ʻಜನ ನಾಯಗನ್ʼ ಸಿನಿಮಾದಲ್ಲಿ ನಟಿಸಿ `ಕಾಮನ್‌ಮ್ಯಾನ್' ಮುಖವಾಡ ತೊಟ್ಟು ʻಬಿಗ್ ಬಾಸ್ʼ ಮನೆಗೆ ಧನುಷ್ ಮಂಜುನಾಥ್ ಬಂದಿದ್ದು ಸರಿಯೇ? ಗರಂ ಆದ ವೀಕ್ಷಕರು!
Bigg Boss Kannada 13: ‘ಅಗ್ನಿಪರೀಕ್ಷೆ’ ಆಡಿಷನ್ ಮೂಲಕ ಬಿಗ್ ಬಾಸ್ ಪ್ರವೇಶ ಪಡೆದ 14ನೇ ಸ್ಪರ್ಧಿ ಧನುಷ್ ಮಂಜುನಾಥ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಗಿನ್ನೆಸ್ ದಾಖಲೆ ಸೈಕ್ಲಿಸ್ಟ್ ಧನುಷ್, ‘ಜನ ನಾಯಗನ್’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿದ್ದರೂ ಕಾಮನ್ ಮ್ಯಾನ್ ಕೋಟಾದಡಿ ದೊಡ್ಮನೆ ಪ್ರವೇಶಿಸಿರುವುದು ವಿವಾದ ಸೃಷ್ಟಿಸಿದೆ.
-
'ಬಿಗ್ ಬಾಸ್ ಕನ್ನಡ ಸೀಸನ್ 13'ರ ಸ್ಪರ್ಧಿಯೊಬ್ಬರ ಸುತ್ತ ಭಾರಿ ವಿವಾದ ಸೃಷ್ಟಿಯಾಗಿದೆ. ಸಾಮಾನ್ಯ ಜನರ ವಿಭಾಗದ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಡಿಷನ್ ಪ್ರಕ್ರಿಯೆಯ ಮೂಲಕ 14ನೇ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ ಖ್ಯಾತ ಸೈಕ್ಲಿಸ್ಟ್ ಹಾಗೂ ಗಿನ್ನೆಸ್ ವಿಶ್ವ ದಾಖಲೆ ಬರೆದ ಧನುಷ್ ಮಂಜುನಾಥ್ ಅವರ ಆಯ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಧನುಷ್ ಸಾಮಾನ್ಯ ವ್ಯಕ್ತಿಯಲ್ಲ, ಬದಲಿಗೆ ಈಗಾಗಲೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ನಟ ಎನ್ನುವ ಸತ್ಯ ಮುನ್ನೆಲೆಗೆ ಬಂದಿದ್ದು, ವೀಕ್ಷಕರು ಮತ್ತು ನೆಟ್ಟಿಗರು ಇದನ್ನು ಪ್ರಶ್ನಿಸುತ್ತಿದ್ದಾರೆ.
ಧನುಷ್ ಕಾಮನ್ ಮ್ಯಾನ್ ಹೇಗಾಗುತ್ತಾರೆ?
ಧನುಷ್ ಮಂಜುನಾಥ್ ಕೇವಲ 245 ದಿನಗಳಲ್ಲಿ ಸುಮಾರು 24,000 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಿ ಇಡೀ ಭಾರತವನ್ನು ಸುತ್ತಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಅಸಾಧಾರಣ ಸಾಹಸಕ್ಕಾಗಿ ಅವರಿಗೆ 2025ರ ಪ್ರತಿಷ್ಠಿತ 'ನಾಡಪ್ರಭು ಕೆಂಪೇಗೌಡ ಪ್ರಶಸ್ತಿ'ಯ ಗೌರವವೂ ಲಭಿಸಿದೆ.
ಆದರೆ, ಇಷ್ಟೆಲ್ಲಾ ಸಾಧನೆ ಮಾಡಿದ ಧನುಷ್ ಅವರಿಗೆ ಸಾಮಾನ್ಯ ಜನರಿಗಾಗಿ ಮೀಸಲಾದ ಕೋಟಾದಡಿ ಪ್ರವೇಶಾವಕಾಶ ಕಲ್ಪಿಸಿದ್ದು ಮತ್ತು ಅವರು ತಮ್ಮ ನಟನಾ ಹಿನ್ನೆಲೆಯನ್ನು ಮರೆಮಾಚಿರುವುದು ಈಗ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಬಿಗ್ ಬಾಸ್ ತಂಡ ಸಾವಿರಾರು ಜನಸಾಮಾನ್ಯರ ಕನಸಿನಂತಿದ್ದ ‘ಅಗ್ನಿಪರೀಕ್ಷೆ’ಯನ್ನು ಆಯೋಜಿಸಿ, ಅಂತಿಮವಾಗಿ ಕಲಾವಿದನನ್ನೇ ‘ಕಾಮನ್‌ಮ್ಯಾನ್’ ಎಂದು ಪರಿಚಯಿಸಿ ಪ್ರೇಕ್ಷಕರಿಗೆ ಯಾಮಾರಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಜನ ನಾಯಗನ್ ಸಿನಿಮಾದಲ್ಲಿ ನಟಿಸಿದ್ದ ಧನುಷ್
'ಕಾಂತಾರ: ಚಾಪ್ಟರ್ 1'ರಲ್ಲಿ ನಟಿಸಿದ್ದ ಧನುಷ್
ಧನುಷ್ ಕೇವಲ ಸೈಕ್ಲಿಸ್ಟ್ ಮಾತ್ರವಲ್ಲದೆ, ರಂಗಭೂಮಿ ಕಲಾವಿದನಾಗಿ ಹಾಗೂ ಹಿರಿತೆರೆಯಲ್ಲಿ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಮತ್ತು ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಅವರು ನಟಿಸಿರುವ 'ಕಲ್ಯಾಣ' ಎಂಬ ಮ್ಯೂಸಿಕ್ ವಿಡಿಯೋ ಸಾಂಗ್ ಕೂಡ ಬಿಡುಗಡೆಯಾಗಿದೆ. ಧನುಷ್ ನಟಿಸಿರುವ ವಿಡಿಯೋ ಮತ್ತು ಫೋಟೋ ಪುರಾವೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಈ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನೆ ಮಾಡುತ್ತಿವೆ.
ಟ್ವಿಟರ್‌ನಲ್ಲಿ ಸಖತ್ ಸಾಕ್ಷಿಗಳ ಹುಡುಕಾಟ
This Dhanush is more dangerous than that manja & shastri 🤣
— Gani (@Gani_ganesh__) September 16, 2026
Bro fooled everyone & participated in agniparikshe as a commoner & now see how he Is playing @ColorsKannada u need to verify properly before accepting anyone's audition VT, he clearly cheated #BBK13 https://t.co/XePFtHT09i pic.twitter.com/lvQggmTnTe
ವೀಕ್ಷಕರು ಗರಂ!
"ಧನುಷ್ ಸಾಮಾನ್ಯ ವ್ಯಕ್ತಿಯಂತೆ ಮುಖವಾಡ ಧರಿಸಿ ‘ಅಗ್ನಿಪರೀಕ್ಷೆ’ಯ ಮೂಲಕ ದೊಡ್ಮನೆ ಪ್ರವೇಶಿಸಿ ಎಲ್ಲರನ್ನೂ ವಂಚಿಸಿದ್ದಾರೆ. ಯಾರದ್ದೇ ವಿಟಿ ವಿಡಿಯೋ ಪಡೆಯುವ ಮುನ್ನ ಬಿಗ್ ಬಾಸ್ ತಂಡವು ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕಿತ್ತು" ಎಂದು ವೀಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಒಂದು ಸಿನಿಮಾದಲ್ಲಿ ನಟಿಸಿದರೂ ಕಲಾವಿದನೇ ಆಗಿರುತ್ತಾರೆ; ಜಗ್ಗ ಮಮ್ಮಿ ಒಂದು ಸಿನಿಮಾದಲ್ಲಿ ನಟಿಸಿದ್ದರೂ ಅವರನ್ನು ಸೆಲೆಬ್ರಿಟಿ ಕೋಟಾದಲ್ಲೇ ಕರೆತರಲಾಗಿದೆ, ಹಾಗಿರುವಾಗ ಧನುಷ್ ಅವರನ್ನು ಸಾಮಾನ್ಯ ವ್ಯಕ್ತಿ ಎಂದು ಬಿಂಬಿಸಿದ್ದು ಎಷ್ಟು ಸರಿ?" ಎಂದು ನೆಟ್ಟಿಗರು ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ತಂಡ ಇದಕ್ಕೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.