ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss kannada 13) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯೊಳಗೆ ದಿನಗಳು ಕಳೆದಂತೆ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗುತ್ತಿದ್ದು, ಆಟದ ಕಾವು ಜೋರಾಗಿದೆ. ಈಗಾಗಲೇ ಶೇಕಡ 50ರಷ್ಟು ಆಟ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಯಾರು ಮನೆಯಿಂದ ಹೊರಹೋಗಲಿದ್ದಾರೆ, ಯಾರು ತಮ್ಮ ಆಟವನ್ನು ಮುಂದುವರಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
ಈ ನಡುವೆ ನವೆಂಬರ್ 1ರ ವಾರಾಂತ್ಯದ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಎದುರಲ್ಲೇ ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳ ಆಟದ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನೂ ಮಾಡಿಕೊಂಡಿದ್ದಾರೆ.
ಆಸಿಯಾ ಬಗ್ಗೆ ಸೌಂದರ್ಯ ಹೇಳಿದ್ದೇನು?
ಪ್ರೋಮೋದಲ್ಲಿ ಸೌಂದರ್ಯ ಅವರು ಆಸಿಯಾ ಅವರ ಆಟದ ಬಗ್ಗೆ ಮಾತನಾಡಿದ್ದಾರೆ. ಆಸಿಯಾ ಅವರು ಕೆಲವು ಸಂದರ್ಭಗಳಲ್ಲಿ ಭಾವನಾತ್ಮಕವಾಗಿ ಡೈವರ್ಟ್ ಆಗುತ್ತಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಾತು ಮನೆಯೊಳಗಿನ ಸ್ಪರ್ಧಿಗಳ ನಡುವಿನ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Bigg Boss Kannada 13: ಸಮುದಾಯವೊಂದನ್ನು ಹೀಯಾಳಿಸುವಂತಹ ಪದ ಬಳಕೆ; ಕ್ಷಮೆ ಕೇಳಿದ ಯಶಸ್
ಕಿರಣ್ಗೆ ಗಾನವಿ ಖಡಕ್ ಎಚ್ಚರಿಕೆ!
ಇನ್ನು ಕಿರಣ್ ಅವರ ವರ್ತನೆಯ ಬಗ್ಗೆ ಗಾನವಿ ನೇರವಾಗಿಯೇ ಮಾತನಾಡಿದ್ದಾರೆ. "ನಿನ್ನನ್ನು ನೀನು ಚೇಂಜ್ ಮಾಡಿಕೋ, ಇನ್ನೊಬ್ಬರನ್ನು ತುಳಿಯಬೇಡ. ಇದೇ ರೀತಿ ಮುಂದುವರಿದರೆ ಆದಷ್ಟು ಬೇಗ ಮನೆಯಿಂದ ಹೊರಗೆ ಹೋಗುತ್ತೀಯಾ" ಎಂದು ಎಚ್ಚರಿಕೆ ನೀಡಿದ್ದಾರೆ.
ಗಗನ್ ವಿರುದ್ಧ ಯಶಸ್ ಗರಂ!
ಇತ್ತ ಗಗನ್ ಅವರ ಮಾತಿನ ಶೈಲಿಯ ಬಗ್ಗೆ ಆಸಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಗನ್ ಒಂದೊಂದು ಸಲ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಯಶಸ್ ಕೂಡ ಗಗನ್ ವಿರುದ್ಧ ತಿರುಗೇಟು ನೀಡಿದ್ದಾರೆ. "ಮುಚ್ಕೊಂಡು ಕುತ್ಕೋ" ಎಂದಾಗ, "ಆಯ್ತು ಅಂತ ಸುಮ್ಮನೆ ಕೂರೋ ಅಷ್ಟು ನಾನು ಒಳ್ಳೆಯವನಲ್ಲ" ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳೊಂದಿಗೆ ಚರ್ಚಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದು, ಕೆಲವರ ನಡುವೆ ಮಾತಿನ ಚಕಮಕಿಯೂ ನಡೆದಿದೆ.
ಇದನ್ನೂ ಓದಿ: Bigg Boss Kannada 13: ಸೌಂದರ್ಯಾ ಶೆಟ್ಟಿ ವಿರುದ್ಧ ಪಕ್ಷಪಾತ ಆರೋಪ! ಸ್ಪಷ್ಟನೆ ನೀಡಿದ ಕಿಚ್ಚ
ಆಟದ ಅರ್ಧ ಭಾಗ ಮುಗಿದಿರುವ ಈ ಹಂತದಲ್ಲಿ ಸ್ಪರ್ಧಿಗಳ ನಿಜವಾದ ಆಟ, ಅವರ ವರ್ತನೆ ಮತ್ತು ತಂತ್ರಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಸುದೀಪ್ ಅವರು ಈ ಎಲ್ಲ ವಿಚಾರಗಳ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ? ಸ್ಪರ್ಧಿಗಳಿಗೆ ಯಾವ ಸಲಹೆ ನೀಡಲಿದ್ದಾರೆ? ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.