಹಂಚಿಕೊಳ್ಳುವುದು, ಹಳೆಯ ವಿಡಿಯೋಗಳನ್ನು ತಿರುಚಿ ಇಲ್ಲವೇ ಸಂದರ್ಭದಿಂದ ಬೇರ್ಪಡಿಸಿ ಪ್ರಸಾರ ಮಾಡುವಂತಹ ಕೃತ್ಯಗಳು ಮುಂದುವರಿದರೆ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಯಾರನ್ನೂ ಬೆದರಿಸುವ ಮಾತಲ್ಲ; ನನ್ನ ಗೌರವ, ನನ್ನ ಕುಟುಂಬದ ಘನತೆ ಮತ್ತು ನನ್ನ ಮಗನ ಭವಿಷ್ಯವನ್ನು ಕಾಪಾಡಿಕೊಳ್ಳಲು ನಾನು ಇಟ್ಟಿರುವ ಕಾನೂನಾತ್ಮಕ ಹೆಜ್ಜೆ" ಎಂದು ಅಶ್ವಿನಿ ಗೌಡ ಹೇಳಿದ್ದಾರೆ.