ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ನಾವು ಮದುವೆ ಆಗ್ತಿದ್ದೀವಿ..’: ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ʻಬಿಗ್ ಬಾಸ್ʼ ಖ್ಯಾತಿಯ ಸ್ಪಂದನಾ ಸೋಮಣ್ಣ!

Spandana Somanna Marriage: ಬಿಗ್‌ ಬಾಸ್‌ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ತಮ್ಮ ಮದುವೆ ಕುರಿತ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಥ್ಲೀಟ್ ವರುಣ್ ಮುನಿರಾಜು ಅವರೊಂದಿಗೆ ಸಪ್ತಪದಿ ತುಳಿಯುತ್ತಿರುವುದಾಗಿ ತಿಳಿಸಿರುವ ಸ್ಪಂದನಾ, ಭಾವಿ ಪತಿಯ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿರುವ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಹಾರೈಸುತ್ತಿದ್ದಾರೆ.

ಕಿರುತೆರೆಯ ಖ್ಯಾತ ನಟಿ ಹಾಗೂ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ಸ್ಪರ್ಧಿ ಸ್ಪಂದನಾ ಸೋಮಣ್ಣ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಇವರ ಮದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಅಧಿಕೃತ ತೆರೆ ಬಿದ್ದಿದ್ದು, ತಾವು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಚಾರವನ್ನು ಸ್ವತಃ ಸ್ಪಂದನಾ ಬಹಿರಂಗಪಡಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವಿ ಪತಿಯ ಜೊತೆಗಿರುವ ಸುಂದರ ಚಿತ್ರಗಳನ್ನು ಹಂಚಿಕೊಂಡಿರುವ ಸ್ಪಂದನಾ, "ನಾವು ಮದುವೆ ಆಗುತ್ತಿದ್ದೇವೆ" ಎಂಬ ಕ್ಯಾಪ್ಷನ್ ನೀಡುವ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಇದರೊಂದಿಗೆ ನಟಿಯ ಕೈಹಿಡಿಯಲಿರುವ ಆ ಹುಡುಗ ಯಾರೆಂಬ ಕುತೂಹಲಕ್ಕೂ ಸ್ಪಷ್ಟ ಉತ್ತರ ಸಿಕ್ಕಿದೆ.

ವರುಣ್ ಮುನಿರಾಜು ಜೊತೆ ಸಪ್ತಪದಿ

ಸ್ಪಂದನಾ ಸೋಮಣ್ಣ ಅವರನ್ನು ವರಿಸಲಿರುವ ಆ ಲಕ್ಕಿ ಹುಡುಗನ ಹೆಸರು ವರುಣ್ ಮುನಿರಾಜು. ವರುಣ್ ಅವರ ವೃತ್ತಿ ಹಾಗೂ ಕುಟುಂಬದ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲವಾದರೂ, ಅವರು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಅಥ್ಲೀಟ್ ಎಂದು ಬರೆದುಕೊಂಡಿದ್ದಾರೆ.

ನನ್ನ ಅತಿ ದೊಡ್ಡ ಬೆಂಬಲಿಗನಾಗಿ ನಿಂತಿದ್ದೀಯ

"ನಾವಿಬ್ಬರೂ ಬದುಕಿನ ದಾರಿ ಹುಡುಕುತ್ತಿದ್ದ ಆ ದಿನಗಳಲ್ಲಿ ಭೇಟಿಯಾಗಿದ್ದು ನನಗೆ ಇಂದಿಗೂ ನೆನಪಿದೆ, ಕೈಯಲ್ಲಿ ಕೆಲಸವಿರಲಿಲ್ಲ, ದುಡ್ಡಿರಲಿಲ್ಲ, ಜೀವನ ಎಲ್ಲಿಗೆ ಕರೆದೊಯ್ಯುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ; ಆದರೂ ಪರಸ್ಪರ ಒಬ್ಬರಿಗೊಬ್ಬರು ಜೊತೆಯಾಗಿದ್ದೆವು. ನನ್ನ ಆಡಿಷನ್‌ಗಳಿಗೆ ನೀನು ಜೊತೆಯಾಗಿ ಬಂದೆ, ಹೊಸ ಹೊಸ ಪ್ರಯತ್ನಗಳನ್ನು ಮಾಡಲು ಹುರಿದುಂಬಿಸಿದೆ, ನನ್ನ ಮೇಲೆಯೇ ನನಗೆ ನಂಬಿಕೆ ಇಲ್ಲದಿದ್ದಾಗಲೂ ಪ್ರತಿ ಹೆಜ್ಜೆಯಲ್ಲೂ ನನ್ನನ್ನು ನಂಬಿದೆ. ಇಷ್ಟು ವರ್ಷಗಳಲ್ಲಿ ನೀನು ನನ್ನ ಶಕ್ತಿಯಾಗಿ, ನನ್ನ ಅತಿ ದೊಡ್ಡ ಬೆಂಬಲಿಗನಾಗಿ ನಿಂತಿದ್ದೀಯ"

"ನಾವು ಒಟ್ಟಿಗೆ ಹಂಚಿಕೊಂಡ, ಕಷ್ಟ-ಸುಖಗಳಲ್ಲಿ ಬೆಳೆದು ಬಂದ ಈ ಎಲ್ಲ ಕ್ಷಣಗಳ ನಂತರ, ನಾವಿಬ್ಬರೂ ಒಬ್ಬರನ್ನೊಬ್ಬರು ಗಂಡ-ಹೆಂಡತಿ ಎಂದು ಕರೆದುಕೊಳ್ಳುವ ಕಾಲ ಬಂದಿರುವುದಕ್ಕೆ ನನಗೆ ಎಲ್ಲಿಲ್ಲದ ಸಂಭ್ರಮ. ನನ್ನ ಬದುಕಿನಲ್ಲೇ ಅತ್ಯಂತ ಸುಲಭವಾಗಿ ಹೇಳಿದ YES ಇದು! ಯಾವಾಗಲೂ ನನ್ನ ಜೊತೆಗಿದ್ದಿದ್ದಕ್ಕೆ, ನನ್ನನ್ನು ನಂಬಿದ್ದಕ್ಕೆ ಮತ್ತು ನನ್ನನ್ನು ಆರಿಸಿಕೊಂಡಿದ್ದಕ್ಕೆ ಧನ್ಯವಾದಗಳು. ನಮ್ಮ ಮುಂದಿನ ಅಧ್ಯಾಯಕ್ಕೆ ಹಾಗೂ ಎಂದೆಂದಿಗೂ ಒಂದಾಗಿರುವ ಈ ಪಯಣಕ್ಕೆ ಶುಭವಾಗಲಿ. ಐ ಲವ್ ಯು ವರುಣ್.. ನಿನ್ನನ್ನು ನನ್ನ ಗಂಡ ಎಂದು ಕರೆಯಲು ಕಾತರದಿಂದ ಕಾಯುತ್ತಿದ್ದೇನೆ" ಎಂದು ಸ್ಪಂದನಾ ಸೋಮಣ್ಣ ಬರೆದುಕೊಂಡಿದ್ದಾರೆ.

ಸ್ಪಂದನಾ ಸೋಮಣ್ಣ ಹಂಚಿಕೊಂಡ ಪೋಸ್ಟ್



ಪ್ಯಾರಿಸ್‌ನಲ್ಲಿ ಶುರುವಾಗಿದ್ದ ಸಸ್ಪೆನ್ಸ್

ಇತ್ತೀಚೆಗಷ್ಟೇ ಪ್ಯಾರಿಸ್ ಪ್ರವಾಸ ಕೈಗೊಂಡಿದ್ದ ಸ್ಪಂದನಾ, ವಿಶ್ವವಿಖ್ಯಾತ ಐಫೆಲ್ ಟವರ್ ಮುಂಭಾಗ ಭಾವಿ ಪತಿಯ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆ ಫೋಟೋಗಳಲ್ಲಿ ಹುಡುಗನ ಮುಖವನ್ನು ಗೌಪ್ಯವಾಗಿಡುವ ಮೂಲಕ ದೊಡ್ಡ ಸಸ್ಪೆನ್ಸ್ ಸೃಷ್ಟಿಸಿದ್ದರು. ಇದನ್ನು ಕಂಡ ನೆಟ್ಟಿಗರು ಹಾಗೂ ಅಭಿಮಾನಿಗಳು, "ಯಾರಪ್ಪಾ ಆ ಹುಡುಗ?" ಎಂದು ಪತ್ತೆ ಹಚ್ಚುವ ಕಾಯಕಕ್ಕೆ ಇಳಿದಿದ್ದರು.

Spandana Somanna: ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ; ಫೋಟೋ ವೈರಲ್‌

ಸೂರಜ್ ಜೊತೆಗಿನ ಗಾಸಿಪ್‌ಗೆ ಬ್ರೇಕ್

ಈ ಸಸ್ಪೆನ್ಸ್‌ನ ನಡುವೆ, ಕೆಲ ನೆಟ್ಟಿಗರು ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಸೂರಜ್ ಅವರೇ ಸ್ಪಂದನಾ ವರಿಸಲಿರುವ ವ್ಯಕ್ತಿ ಎಂದು ಊಹಿಸಿ, ಸೂರಜ್ ಮತ್ತು ಸ್ಪಂದನಾ ಫೋಟೋಗಳನ್ನು ಎಡಿಟ್ ಮಾಡಿ ಭರ್ಜರಿಯಾಗಿ ವೈರಲ್ ಮಾಡಿದ್ದರು. ಈ ಬೆಳವಣಿಗೆಗೆ ಸ್ವತಃ ಸ್ಪಷ್ಟನೆ ನೀಡಿದ್ದ ಸ್ಪಂದನಾ, "ಪಾಪ, ಸೂರಜ್ ಫೋಟೋಗಳನ್ನು ಎಡಿಟ್‌ ಮಾಡಿ ಅವರಿಗೆ ಕಿರಿಕಿರಿ ಉಂಟುಮಾಡುತ್ತಿದ್ದೀರಿ. ನಾನು ಮದುವೆಯಾಗುತ್ತಿರುವ ಹುಡುಗ ಸೂರಜ್ ಅಂತೂ ಅಲ್ಲವೇ ಅಲ್ಲ" ಎಂದು ಗಾಸಿಪ್‌ಗೆ ಖಡಕ್ ಆಗಿಯೇ ಬ್ರೇಕ್ ಹಾಕಿದ್ದರು.

ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಪೂರ್ಣ ವಿವರ

ಮದುವೆಯ ಬಗ್ಗೆ ಮಾತನಾಡಿದ್ದ ಸ್ಪಂದನಾ, ನಿಶ್ಚಿತಾರ್ಥದ ದಿನಾಂಕ, ಮದುವೆಯ ಶುಭ ಮುಹೂರ್ತ, ಶಾಪಿಂಗ್ ಸೇರಿದಂತೆ ಪ್ರತಿಯೊಂದು ವಿಶೇಷ ಕ್ಷಣಗಳನ್ನು ಹಾಗೂ ಭಾವಿ ಪತಿಯ ವಿಸ್ತೃತ ಪರಿಚಯವನ್ನು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಹಂತಹಂತವಾಗಿ ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಸದ್ಯ ತಮ್ಮ ನೆಚ್ಚಿನ ನಟಿಯ ಹೊಸ ಜೀವನದ ಹೆಜ್ಜೆಗೆ ಅಭಿಮಾನಿಗಳು ಮತ್ತು ಕಿರುತೆರೆ ಆಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.