ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiccha Sudeep: ʻಬಿಗ್ ಬಾಸ್ ಕನ್ನಡ 13ʼ ಶೋ ಟೇಕಾಫ್ ಆಗೋದೇ ಡೌಟಾ? ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೊಟ್ಟ ಶಾಕಿಂಗ್‌ ನ್ಯೂಸ್‌ ಏನು?

ಬಿಗ್‌ ಬಾಸ್‌ ಕನ್ನಡ 13 ಶೋ ಸೆಪ್ಟೆಂಬರ್ 6ರಂದು ಆರಂಭವಾಗುವುದು ಅನುಮಾನಕ್ಕೆ ಕಾರಣವಾಗಿದೆ. ಬಿಗ್‌ ಬಾಸ್‌ ನಡೆಯುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಸಂಸ್ಥೆಯು ಹಳೆಯ ಪರಿಸರ ಉಲ್ಲಂಘನೆ ದಂಡ ಪಾವತಿಸಿಲ್ಲ. ಜೊತೆಗೆ ಎಸ್‌ಟಿಪಿ ನಿಯಮಗಳನ್ನು ಪಾಲಿಸದೆ ಕಾರ್ಯಕ್ರಮಕ್ಕೆ ಅಧಿಕೃತ ಅನುಮತಿ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ!

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ 13 ಆರಂಭಕ್ಕೂ ಮುನ್ನವೇ ಕಾನೂನು ಹಾಗೂ ಪರಿಸರ ತೊಡಕಿನಲ್ಲಿ ಸಿಲುಕಿದೆ. ನಿಗದಿಯಂತೆ ಸೆಪ್ಟೆಂಬರ್ 6ರಂದು ಗ್ರ್ಯಾಂಡ್ ಪ್ರೀಮಿಯರ್ ಪ್ರಸಾರವಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದ್ದು, ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಅವರ ಕಠಿಣ ನಿಲುವು ಆಯೋಜಕರಿಗೆ ನಡುಕ ಹುಟ್ಟಿಸಿದೆ.

ಬೆಂಗಳೂರಿನಲ್ಲಿ ನಡೆದ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಬಿಗ್ ಬಾಸ್ ಸೆಟ್ ಹೊಂದಿರುವ ಬಿಡದಿಯ 'ಜಾಲಿವುಡ್ ಸ್ಟುಡಿಯೋ'ಗೆ ಈವರೆಗೂ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಅನುಮತಿ ಇಲ್ಲ: ಸಚಿವರ ಖಡಕ್ ಸಂದೇಶ

"ಜಾಲಿವುಡ್ ಸ್ಟುಡಿಯೋ ಕಳೆದ ವರ್ಷದ ಪರಿಸರ ಉಲ್ಲಂಘನೆಯ ದಂಡವನ್ನೇ ಇನ್ನೂ ಪಾವತಿಸಿಲ್ಲ. ಜೊತೆಗೆ ತ್ಯಾಜ್ಯ ನೀರು ಶುದ್ಧೀಕರಣ ಘಟಕ (STP) ಅಳವಡಿಕೆ ಸೇರಿದಂತೆ ಅಗತ್ಯ ಪರಿಸರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ. ಈ ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು, ಬಾಕಿ ದಂಡ ಪಾವತಿಸದ ಹೊರತು ಬಿಗ್ ಬಾಸ್ ಕಾರ್ಯಕ್ರಮ ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ," ಎಂದು ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಇದಲ್ಲದೆ, ನಿಯಮ ಉಲ್ಲಂಘನೆ ಮುಂದುವರಿದರೆ ಕಠಿಣ ದಂಡ ವಿಧಿಸುವಂತೆ ಮತ್ತು ಮಂಡಳಿಯಿಂದ ಅಧಿಕೃತ ಒಪ್ಪಿಗೆ ಸಿಗುವ ಮುನ್ನ ಕಾರ್ಯಕ್ರಮ ನಡೆಸಲು ಅವಕಾಶ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಅರ್ಜಿಯನ್ನೇ ಸಲ್ಲಿಸದ ಆಯೋಜಕರು?

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳ ಪ್ರಕಾರ, ಇಂತಹ ಬೃಹತ್ ಕಾರ್ಯಕ್ರಮಗಳಿಗೆ ಮುಂಚಿತವಾಗಿಯೇ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಸಚಿವರು ನೀಡಿರುವ ಮಾಹಿತಿಯ ಪ್ರಕಾರ, ಬಿಗ್ ಬಾಸ್ ಆಯೋಜಕ ಸಂಸ್ಥೆಯು ಈ ಬಾರಿ ಕಾರ್ಯಕ್ರಮ ನಡೆಸಲು ಅಗತ್ಯವಿರುವ ಅನುಮತಿ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇನ್ನೂ ಅಧಿಕೃತವಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ, "ಅವರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಸಚಿವರು ತಿಳಿಸಿದ್ದಾರೆ.

ಮರುಕಳಿಸಿದ ಹಳೆ ವಿವಾದ

ʻಬಿಗ್ ಬಾಸ್ʼ ಸೆಟ್‌ಗೆ ಸಂಬಂಧಿಸಿದಂತೆ ಪರಿಸರ ವಿವಾದ ಎದುರಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಆವೃತ್ತಿಯಲ್ಲೂ ಎಸ್‌ಟಿಪಿ ನಿರ್ವಹಣೆ ಮತ್ತು ತ್ಯಾಜ್ಯ ನಿರ್ವಹಣೆಯ ಲೋಪಗಳ ಕಾರಣಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಲಿವುಡ್ ಸ್ಟುಡಿಯೋಗೆ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಆ ಲೋಪಗಳನ್ನು ಸಂಪೂರ್ಣವಾಗಿ ಸರಿಪಡಿಸಿಲ್ಲ ಎಂದು ಹೇಳಲಾಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯು ಭಾನುವಾರ (ಆ.30) ಸುದ್ದಿಗೋಷ್ಠಿ ನಡೆಸಿ ಸೀಸನ್ 13ರ ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡಿತ್ತು. ಆದರೆ, ಸೆಪ್ಟೆಂಬರ್ 6ರ ಪ್ರೀಮಿಯರ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಸರ್ಕಾರದ ಈ ಕಠಿಣ ನಿಲುವು ಆಯೋಜಕರಿಗೆ ಭಾರಿ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ತಕ್ಷಣವೇ ಬಾಕಿ ದಂಡ ಪಾವತಿಸಿ, ಪರಿಸರ ಇಲಾಖೆಯ ಷರತ್ತುಗಳನ್ನು ಪೂರೈಸಿ ಅನುಮತಿ ಪಡೆದುಕೊಳ್ಳುತ್ತದೆಯೇ? ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.