‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭವಾದ ಮೊದಲ ದಿನದಿಂದಲೇ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಸೋಮವಾರದ ಸಂಚಿಕೆಯಲ್ಲಿ ವೀಕ್ಷಕರಿಗೆ ಹಾಗೂ ಮನೆಮಂದಿಗೆ ದೊಡ್ಡ ಶಾಕ್ ಎದುರಾಗಿದೆ. ವಾರಾಂತ್ಯದ ಕಿಚ್ಚನ ಪಂಚಾಯ್ತಿಯ ಬಿಸಿ ಇನ್ನೂ ಆರುವ ಮುನ್ನವೇ, ಕಿಚ್ಚ ಸುದೀಪ್ ಅವರು ಅನಿರೀಕ್ಷಿತವಾಗಿ ಟಿವಿ ಪರದೆಯ ಮೇಲೆ ಬಂದು ಅಸಲಿ ಬಾಂಬ್ ಸಿಡಿಸಿದ್ದಾರೆ.
ಅನಾರೋಗ್ಯದ ಕಾರಣದಿಂದ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಶೋನಿಂದ ಅರ್ಧದಲ್ಲೇ ನಿರ್ಗಮಿಸಿದ ಹಿನ್ನೆಲೆಯಲ್ಲಿ, ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದ್ದ ಮಂಜ ಹಾಗೂ ಕಿರಣ್ ಶಾಸ್ತ್ರಿ ಅವರನ್ನು ಕನ್‌ಫೆಷನ್ ರೂಮ್‌ನಿಂದ ನೇರವಾಗಿ ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು. ಆದರೆ, ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮನೆಯ ಕ್ಯಾಪ್ಟನ್ ಸಂಗೀತಾ ಭಟ್ ಅವರನ್ನು ಹೊರತುಪಡಿಸಿ, ಉಳಿದೆಲ್ಲಾ ಸದಸ್ಯರನ್ನು ನೇರವಾಗಿ ನಾಮಿನೇಟ್ ಮಾಡಿರುವುದಾಗಿ ಘೋಷಿಸಿದ ಸುದೀಪ್, ಈ ವಾರ ‘ಮಿಡ್-ವೀಕ್ ಎಲಿಮಿನೇಷನ್’ ನಡೆಯಲಿದೆ ಎಂಬ ಮಾಹಿತಿಯನ್ನು ನೀಡಿದರು.
ಬಚಾವ್ ಆಗೋ ಚಾನ್ಸ್ ಕಿತ್ತುಕೊಂಡ ಸ್ಪರ್ಧಿಗಳು
ದಿನದಿಂದ ದಿನಕ್ಕೆ ತೀವ್ರ ಕಾವು ಪಡೆದುಕೊಳ್ಳುತ್ತಿರುವ ಆಟದಲ್ಲಿ ಸ್ಪರ್ಧಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಈ ಪೈಕಿ ತಮ್ಮ ಅತಿಯಾದ ಮಾತು, ಎಲ್ಲರ ಜೊತೆಗಿನ ಅಸಭ್ಯ ವರ್ತನೆ ಹಾಗೂ ವಿವಾದಾತ್ಮಕ ಪದಬಳಕೆಯಿಂದ ಸ್ಪರ್ಧಿ ಮಂಜ ಇಡೀ ಮನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಿಡ್-ವೀಕ್ ಎಲಿಮಿನೇಷನ್‌ನಿಂದ ಬಚಾವ್ ಆಗಲು ಬಿಗ್ ಬಾಸ್ ನೀಡುವ ವಿಶೇಷ ಟಾಸ್ಕ್‌ಗಳಲ್ಲಿ ಗೆಲ್ಲುವುದು ಪ್ರತಿಯೊಬ್ಬ ಸ್ಪರ್ಧಿಗೂ ಅತ್ಯಗತ್ಯವಾಗಿದೆ.
ಈ ನಿಟ್ಟಿನಲ್ಲಿ ‘ಏರ್ ಡ್ರಾಪ್’ ಎಂಬ ಟಾಸ್ಕ್ ಅನ್ನು ಆಯೋಜಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಕಾವ್ಯ ಗೌಡ ಜಯಭೇರಿ ಬಾರಿಸಿದ್ದಾರೆ. ಆದರೆ, ಈ ಹೋರಾಟದಲ್ಲಿ ಒಬ್ಬ ಸದಸ್ಯನನ್ನು ಟಾಸ್ಕ್‌ನಿಂದ ನೇರವಾಗಿ ಹೊರಗಿಡುವ ಹಕ್ಕನ್ನು ಮನೆಮಂದಿಗೆ ಬಿಗ್ ಬಾಸ್ ನೀಡಿದಾಗ, ಇಡೀ ಮನೆಯ ಸದಸ್ಯರು ಒಗ್ಗಟ್ಟಾಗಿ ಮಂಜನನ್ನು ಆಟದಿಂದ ಹೊರದಬ್ಬುವ ನಿರ್ಧಾರ ಕೈಗೊಂಡರು.
ಮನೆಯಲ್ಲಿ ಉಳಿಯುವ ಯಾವ ಅರ್ಹತೆಯೂ ಮಂಜನಿಗಿಲ್ಲ
ಮಂಜ ಅವರನ್ನು ಟಾಸ್ಕ್‌ನಿಂದ ಹೊರಗಿಡಲು ಮನೆಯ ಪ್ರತಿಯೊಬ್ಬರೂ ಬಲವಾದ ಕಾರಣಗಳನ್ನೇ ಮುಂದಿಟ್ಟಿದ್ದಾರೆ. "ಮಂಜ ಬಳಸುವ ಭಾಷೆ ಸರಿಯಿಲ್ಲ. ಅವರ ಅಸಭ್ಯ ಪದಬಳಕೆಯಿಂದ ಮನೆಯ ನೆಮ್ಮದಿಯೇ ಹಾಳಾಗುತ್ತಿದೆ.
ಬೇರೆಯವರಿಗೆ ಗೌರವ ಕೊಟ್ಟು ಗೌರವ ಪಡೆಯುವುದನ್ನು ಅವರು ಮೊದಲು ಕಲಿಯಬೇಕು" ಎಂದು ಗಗನ್ ಚಿನ್ನಪ್ಪ ನೇರವಾಗಿಯೇ ಅಸಮಾಧಾನ ಹೊರಹಾಕಿದರು. ಇನ್ನು ಧನುಷ್ ಆಕ್ರೋಶ ವ್ಯಕ್ತಪಡಿಸಿ, "ಮಂಜನಿಗೆ ಎಷ್ಟೇ ಅವಕಾಶ ಕೊಟ್ಟರೂ ತಿದ್ದಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳನ್ನು ಕೆದಕಿ ನೋವು ಮಾಡುವುದೇ ಇವರ ಕೆಲಸ. ಇವರಿಗೆ ಈ ಮನೆಯಲ್ಲಿ ಉಳಿಯುವ ಯಾವ ಅರ್ಹತೆಯೂ ಇಲ್ಲ" ಎಂದು ಕಿಡಿಕಾರಿದರು.
ಮಂಜನಿಗೆ ದೊಡ್ಡ ಸಂಕಷ್ಟ!
ಜೊತೆಗೆ ಕಿರಣ್ ಶಾಸ್ತ್ರಿ ಮುಖಕ್ಕೆ ಹೊಡೆದಂತೆ, "ಇನ್ನೊಬ್ಬರ ಭಾವನೆ, ಬೇಡಿಕೆ ಹಾಗೂ ವಿಚಾರಧಾರೆಗಳನ್ನು ತುಳಿಯಲು ಹೊರಟ ಮೇಲೆ, ನಿನ್ನನ್ನು (ಮಂಜ) ಎಲ್ಲರೂ ಸೇರಿ ತುಳಿಯುವುದರಲ್ಲಿ ಯಾವ ತಪ್ಪೂ ಇಲ್ಲ" ಎಂದು ಮಾತಿನಲ್ಲೇ ಚಾಟಿ ಬೀಸಿದರು. ಕಾವ್ಯಾ ಹಾಗೂ ತಾಂಡವ್ ಕೂಡ, "ಮಂಜನಿಗೆ ಬೇರೆಯವರ ವ್ಯಕ್ತಿತ್ವ ಹರಣ ಮಾಡುವುದನ್ನು ಬಿಟ್ಟರೆ ಬೇರೇನೂ ಬರುವುದಿಲ್ಲ. ಇವರು ಬದಲಾಗುತ್ತಾರೆ ಎಂಬ ಭರವಸೆಯೇ ಹುಸಿಯಾಗಿದೆ" ಎಂದು ಧ್ವನಿಗೂಡಿಸಿದರು.
ಈ ಮೂಲಕ ಬಹುತೇಕ ಸದಸ್ಯರ ವಿರೋಧದಿಂದಾಗಿ ಟಾಸ್ಕ್ ಆಡುವ ಹಕ್ಕನ್ನೇ ಕಳೆದುಕೊಂಡಿರುವ ‘ಮಾಡ್ರನ್ ಮಹಾಕವಿ’ ಮಂಜ, ನೇರವಾಗಿ ಮಿಡ್-ವೀಕ್ ಎಲಿಮಿನೇಷನ್ ತೂಗುಗತ್ತಿಯ ಕೆಳಗೆ ಸಿಲುಕಿದ್ದಾರೆ. ಮನೆಯವರ ಕೆಂಗಣ್ಣಿಗೆ ಗುರಿಯಾಗಿರುವ ಮಂಜ ಇದರಿಂದ ಪಾರಾಗುತ್ತಾರಾ ಅಥವಾ ಮಿಡ್ ವೀಕ್ ಎಲಿಮಿನೇಷನ್‌ನಿಂದ ಹೊರಗೆ ಹೋಗುತ್ತಾರಾ ಎಂಬುದೇ ಸದ್ಯದ ಕುತೂಹಲ.