ಯಾವುದೇ ಸಿನಿಮಾವಾಗಲಿ, ಅದು ರಿಲೀಸ್ ಆದಮೇಲೆಯೇ, ಹಿಟ್ಟಾ? ಸೂಪರ್ ಹಿಟ್ಟಾ? ಬ್ಲಾಕ್ ಬಸ್ಟರ್ ಹಿಟ್ಟಾ ಅಂತ ಗೊತ್ತಾಗೋದು. ಆದರೆ ಶೀರ್ಷಿಕೆಯನ್ನೇ ಸೂಪರ್ ಹಿಟ್ ಅಂತ ಇರಿಸಿಕೊಂಡು ಸಿನಿಮಾವೊಂದು ತೆರೆಕಂಡಿದೆ. ಇದರಲ್ಲಿ ಹೀರೋ ಆಗಿ ಮಿಂಚಿರುವುದು ಗಿಲ್ಲಿ ನಟ. ಬಿಗ್ ಬಾಸ್ ಮನೆಯಿಂದ ಬಂದಿರುವ ಅವರೀಗ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾವನ್ನು ರಿಲೀಸ್ ಮಾಡಿದ್ದಾರೆ. ಹಾಗಾದರೆ, ಸಿನಿಮಾ ಹೇಗಿದೆ? ಮುಂದೆ ಓದಿ.
ʻಸೂಪರ್ ಹಿಟ್ʼ ಸಿನಿಮಾದ ಕಥೆ ಏನು?
ಅದೊಂದು ಕಿಡ್ನಾಪರ್ಸ್ ಗ್ಯಾಂಗ್.. ಕಾರೊಂದರಲ್ಲಿ ಒಬ್ಬ ವ್ಯಕ್ತಿಯನ್ನು ಅಪಹರಿಸುವುದಕ್ಕೆ ಪ್ಲ್ಯಾನ್ ಆಗಿರುತ್ತದೆ. ಕಾರಿನೊಳಗೆ ಅಪಹರಣವಾದ ವ್ಯಕ್ತಿಯನ್ನು ಕೂಡ ಇರಿಸಲಾಗುತ್ತದೆ. ಆದರೆ ಆ ಕಾರೇ ಕಳ್ಳತನವಾಗಿಬಿಟ್ಟರೆ? ಹೌದು, ಹೀಗೊಂದು ಎಳೆಯೊಂದಿಗೆ ಆರಂಭವಾಗುವ ಸೂಪರ್ ಹಿಟ್ ಸಿನಿಮಾವು ಅನೇಕ ಕಾಮಿಡಿ ಟ್ರ್ಯಾಕ್‌ಗಳೊಂದಿಗೆ ಸಾಗುತ್ತದೆ. ಸತ್ಯ (ಗೌರವ್ ಶೆಟ್ಟಿ), ಮುನ್ನಾಭಾಯಿ/ಭೂಪತಿ (ಗಿಲ್ಲಿ ನಟ) ಮತ್ತು ಅಪ್ಸರಾ (ಶ್ವೇತಾ) ಅನಿವಾರ್ಯ ಕಾರಣಗಳಿಂದ ಆ ಕದ್ದ ಕಾರಿನಲ್ಲಿ ಪಯಣಿಗರಾಗುತ್ತಾರೆ. ಅವರ ಜರ್ನಿಯಲ್ಲಿ ಅನೇಕರು ಅನಿರೀಕ್ಷಿತ ಅತಿಥಿಗಳಾಗಿ ಬಂದು ಹೋಗುತ್ತಾರೆ. ಕಥೆಗೆ ಅಲ್ಲಲ್ಲಿ ತಿರುವು ನೀಡುತ್ತಾ ಸಾಗುತ್ತಾರೆ. ಇದರಲ್ಲೊಂದು ಕ್ರೈಮ್ ಕೂಡ ನಡೆದಿರುತ್ತದೆ. ಅಂಡರ್‌ವರ್ಲ್ಡ್ ಡಾನ್‌ಗಳ ಆಗಮನವೂ ಆಗುತ್ತದೆ. ಪೊಲೀಸರು, ವಕೀಲರ ಜೂಟಾಟವೂ ಇರುತ್ತದೆ. ಇವರೆಲ್ಲೊಂದಿಗೆ ಸತ್ಯ ಮತ್ತು ಭೂಪತಿಗೆ ಏನು ನಂಟು? ಅಂತಿಮವಾಗಿ ಇವರೆಲ್ಲಾ ಅಂದುಕೊಂಡಿದ್ದು ನೆರವೇರುತ್ತದೆಯೇ ಎಂಬುದೇ ಕಥೆ.
ಹೈಲೈಟ್ ಆಗುವ ಗಿಲ್ಲಿ ನಟ
ಗಿಲ್ಲಿ ನಟ ಇದ್ದಲ್ಲಿ ಕಾಮಿಡಿಗೆ ಭರವಿಲ್ಲ. ಅದೇ ರೀತಿ ಇಲ್ಲಿ ಕೂಡ ಗಿಲ್ಲಿ ತಮ್ಮ ಕಾಮಿಡಿ ಟೈಮಿಂಗ್‌ನಿಂದ ನಗಿಸುತ್ತಾರೆ. ಅವರಿಗೆ ಇಲ್ಲಿ ಎರಡು ಶೇಡ್‌ನ ಪಾತ್ರವಿದೆ. ಮೊದಲಿಗೆ, "ಥಂಡರ್ ಥರ ಎಂಟ್ರಿ ಕೊಟ್ಟು.. ಅಂಡರ್‌ವರ್ಲ್ಡ್‌ನಲ್ಲಿ ವಂಡರ್‌ನೇ ಕ್ರಿಯೇಟ್ ಮಾಡಿರೋ ಭಾಯ್.. ಮುನ್ನಾ ಭಾಯ್.." ಎನ್ನುತ್ತಾ ನಗಿಸುವ ಅವರು, ಆಮೇಲೆ ಭೂಪತಿ ಆಗಿ ಬದಲಾಗುತ್ತಾರೆ. ಎರಡು ಶೇಡ್‌ನಲ್ಲಿಯೂ ಸಖತ್ ಆಗಿಯೇ ನಗಿಸುವ ಪ್ರಯತ್ನ ಮಾಡಿದ್ದಾರೆ. ಅವರಲ್ಲಿರುವ ಟ್ಯಾಲೆಂಟ್ ಅನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತೇನೋ ಅಂತ ಅನ್ನಿಸುತ್ತದೆ. ಗಿಲ್ಲಿ ಜೊತೆಗೆ ಗೌರವ್ ಶೆಟ್ಟಿಗೂ ಅಷ್ಟೇ ಪ್ರಮುಖ ಪಾತ್ರವಿದೆ. ಅವರು ಕೂಡ ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ. ಇನ್ನು, ನಟಿ ಶ್ವೇತಾ ಕೂಡ ಎರಡೆರಡು ಶೇಡ್‌ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರಿಗೆ ಸಿನಿಮಾರಂಗದಲ್ಲಿ ಭವಿಷ್ಯ ಇದೆ ಎಂಬುದಕ್ಕೆ ಇಲ್ಲಿ ಸಾಕ್ಷಿಗಳಿವೆ.
ಹಾಸ್ಯ ಕಲಾವಿದರ ದಂಡು
ನಟ ಸಾಧು ಕೋಕಿಲ ಅವರು ಈ ಕಥೆಯ ಕೇಂದ್ರುಬಿಂದುವಾಗಿ ಕಾಣಿಸಿಕೊಂಡಿದ್ದಾರೆ. ಅವರ ಎಂದಿನ ಕಾಮಿಡಿ ಆಡಿಯನ್ಸ್‌ಗೆ ಕಿಕ್ ನೀಡುತ್ತದೆ. ಜೊತೆಗೆ ಜೊತೆ ಪ್ರಮೋದ್ ಶೆಟ್ಟಿ, ಗೋವಿಂದೇಗೌಡ, ರಾಘವೇಂದ್ರ ರೈ, ಟೆನ್ನಿಸ್ ಕೃಷ್ಣ, ಗಿರಿ ಶಿವಣ್ಣ ಅಲ್ಲಲ್ಲಿ ಬಂದು ನಗಿಸುವ ಪ್ರಯತ್ನ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಡ್ರ್ಯಾಗನ್ ಮಂಜು ಹೊಸ ರೂಪದಲ್ಲಿ ಎಂಟರ್‌ಟೇನ್ ಮಾಡಿದ್ದಾರೆ.
ನಗಿಸಿಕೊಂಡು ಹೋಗುವ ಸಿನಿಮಾ
ನಿರ್ದೇಶಕ ವಿಜಯಾನಂದ್ ಅವರು ಇಲ್ಲಿ ಪ್ರೇಕ್ಷಕರನ್ನು ನಗಿಸಲೇಬೇಕು ಎಂಬ ಉದ್ದೇಶದಿಂದ ಸ್ಕ್ರಿಪ್ಟ್ ಬರೆದುಕೊಂಡಿದ್ದಾರೆ. ಇದೊಂಥರಾ ಬ್ರೇನ್ ಲೆಸ್ ಕಾಮಿಡಿ ಎನ್ನಬಹುದು. ಗಂಭೀರತೆಗೆ ಇಲ್ಲಿ ಆಸ್ಪದ ಇಲ್ಲ. ಎಲ್ಲರನ್ನೂ ನಗಿಸಬೇಕೆಂದೇ ನಿರ್ಧರಿಸಿದಂತೆ ಈ ಸಿನಿಮಾದ ನಿರೂಪಣೆ. ಅದು ಯಾವಮಟ್ಟಕ್ಕೆಂದರೆ, ಕೋರ್ಟ್ ರೂಮ್‌ನಲ್ಲೂ ಕೂಡ ಸೀರಿಯಸ್‌ನೆಸ್ ಇರೋದಿಲ್ಲ. ಅಲ್ಲೂ ಕಾಮಿಡಿಯೇ ಹೈಲೈಟ್ ಆಗಿದೆ. ಒಮ್ಮೊಮ್ಮೆ ಕಥೆ ಮುಖ್ಯ ಆಶಯವನ್ನು ಬಿಟ್ಟು ಎತ್ತೆತ್ತಲೋ ಸಾಗಿದರೂ, ಪುನಃ ಹಳಿಗೆ ಮರಳುತ್ತದೆ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಮತ್ತು ಸಂಗೀತ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಎಲ್ಲೂ ಬೋರ್ ಹೊಡೆಸದೇ ಸಿನಿಮಾ ಚಕಚಕನೆ ಸಾಗುವುದು ಇದರ ಪ್ಲಸ್ ಪಾಯಿಂಟ್.
Movie: ಸೂಪರ್ ಹಿಟ್
Release Date: ಫೆ.27, 2026
Language: ಕನ್ನಡ
Genre: ಥ್ರಿಲ್ಲರ್, ಡ್ರಾಮಾ, ಕಾಮಿಡಿ
Director: ವಿಜಯಾನಂದ
Cast: ಸ್ವರಾಜ್ ಶೆಟ್ಟಿ, ಶ್ರೀನಿವಾಸ ಗೌಡ, ಪ್ರಕಾಶ್ ರಾಜ್, ಆದಿತ್ಯ, ರವಿಶಂಕರ್, ರಾಧಿಕಾ ಚೇತನ್,
Duration: 135 ನಿಮಿಷ
Rating: 3/5