Gilli Nata: ʻಇನ್‌ಸ್ಟಾಗ್ರಾಮ್‌ನಲ್ಲಿ ರಘು ಅಣ್ಣ ಅನ್‌ಫಾಲೋ ಮಾಡಿದ್ದು ಗೊತ್ತೇ ಇರಲಿಲ್ಲʼ; ಅಚ್ಚರಿಯ ವಿಚಾರ ತಿಳಿಸಿದ ಗಿಲ್ಲಿ ನಟ!
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಗಳಾದ ಮ್ಯೂಟೆಂಟ್ ರಘು ಅವರು ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, "ರಘು ಅಣ್ಣ ಮಗುವಿನಂತಹ ವ್ಯಕ್ತಿ, ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಜೊತೆಗೆ ಮ್ಯೂಟೆಂಟ್ ರಘು ಅವರು ಉತ್ತಮವಾದ ಒಡನಾಟ ಹೊಂದಿದ್ದರು. ಇಬ್ಬರು ಕೂಡ ಒಟ್ಟೊಟ್ಟಿಗೆ ಇರುತ್ತಿದ್ದರು. ಮಧ್ಯೆ ಮಧ್ಯೆ ಸಣ್ಣಪುಟ್ಟ ಮುನಿಸು ಇದ್ದರೂ, ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿರಲಿಲ್ಲ. ಬಿಗ್ ಬಾಸ್ ಮುಗಿದ ಮೇಲೂ ಅವರ ಬಾಂಧವ್ಯ ಹಾಗೇ ಇತ್ತು. ಆದರೆ ಈಚೆಗೆ ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರಘು ಅನ್‌ಫಾಲೋ ಮಾಡಿದ್ದಾರೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಗಿಲ್ಲಿ ನಟ ಅವರು ಪ್ರತಿಕ್ರಿಯೆ ನೀಡಿದ್ಧಾರೆ.
ರಘು ಬಗ್ಗೆ ಗಿಲ್ಲಿ ನಟ ಹೇಳಿದ್ದೇನು?
"ನನಗೆ ಅದರ ಬಗ್ಗೆ ಗೊತ್ತಿರಲಿಲ್ಲ. ನಾನು ಯೂಟ್ಯೂಬ್ ಅಲ್ಲಿ ನೋಡಿಯೇ ತಿಳಿದುಕೊಂಡೆ. ನಾನು ಸೋಶಿಯಲ್ ಮೀಡಿಯಾವನ್ನು ಅಷ್ಟೊಂದು ಬಳಸೋದಿಲ್ಲ. ರೀಲ್ಸ್ ನೋಡ್ತಿನಿ, ಪೋಸ್ಟ್ ಎಲ್ಲಾ ನಾನು ಮಾಡೋದೆ ಇಲ್ಲ. ಅವರು ನನ್ನು ಫಾಲೋ ಮಾಡಿರ್ತಾರೆ. ನಾನು ವಾಪಸ್ ಫಾಲೋ ಮಾಡಿರಲ್ಲ ಅಂತೇನೋ ಆಗಿರಬಹುದು. ನಾನು ಫೋನ್ ಮಾಡಿ ಕೇಳಬೇಕು, ಏನಾಯ್ತಣ್ಣ ಅಂತ. ನಾನಿನ್ನೂ ಕೇಳಿಲ್ಲ" ಎಂದು ಗಿಲ್ಲಿ ನಟ ಹೇಳಿದ್ದಾರೆ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಗಿಲ್ಲಿ ಯಾರನ್ನೆಲ್ಲಾ ಫಾಲೋ ಮಾಡ್ತಿದ್ದಾರೆ?
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಭಾಗಿಯಾಗಿದ್ದ ಸ್ಪಂದನಾ ಸೋಮಣ್ಣ, ಸೂರಜ್ ಸಿಂಗ್, ಕಾವ್ಯ ಶೈವ, ರಕ್ಷಿತ್ ಶೆಟ್ಟಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅದು ಬಿಟ್ಟರೆ ಈ ಸೀಸನ್‌ನ ಬೇರೆ ಯಾರನ್ನೂ ಫಾಲೋ ಮಾಡುತ್ತಿಲ್ಲ. "ರಘು ಅಣ್ಣ ತುಂಬಾ ಒಳ್ಳೆಯ ವ್ಯಕ್ತಿ. ನಾನು ಬಿಗ್ ಬಾಸ್ ಮನೆಯಲ್ಲೂ ಇದನ್ನೂ ಹೇಳಿದ್ದೇನೆ. ಅವರು ನೋಡೋದಕ್ಕೆ ಆ ರೀತಿ ಕಾಣಬಹುದು. ಆದರೆ ಮನಸ್ಸು ತುಂಬಾ ಮೃದು. ಅವರ ಪರ್ಸನಾಲಿಟಿಗೂ ಅವರ ವ್ಯಕ್ತಿತ್ವಕ್ಕೂ ಸಂಬಂಧ ಇಲ್ಲ" ಎಂದು ಗಿಲ್ಲಿ ನಟ ಹೇಳಿದ್ದಾರೆ.
ಗಿಲ್ಲಿ ನಟ ಅವರ ಎಕ್ಸ್‌ಕ್ಲೂಸಿವ್ ಸಂದರ್ಶನ
"ರಘು ಅಣ್ಣ ಒಂದು ರೀತಿ ಮಗು ಥರ. ನಾವು ಹೇಗೆ ಆಡಿಸುತ್ತೇವೋ ಹಾಗೇ. ಕೋಪ ಮಾಡಿಸಿದರೆ, ಕೋಪ ಮಾಡಿಕೊಳ್ಳುತ್ತಾರೆ. ಅವರು ಅವಕಾಶವಾದಿ ರೀತಿ ಅಲ್ಲ. ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕು ಇಲ್ಲ. ಆ ರೀತಿ ಬಿರುಕು ಮಾಡಿಕೊಂಡು ಏನು ಮಾಡಬೇಕಿದೆ? ಅವರೇ ನನಗೆ 15 ದಿನದಲ್ಲಿ ಎರಡು ಸಲ ಫೋನ್ ಮಾಡಿದ್ದಾರೆ. ಮನೆಗೆ ಯಾವಾಗ ಊಟಕ್ಕೆ ಯಾವಾಗ ಬರ್ತಿಯಾ ಅಂತ ಕರೆದಿದ್ದಾರೆ. ನಾನು ಕೂಡ, ʻಬರ್ತಿನಿ ಇರಣ್ಣ, ಇದೆಲ್ಲಾ ಮುಗಿಸಿಕೊಂಡು ಬರ್ತಿನಿʼ ಅಂತ ಹೇಳಿದ್ದೇನೆ. ನಾನು ಯೂಟ್ಯೂಬ್ ಚಾನೆಲ್ ಮಾಡ್ತಿನಿ, ಎಲ್ರೂ ಬರಬೇಕು ಎಂದು ಬಿಗ ಬಾಸ್ ಮನೆಯೊಳಗೆ ರಘು ಅಣ್ಣ ಹೇಳಿದ್ದರು. ರಕ್ಷಿತಾ ಅವರ ಮನೆಗೆ ಹೋಗಭೇಕು ಎಂದುಕೊಂಡಿದ್ದೇವೆ" ಎಂದು ಗಿಲ್ಲಿ ನಟ ಹೇಳಿದ್ದಾರೆ.