'ಬಿಗ್ ಬಾಸ್' ಕನ್ನಡದ ಮೂಲಕ ಜನಪ್ರಿಯತೆ ಗಳಿಸಿದ್ದ ವರ್ತೂರು ಸಂತೋಷ್ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಹತ್ವದ ವಿಚಾರವೊಂದನ್ನು ಹಂಚಿಕೊಂಡಿದ್ದು, ತಮಗೆ ಎರಡನೇ ಮದುವೆಯಾಗಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಕುರಿತು ಮುಕ್ತವಾಗಿ ಮಾತನಾಡಿರುವ ಅವರು, ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಿಂದ ಹೊರಬಂದ ಬಳಿಕವೇ ಈ ಮದುವೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೀತಿಸಿ ಮದುವೆಯಾದ ವರ್ತೂರು ಸಂತೋಷ್
ತಮ್ಮ ಮದುವೆಯ ಹಿಂದಿನ ಕಾರಣ ಹಾಗೂ ಹಿನ್ನೆಲೆಯನ್ನು ವಿವರಿಸಿದ ಅವರು, "ನಮ್ಮ ತಾಯಿಯ ಕೈಯಲ್ಲೇ ಸಾಯುವವರೆಗೂ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಊಟ-ತಿಂಡಿ ಮಾಡಿಕೊಡಲು, ಮನೆಗೆ ಬರುವ-ಹೋಗುವ ಅತಿಥಿಗಳಿಗೆ ಟೀ-ಕಾಫಿ ಉಪಚಾರ ನೋಡಿಕೊಳ್ಳಲು ಒಬ್ಬರ ಬೆಂಬಲ ಬೇಕಿತ್ತು. ಹೀಗಾಗಿ ಮದುವೆಯಾಗಿದ್ದೇನೆ. ಇದು ಪ್ರೀತಿಸಿ ಮಾಡಿಕೊಂಡ ಮದುವೆಯಾಗಿದ್ದು, ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಲವ್ ಕಮ್ ಅರೇಂಜ್ಡ್ ಮಾದರಿಯಲ್ಲಿ ನಡೆದಿದೆ" ಎಂದು ತಿಳಿಸಿದ್ದಾರೆ.
ಕುಟುಂಬದ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಲ್ಲ
ಪತ್ನಿಯನ್ನು ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಪರಿಚಯಿಸದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕುಟುಂಬದ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಚಾರಕ್ಕೆ ತರುವುದು ತಪ್ಪು. ನಾನೇನೋ ಹಳ್ಳಿಕಾರ್ ತಳಿ, ದನ-ಕರುಗಳ ಬಗ್ಗೆ ಮಾಹಿತಿ ನೀಡುತ್ತಾ ಸಾರ್ವಜನಿಕವಾಗಿ ಇರುತ್ತೇನೆ. ಆದರೆ ಅದಕ್ಕೋಸ್ಕರ ಕುಟುಂಬವನ್ನೂ ಕ್ಯಾಮೆರಾ ಮುಂದೆ ತರಬೇಕೆಂಬ ನಿಯಮವಿಲ್ಲ. ನೀವು ಕೇಳಿದ್ದರಿಂದ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ. ಮುಂದಿನ ದಿನಗಳಲ್ಲಿ ಯಾವುದಾದರೂ ಸಮಾರಂಭಗಳಲ್ಲಿ ಅವರನ್ನು ನೋಡೇ ನೋಡುತ್ತೀರಿ, ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ ವರ್ತೂರು ಸಂತೋಷ್ ಅವರು ತಿಳಿಸಿದ್ದಾರೆ.
ʻಹಳ್ಳಿಕಾರ್ ಒಡೆಯʼ ಸಂತೋಷ್
ರೈತನಾಗಿರುವ ವರ್ತೂರು ಸಂತೋಷ್ 'ಬಿಗ್ ಬಾಸ್ ಕನ್ನಡ ಸೀಸನ್ 10' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ನಾಟಿ ಹಸುಗಳ ತಳಿ ಸಂರಕ್ಷಣೆ ಮತ್ತು ಪ್ರಾಣಿ ಪ್ರೀತಿಯಿಂದಾಗಿ ಇವರು ಇಡೀ ಕರ್ನಾಟಕದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬೆಂಗಳೂರಿನ ಹೊರವಲಯದ ವರ್ತೂರು ಮೂಲದ ಇವರು, 'ಹಳ್ಳಿಕಾರ್' ತಳಿಗಳ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ʻಹಳ್ಳಿಕಾರ್ ಒಡೆಯʼ ಎಂದು ಕರೆಯುತ್ತಾರೆ.