ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ‘ಅಲ್ಲಿ ಶಾಂತಿ ಹಾಳು ಮಾಡೋರು, ಜಗಳ ಆಡೋರೇ ಬೇಕು’: ʻಬಿಗ್ ಬಾಸ್ʼ ಎಲಿಮಿನೇಷನ್ ಬಗ್ಗೆ ನಟ ಅವಿನಾಶ್ ಷಟಮರ್ಷಣ ನೇರ ಮಾತು!

Bigg Boss Kannada 13: ʻಬಿಗ್‌ ಬಾಸ್‌ʼ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿರುವ ನಟ ಅವಿನಾಶ್ ಷಟಮರ್ಷಣ, ಮನೆಯೊಳಗಿನ ವಾತಾವರಣ ಹಾಗೂ ಜನರ ಮನಸ್ಥಿತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೊಡ್ಮನೆಯಲ್ಲಿ ಶಾಂತಿ ಬಯಸುವವರಿಗಿಂತ ಕಿತ್ತಾಟ ಮಾಡುವವರಿಗೇ ಆದ್ಯತೆ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವ ನಟ ಅವಿನಾಶ್ ಷಟಮರ್ಷಣ, ತಮ್ಮ ಎಲಿಮಿನೇಷನ್‌ ಹಾಗೂ ದೊಡ್ಮನೆಯ ವಾತಾವರಣದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ವಿಶ್ವವಾಣಿ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗದಿರುವುದೇ ತಮ್ಮ ಎಲಿಮಿನೇಷನ್‌ಗೆ ಕಾರಣ ಎಂದು ಹೇಳುತ್ತಲೇ, ಬಿಗ್ ಬಾಸ್ ಮನೆಯೊಳಗಿನ ಆಟದ ವೈಖರಿ ಹಾಗೂ ಜನರ ಮನಸ್ಥಿತಿಯ ಬಗ್ಗೆ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ.

ಜಗತ್ತಿನಲ್ಲಿ ಯಾರೂ ಫ್ಲಾಪ್ ಆಗುತ್ತಿರಲಿಲ್ಲ

ತಾವು ಮನೆಯಿಂದ ಹೊರಬರಲು ಕಾರಣವೇನೆಂಬುದು ತಮಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ ಎಂದಿರುವ ಅವಿನಾಶ್, "ಜನರಿಗೆ ಸ್ಪರ್ಧಿಗಳ ಬಗ್ಗೆ ಒಂದಿಷ್ಟು ನಿರೀಕ್ಷೆಗಳಿರುತ್ತವೆ, ಬಹುಶಃ ಆ ನಿರೀಕ್ಷೆಗಳನ್ನು ನಾನು ಮುಟ್ಟಿಲ್ಲ ಅಷ್ಟೇ. ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಮೊದಲೇ ತಿಳಿದಿದ್ದರೆ ಜಗತ್ತಿನಲ್ಲಿ ಯಾರೂ ಫ್ಲಾಪ್ ಆಗುತ್ತಿರಲಿಲ್ಲ, ಪ್ರತಿಯೊಬ್ಬ ನಟನೂ ಸೂಪರ್‌ಸ್ಟಾರ್ ಆಗಿಯೇ ಉಳಿಯುತ್ತಿದ್ದ. ಜನರ ಮನಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಚಂದ್ರನನ್ನು ಗಮನಿಸಿದರೆ ಒಂದು ದಿನ ಪೂರ್ಣವಾಗಿರುತ್ತಾನೆ, ಮರುದಿನ ಮಾಯವಾಗುತ್ತಾನೆ, ಕೆಲವೊಮ್ಮೆ ಅರ್ಧ ಅಥವಾ ಮುಕ್ಕಾಲು ಭಾಗ ಕಾಣಿಸುತ್ತಾನೆ. ಚಂದ್ರ ನಮ್ಮ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಹಾಗೆ, ಮನುಷ್ಯ ಯಾವಾಗ ಹೇಗೆ ಬದಲಾಗುತ್ತಾನೆ ಮತ್ತು ಆತನ ನಿರೀಕ್ಷೆಗಳು ಏನೆಂಬುದನ್ನು ಡೀಕೋಡ್ ಮಾಡುವುದು ಅಸಾಧ್ಯದ ಮಾತು" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Bigg Boss Kannada 13: 'ಇನ್ಮೇಲೆ ಖಂಡಿತ ಬಿಗ್ ಬಾಸ್ ನೋಡಲ್ಲ'; ಅವಿನಾಶ್ ನೇರ ಹೇಳಿಕೆ

ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು

ದೊಡ್ಮನೆಯೊಳಗಿನ ತಮ್ಮ ಪಯಣದ ಬಗ್ಗೆ ಮಾತನಾಡಿದ ಅವರು, ಆರಂಭದಲ್ಲಿದ್ದ ಡಿಸ್‌ಕನೆಕ್ಷನ್ ಕ್ರಮೇಣ ಕರಗಿ ಆಟದ ಲಯ ಕಂಡುಕೊಳ್ಳುತ್ತಿದ್ದ ಹಂತದಲ್ಲೇ ಹೊರಬರಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. "ಮೊದಲ ವಾರ ಸಂಪರ್ಕ ಕಡಿತಗೊಂಡಂತೆ ಇದ್ದರೂ, ಎರಡನೇ ವಾರದಲ್ಲಿ ಮನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡೆ. ಮೂರನೇ ವಾರದಲ್ಲಿ ಸ್ಪರ್ಧಿಗಳ ವ್ಯಕ್ತಿತ್ವ ಹಾಗೂ ಅವರ ಮನಸ್ಥಿತಿಯನ್ನು ಅರಿಯಲು ಆರಂಭಿಸಿದೆ. ನನಗೆ ಆಟದ ಮೇಲೆ ಸಂಪೂರ್ಣ ಸ್ಪಷ್ಟತೆ ಸಿಕ್ಕಿ, ಲಯ ಕಂಡುಕೊಳ್ಳುತ್ತಿದ್ದ ಸಮಯದಲ್ಲೇ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡು ಹೊರಗೆ ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.

ಕಿತ್ತಾಟ ಮಾಡುವವರನ್ನೇ ಬಯಸುತ್ತಾರೆ

ಇದೇ ಸಂದರ್ಭದಲ್ಲಿ ದೊಡ್ಮನೆಯ ಸ್ಪರ್ಧಿಗಳು ಹಾಗೂ ಮನಸ್ಥಿತಿಯ ವಿರುದ್ಧ ವಾಗ್ದಾಳಿ ನಡೆಸಿದ ಅವಿನಾಶ್, "ಜನರಿಗೆ ಶಾಂತಿ ಸಾರುವವರು ಬೇಡ, ಶಾಂತಿ ಕೆಡಿಸುವವರೇ ಬೇಕು. ನನ್ನನ್ನು ಒಳಗೆ ಕಳುಹಿಸಿದ್ದೂ ಜನರೇ, ಹೊರಗೆ ಕಳುಹಿಸಿದ್ದೂ ಅವರೇ. ನನ್ನಲ್ಲಿ ಪ್ರಾಮಾಣಿಕತೆ, ಸಮಾಧಾನ ಮತ್ತು ತಿಳಿವಳಿಕೆ ಇತ್ತು. ಎಲ್ಲರನ್ನೂ ಪ್ರೀತಿಯಿಂದ ಒಗ್ಗೂಡಿಸಿಕೊಂಡು ಹೋಗುವ ಸ್ವಭಾವ ನನ್ನದಾಗಿತ್ತು. ಆದರೆ ಇಲ್ಲಿ ಹೊಂದಾಣಿಕೆಯಿಂದ ಇರುವವರು ಯಾರಿಗೂ ಬೇಡವಾಗಿದೆ. ಕೇವಲ ಗಲಾಟೆ, ಜಗಳ ಮತ್ತು ಕಿತ್ತಾಟ ಮಾಡುವವರನ್ನೇ ಬಯಸುತ್ತಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸೌಂದರ್ಯ ಒಂಥರಾ ಸೈಕೋ ಶಂಕರಿ, ಸಕತ್ತಾಗಿ ಉರಿಸ್ತಾಳೆ



ದಡ್ಡತನದಿಂದಾಗಿ ಇಂದು ಹೊರಬಂದಿದ್ದೇನೆ

ತಮ್ಮ ಎಲಿಮಿನೇಷನ್‌ಗೆ ಬೇರೆಯವರನ್ನು ದೂಷಿಸದೆ ಸ್ವಯಂ ಹೊಣೆ ಹೊತ್ತುಕೊಂಡ ನಟ, "ನಡೆದಿರುವ ಎಲ್ಲ ಬೆಳವಣಿಗೆಗಳಿಗೂ ನಾನೇ ಕಾರಣ ಹೊರತು ಬೇರೆ ಯಾರೂ ಅಲ್ಲ. ಸ್ವಲ್ಪ ಬುದ್ಧಿವಂತಿಕೆ ಬಳಸಿದ್ದರೆ ನಾನು ಮನೆಯೊಳಗೇ ಉಳಿದುಕೊಳ್ಳುತ್ತಿದ್ದೆ. ನನ್ನ ದಡ್ಡತನದಿಂದಾಗಿ ಇಂದು ಹೊರಬಂದಿದ್ದೇನೆ. ಮನೆಯವರೆಲ್ಲರಿಗೂ ಒಳ್ಳೆಯದಾಗಲಿ ಎಂದು ನಾನು ಧ್ವನಿ ಎತ್ತಿದ್ದೇ ದೊಡ್ಡ ತಪ್ಪಾಯಿತು. ಮನೆಯವರೆಲ್ಲ ಒಳಗಡೆ ಗುಳ್ಳೆನರಿಗಳಂತೆ ಆರಾಮಾಗಿದ್ದರು. ನಾನು ಅವರಿಗಾಗಿ ಧ್ವನಿ ಎತ್ತಿದ ಪರಿಣಾಮವನ್ನು ಈಗ ಅವರು ಅನುಭವಿಸುತ್ತಿದ್ದಾರೆ. ಮನೆಯ ಒಳಗಿದ್ದು ಯಾವ ಮನರಂಜನೆ ನೀಡಲು ಸಾಧ್ಯವಾಗಲಿಲ್ಲವೋ, ಅದನ್ನು ಹೊರಗಿದ್ದುಕೊಂಡೇ ಮಹಾಜನಗಳೇ ನಾಳೆಯಿಂದ ಯಥೇಚ್ಛವಾಗಿ ನೀಡುತ್ತೇನೆ, ಸ್ವೀಕರಿಸಿ. ಬಿಗ್‌ ಬಾಸ್‌ನಿಂದ ಹೊರಗೆ ಬಂದಿದ್ದಕ್ಕೆ ನನಗೆ ಯಾವುದೇ ರಿಗ್ರೇಟ್‌ ಇಲ್ಲ" ಎಂದು ಆತ್ಮವಿಶ್ವಾಸದಿಂದ ಮಾತು ಮುಗಿಸಿದ್ದಾರೆ.