ಸಿನಿಮಾ: 418
ತಾರಾಗಣ: ಚೈತ್ರಾ ಜೆ ಆಚಾರ್, ರಮೇಶ್ ಇಂದಿರಾ, ಚರಣ್ ಲಕ್ಕರಾಜು, ಸೂರ್ಯ ರಾಜ್, ಶಶಾಂಕ್ ಪಾಟೀಲ್, ಶ್ರೀ ವೈಷ್ಣವ್, ಪ್ರೀತಿ ಪಾಡಗಲ ಮುಂತಾದವರು
ನಿರ್ದೇಶನ: ಕೀರ್ತನ್ ನಾಡಗೌಡ
ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್
ಸಂಗೀತ: ವೆಂಕಿ ಜಿ. ಜಿ
ಅವಧಿ: 2 ಗಂಟೆ 28 ನಿಮಿಷ
ರೇಟಿಂಗ್: 3/5
ಕನ್ನಡದ ಪ್ರಶಾಂತ್ ನೀಲ್ ಅವರ ಬಳಿ 'ಉಗ್ರಂ' ಚಿತ್ರದಿಂದಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿಕೊಂಡು ಬಂದವರು ಕೀರ್ತನ್ ನಾಡಗೌಡ. ಇದೀಗ ಅವರು ಸ್ವತಂತ್ರವಾಗಿ ಒಂದು ಹಾರರ್ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇವರು ಕನ್ನಡದವರಾಗಿದ್ದರೂ, ಮೊದಲ ಸಿನಿಮಾವನ್ನು ನಿರ್ದೇಶಿಸಿರುವುದು ತೆಲುಗಿನಲ್ಲಿ.
'ಮೈತ್ರಿ ಮೂವಿ ಮೇಕರ್ಸ್' ಸಂಸ್ಥೆಯ ನಿರ್ಮಾಣದಲ್ಲಿ ಕೀರ್ತನ್ ನಿರ್ದೇಶಿಸಿದ ಈ '418' ಸಿನಿಮಾ ತೆರೆಕಂಡಿದೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ಪ್ರಸ್ತುತಪಡಿಸಿರುವುದು ವಿಶೇಷ. ಚಿತ್ರತಂಡವು ಇದನ್ನು 'ಇದುವರೆಗಿನ ಅತ್ಯಂತ ಭಯಾನಕ ಸಿನಿಮಾ' ಎಂದು ಬಣ್ಣಿಸಿತ್ತು. ಹಾಗಾದರೆ, ಚಿತ್ರತಂಡ ಹೇಳಿದಂತೆಯೇ ಈ ಸಿನಿಮಾ ಮೂಡಿಬಂದಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.
'418' ಚಿತ್ರದ ಕಥೆ ಏನು?
ಕೋವಿಡ್-19 ಲಾಕ್‌ಡೌನ್‌ಗೂ ಮುನ್ನ ಕರ್ನಾಟಕದ ಕರಾವಳಿ ಭಾಗದ ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಅಲ್ಲಿನ ವಿದ್ಯಾರ್ಥಿಗಳಾದ ವಿವೇಕ್ (ಸೂರ್ಯ ರಾಜ್) ಮತ್ತು ರೋಹಿತ್ (ಚರಣ್ ಲಕ್ಕರಾಜು) ಹಾಸ್ಟೆಲ್‌ನಲ್ಲಿ ರೂಮ್‌ಮೇಟ್‌ಗಳಾಗುತ್ತಾರೆ. ಅವರಿಗೆ ಹಾಸ್ಟೆಲ್‌ನ 417ನೇ ಕೊಠಡಿಯನ್ನು ನೀಡಲಾಗುತ್ತದೆ. ಜೊತೆಗೆ ಒಂದು ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಲಾಗಿರುತ್ತದೆ; ಪಕ್ಕದ 418ನೇ ಕೊಠಡಿಯ ಬಾಗಿಲನ್ನು ಯಾವುದೇ ಕಾರಣಕ್ಕೂ ತೆರೆಯಬಾರದು, ಅದರೊಳಗೆ ಪ್ರವೇಶಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿರುತ್ತಾರೆ. ಇನ್ನೊಂದು ವಿಚಿತ್ರವೆಂದರೆ, ಈ ಹಾಸ್ಟೆಲ್ ಆವರಣದೊಳಗೆ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ; ಇದನ್ನು ಹಾಸ್ಟೆಲ್ ಆಡಳಿತ ಮಂಡಳಿಯು ಕಟ್ಟುನಿಟ್ಟಾಗಿ ಪಾಲಿಸುತ್ತಿರುತ್ತದೆ.
ಆದರೆ ಈ ಮಧ್ಯೆ ಪಕ್ಕದ ಕಟ್ಟಡದಲ್ಲಿ ಕ್ವಾರಂಟೈನ್‌ನಲ್ಲಿದ್ದ ಸಯೇಶಾ ಎಂಬ ಹುಡುಗಿಯ ಮೇಲೆ ರೋಹಿತ್‌ಗೆ ಪ್ರೀತಿ ಹುಟ್ಟುತ್ತದೆ. ಅತ್ತ ಮತ್ತೊಬ್ಬ ವಿದ್ಯಾರ್ಥಿ ವಿವೇಕ್‌ಗೆ ಕೊಠಡಿ ಸಂಖ್ಯೆ 418ಕ್ಕೆ ಸಂಬಂಧಿಸಿದ ನಿಗೂಢ ಶಕ್ತಿಯೊಂದು ಎದುರಾಗುತ್ತದೆ. ಅಲ್ಲಿಂದ ಕಥೆ ಭಯಾನಕ ತಿರುವು ಪಡೆದುಕೊಳ್ಳುತ್ತದೆ. ಅಷ್ಟಕ್ಕೂ ಆ ಕೊಠಡಿ ಸಂಖ್ಯೆ 418ರಲ್ಲಿ ಏನಿದೆ? ಅದಕ್ಕೆ ಬೀಗ ಹಾಕಿ, ಯಾರೂ ಹೋಗಬಾರದು ಎಂದು ಹೇಳಿರುವುದೇಕೆ? ರೋಹಿತ್ ಜೊತೆ ಪ್ರೀತಿಯಲ್ಲಿ ಬಿದ್ದ ಆ ಸಯೇಶಾ ಯಾರು? ಎಂಬಿತ್ಯಾದಿ ಕುತೂಹಲಗಳೊಂದಿಗೆ ಈ ಸಿನಿಮಾ ಸಾಗುತ್ತದೆ.
ಮೇಕಿಂಗ್ ಹೇಗಿದೆ?
ನಿರ್ದೇಶಕ ಕೀರ್ತನ್ ನಾಡಗೌಡ ಅವರು '418' ಚಿತ್ರದ ಮೂಲಕ ಹೊಸ ಮಾದರಿಯ ಹಾರರ್ ಕಥೆಯನ್ನೇನೂ ಹೇಳುವುದಕ್ಕೆ ಹೊರಟಿಲ್ಲ. ಬೀಗ ಹಾಕಿದ ಖಾಲಿ ಕೊಠಡಿ, ಅದನ್ನು ಯಾರೂ ತೆರೆಯಬೇಡಿ ಎಂಬ ಎಚ್ಚರಿಕೆ, ಆ ಖಾಲಿ ಕೋಣೆಗೊಂದು ಫ್ಲ್ಯಾಶ್‌ಬ್ಯಾಕ್.. ಇದೇ ಮಾದರಿಯ ಹಲವು ಕಥೆಗಳು ಈಗಾಗಲೇ ತೆರೆಮೇಲೆ ಬಂದು ಹೋಗಿವೆ. ಆದರೆ ಈ ಸಿನಿಮಾದಲ್ಲಿ ಗಮನ ಸೆಳೆಯುವುದು ಫ್ಲ್ಯಾಶ್‌ಬ್ಯಾಕ್‌ಗಾಗಿ ಆಯ್ಕೆ ಮಾಡಿಕೊಂಡಿರುವ ಕಥೆಯ ಎಳೆ. ಮೊದಲ 50 ನಿಮಿಷಗಳು ಕಥೆ ತೆರೆದುಕೊಳ್ಳುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕಾಲೇಜು ದೃಶ್ಯಗಳು, ರ‍್ಯಾಗಿಂಗ್, ವಿದ್ಯಾರ್ಥಿಗಳ ಸಂಭಾಷಣೆ ಮತ್ತು ರೋಹಿತ್-ಸಯೇಶಾಳ ಪ್ರೇಮಕಥೆ.. ಇವೆಲ್ಲವೂ ಕೊಂಚ ಎಳೆದಂತೆ ಭಾಸವಾಗುತ್ತವೆ.
ಯಾವಾಗ ಕಥೆಯೊಳಗೆ ಅತಿಮಾನುಷ ಶಕ್ತಿಯ ಪ್ರವೇಶ ಆಗುತ್ತದೆಯೋ, ಆಗ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಕಥಾಹಂದರವನ್ನು ವಿಸ್ತರಿಸಲು ನಿರ್ದೇಶಕ ಕೀರ್ತನ್ ಸಮಯ ತೆಗೆದುಕೊಂಡರೂ, ದೇವಿಕಾ ಪಾತ್ರದ ಪ್ರವೇಶದ ಬಳಿಕ ಸಾಗುವ ಕಥೆಯನ್ನು ರೋಚಕಗೊಳಿಸಿದ್ದಾರೆ. ದೇವಿಕಾಳ ಫ್ಲ್ಯಾಶ್‌ಬ್ಯಾಕ್ ಚಿತ್ರದ ಅತ್ಯಂತ ಆಕರ್ಷಕ ಅಂಶವಾಗಿದ್ದು, ಆ ಪಾತ್ರದಲ್ಲಿ ಚೈತ್ರಾ ಆಚಾರ್ ಅವರ ನಟನೆಯು ಚಿತ್ರಕ್ಕೊಂದು ತೂಕ ಹಾಗೂ ಭಯ ಹುಟ್ಟಿಸುವ ತೀವ್ರತೆಯನ್ನು ತಂದುಕೊಟ್ಟಿದೆ. ಆರಂಭದಲ್ಲಿ ಇದು ಹಾರರ್ ಕಥೆಯೆನಿಸಿದರೂ, ನಂತರ ಸೈಕಲಾಜಿಕಲ್ ಥ್ರಿಲ್ಲರ್ ಆಗಿ ಬದಲಾಗುತ್ತದೆ.
ಯಕ್ಷಗಾನದ ಅಂಶವು ಚಿತ್ರಕ್ಕೆ ಸ್ಥಳೀಯ ಹಾಗೂ ಪೌರಾಣಿಕ ಆಯಾಮವನ್ನು ಒದಗಿಸಿದ್ದು, ಈ ಸಾಂಸ್ಕೃತಿಕ ಹಿನ್ನೆಲೆಯು ಚಿತ್ರಕ್ಕೊಂದು ವಿಶಿಷ್ಟ ಶೈಲಿಯನ್ನು ತಂದುಕೊಟ್ಟಿದೆ. ಆದರೆ ಕ್ಲೈಮ್ಯಾಕ್ಸ್ ವೇಳೆಗೆ ನಿರ್ದೇಶಕರು ಕೊಂಚ ಗೊಂದಲಕ್ಕೆ ಬಿದ್ದಂತೆ ಕಾಣುತ್ತಾರೆ, ಜೊತೆಗೆ ಪ್ರೇಕ್ಷಕರನ್ನೂ ಗೊಂದಲಕ್ಕೆ ತಳ್ಳುತ್ತಾರೆ. ಆ ಭಾಗದ ಬರವಣಿಗೆಯನ್ನು ಮತ್ತಷ್ಟು ಮೊನಚು ಹಾಗೂ ಸಂಕ್ಷಿಪ್ತವಾಗಿ ರೂಪಿಸಿಕೊಂಡಿದ್ದರೆ ಕ್ಲೈಮ್ಯಾಕ್ಸ್ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಕೆಲವು ಕಡೆ ಬೆಚ್ಚಿಬೀಳಿಸುವ ದೃಶ್ಯಗಳನ್ನು ಹೊಂದಿರುವ ಸಿನಿಮಾ, ಹಲವೆಡೆ ನಿಧಾನಗತಿಯಲ್ಲಿ ಸಾಗುವುದೇ ಕೊಂಚ ಬೇಸರದ ವಿಷಯ. ಛಾಯಾಗ್ರಹಣ ಮತ್ತು ಕಲಾ ನಿರ್ದೇಶನ ಉತ್ತಮವಾಗಿವೆ. ಎಡಿಟಿಂಗ್ ಇನ್ನೂ ಸ್ವಲ್ಪ ಚುರುಕಾಗಿದ್ದರೆ ಚಿತ್ರಕ್ಕೆ ಮತ್ತಷ್ಟು ವೇಗ ಸಿಗುತ್ತಿತ್ತು. ಈ ಸಿನಿಮಾದ ಸೌಂಡ್ ಡಿಸೈನಿಂಗ್ ಅತ್ಯುತ್ತಮವಾಗಿ ಮೂಡಿಬಂದಿದೆ.
ಹಾರರ್ ಚಿತ್ರದಲ್ಲಿ ಚೈತ್ರಾ ಆಚಾರ್ ಮಿಂಚಿಂಗ್
ನಟಿ ಚೈತ್ರಾ ಆಚಾರ್ ಅವರು ಈ ಚಿತ್ರದ ಅತಿ ದೊಡ್ಡ ಶಕ್ತಿ ಎಂದರೆ ತಪ್ಪಿಲ್ಲ. ದೇವಿಕಾ ಪಾತ್ರದಲ್ಲಿ ಅವರು ಮನಮುಟ್ಟುವಂತೆ ನಟಿಸಿದ್ದು, ಪ್ರಮುಖ ದೃಶ್ಯಗಳಲ್ಲಿ ತಮ್ಮ ಕಣ್ಣೋಟ ಹಾಗೂ ಮುಖಭಾವಗಳ ಮೂಲಕವೇ ಬೆಚ್ಚಿಬೀಳಿಸುತ್ತಾರೆ. ಅವರಿಗೆ ತೆಲುಗಿನಲ್ಲಿ ಈ ಸಿನಿಮಾ ದೊಡ್ಡ ಮೈಲೇಜ್ ತಂದುಕೊಡುವುದರಲ್ಲಿ ಅನುಮಾನವಿಲ್ಲ. ಕನ್ನಡದ ಮತ್ತೊಬ್ಬ ನಟ ರಮೇಶ್ ಇಂದಿರಾ ಅವರು ಮನಶ್ಶಾಸ್ತ್ರಜ್ಞನ ಪಾತ್ರಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದಾರೆ. ವಿದ್ಯಾರ್ಥಿಗಳಾಗಿ ವಿವೇಕ್- ಚರಣ್ ಲಕ್ಕರಾಜು ಗಮನ ಸೆಳೆಯುತ್ತಾರೆ. ಪ್ರೀತಿ ಪಗಡಾಲ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ದೇವಿಕಾಳ ಪತಿಯಾಗಿ ಶ್ರೀಕಾಂತ್ ಗಣೇಶ್ ಇಷ್ಟವಾಗುತ್ತಾರೆ.